ಮೈಸೂರು: ಸರ್ಕಾರದ ಮಾದರಿಯಲ್ಲಿ ಟಿ.ಎಸ್. ಸುಬ್ಬಣ್ಣ ಶಾಲೆಗಳನ್ನು ತೆರೆದು ಸಾವಿರಾರು ಗ್ರಾಮೀಣರಿಗೆ ಶಿಕ್ಷಣ ನೀಡಿದ್ದಾರೆ. ಅಂತಹ ಸಂಸ್ಥೆಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ವಿದ್ಯಾರಣ್ಯಪುರಂನ ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ವಿದ್ಯಾಸಂಸ್ಥೆಯ ಆವರಣದಲ್ಲಿ ಬುಧವಾರ ಸುಬ್ಬಣ್ಣನವರ 32ನೇ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೈಸೂರು ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿಂದೆ ಉಳಿದಿದ್ದು, ಫಲಿತಾಂಶ ಸುಧಾರಣೆಗೆ ವಿಶೇಷ ತರಗತಿ ಸೇರಿದಂತೆ ಹಲವು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಸುಬ್ಬಣ್ಣ ಸಂಸ್ಥೆಯ ಶಾಲೆಗಳಲ್ಲಿಯೂ ವಿಶೇಷ ತರಗತಿಗಳ ಆಯೋಜನೆಗೆ ನೆರವು ನೀಡಲಾಗುವುದು. ಪ್ರತಿ ವರ್ಷ ಪ್ರತಿಭಾ ಪುರಸ್ಕಾರಕ್ಕೆ ವೈಯಕ್ತಿಕವಾಗಿ ಹಣಕಾಸಿನ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಸಿ. ರಾಜಣ್ಣ ಮಾತನಾಡಿ, ಸಮಾಜದ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದ ಸುಬ್ಬಣ್ಣ 1936ರಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಈ ವಿದ್ಯಾರ್ಥಿನಿಲಯ ಆರಂಭಿಸಿದರು. ಇಂದು ಈ ವಿದ್ಯಾಸಂಸ್ಥೆಯು 11 ಪ್ರೌಢಶಾಲೆಗಳ ಮೂಲಕ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಎಂದರು.
ವಿದ್ಯಾರಣ್ಯಪುರಂನ ವಸತಿ ನಿಲಯದ ನವೀಕರಣಕ್ಕೆ ₹2.4 ಕೋಟಿ ಅಗತ್ಯವಿದ್ದು, ರೋಟರಿ ಮಿಡ್ ಟೌನ್ ನೆರವಿನಿಂದ ಒಂದು ಭಾಗದ ನವೀಕರಣವಷ್ಟೇ ನಡೆದಿದೆ. ಶಾಲೆಗೆ ಸೇರಿದ ಜಾಗವನ್ನು ಈ ಹಿಂದೆ ಅಶೋಕಪುರಂ ಪೊಲೀಸ್ ಠಾಣೆಗೆ ನೀಡಲಾಗಿತ್ತು. ಈಗ ಅಲ್ಲಿಂದ ಠಾಣೆಯು ಬೇರೆಡೆಗೆ ಸ್ಥಳಾಂತರ ಆಗಿದ್ದು, ಜಾಗ ಪಾಳು ಬಿದ್ದಿದೆ. ಸಂಸ್ಥೆಯಿಂದ ಠಾಣೆಗೆ ಉಚಿತವಾಗಿ ನೀಡಿದ್ದ ಜಾಗವನ್ನು ಮರಳಿ ಕೊಡಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಸುಬ್ಬಣ್ಣರ ಕುರಿತು ನುಡಿನಮನ ಸಲ್ಲಿಸಿದ ನಿವೃತ್ತ ಪ್ರಾಧ್ಯಾಪಕ ಸದಾಶಿವ ಮೂರ್ತಿ ‘ಯಾವ ಮಹಾನುಭಾವರು ತಮ್ಮ ಇಡೀ ಬದುಕನ್ನು ಸಮಾಜಕ್ಕೆ ಸಮರ್ಪಿಸಿಕೊಂಡಿರುತ್ತಾರೋ ಅಂತಹವರ ಸ್ಮರಣೆ ಅತ್ಯಗತ್ಯ. ತಗಡೂರು ಗ್ರಾಮದವರಾದ ಸುಬ್ಬಣ್ಣ ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ಮಕ್ಕಳ ಶಿಕ್ಷಣಕ್ಕೆ ತಮ್ಮ ಬದುಕನ್ನು ಅರ್ಪಿಸಿಕೊಂಡ ಚೇತನ’ ಎಂದು ಬಣ್ಣಿಸಿದರು.
ಶಾಸಕ ಜಿ.ಟಿ. ದೇವೇಗೌಡ, ಜಿಲ್ಲಾ ಪರ್ತಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಮಾತನಾಡಿದರು. ಸುಬ್ಬಣ್ಣ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಎನ್. ನಿರಂಜನ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಬಸವೇಗೌಡ, ಖಜಾಂಚಿ ಹರೀಶ್, ಧರ್ಮದರ್ಶಿಗಳಾದ ಬಿ.ಸುವರ್ಣದೇವಿ, ಪಿ.ನಾಗರಾಜ ಮೂರ್ತಿ, ಎಚ್.ಎಂ. ವಸಂತ, ಎ.ಎಸ್. ಚಂದ್ರಶೇಖರ್, ಡಿ.ಜಿ. ಸೋಮಶೇಖರ್, ಪಾಲಿಕೆ ಸದಸ್ಯೆ ಶೋಭಾ ಸುನಿಲ್, ಮುಖಂಡರಾದ ಪುಷ್ಪಾ ಅಮರನಾಥ್, ಶಾಲೆಯ ಮುಖ್ಯಶಿಕ್ಷಕ ನಾಗೇಂದ್ರ ಪ್ರಸಾದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.