ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುತ್ತೂರು ಮಠದಿಂದ ವೈಚಾರಿಕ ಕ್ರಾಂತಿ: ಸಚಿವ ಸಿ.ಸಿ.ಪಾಟೀಲ

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಚಿವ ಸಿ.ಸಿ.ಪಾಟೀಲ
Last Updated 19 ಜನವರಿ 2023, 9:31 IST
ಅಕ್ಷರ ಗಾತ್ರ

ಮೈಸೂರು: ಸುತ್ತೂರು ಮಠವು ವೈಚಾರಿಕ ಕ್ರಾಂತಿಯಲ್ಲಿ ತೊಡಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.‌

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಗುರುವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್ ಸಂಕಷ್ಟದಿಂದಾಗಿ ಎರಡು ವರ್ಷ ಜನಜೀವನದ ಮೇಲೆ ಮಂಕು ಕವಿದಿತ್ತು. ದೇವರ ಕೃಪೆಯಿಂದಾಗಿ ಈಗ ಎಲ್ಲವೂ ಸುಧಾರಿಸಿದೆ. ಇದರಿಂದಾಗಿ ಜಾತ್ರೆಯೂ ಅದ್ಧೂರಿಯಾಗಿ ನಡೆಯುತ್ತಿದೆ. ಇಲ್ಲಿ ಅಂತರ್ಜಾತಿ ವಿವಾಹದ ಮೂಲಕ ಸಾಮಾಜಿಕ ಸಾಮರಸ್ಯದ ಸಂದೇಶ ಸಾರುತ್ತಿರುವುದು ಶ್ಲಾಘನೀಯವಾಗಿದೆ’ ಎಂದರು.

‘ಸುತ್ತೂರು ‌ಪವಿತ್ರ ಧರ್ಮಕ್ಷೇತ್ರವಾಗಿದ್ದು, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನೇಕ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಿರುವುದು ಮಾದರಿಯಾಗಿದೆ. ಧಾರ್ಮಿಕ, ಆರೋಗ್ಯ, ಶೈಕ್ಷಣಿಕ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಫಲಾಪೇಕ್ಷೆ ಬಯಸದೇ ಕೆಲಸ ಮಾಡುತ್ತಿರುವ ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಜಾತ್ರೆ ಎಂದರೆ ಮನರಂಜನೆ ಅಷ್ಟೇ ಅಲ್ಲ ಎನ್ನುವುದನ್ನು ತಿಳಿಸಿಕೊಡುವುದಕ್ಕಾಗಿ ಎಲ್ಲ ಜಾತಿ, ಧರ್ಮೀಯರಿಗೆ ವಿವಾಹವಾಗಲು ಅವಕಾಶ ಕಲ್ಪಿಸುವ ಮೂಲಕ ವೈಚಾರಿಕ ಕ್ರಾಂತಿಯನ್ನೂ ಇಲ್ಲಿ ಮಾಡಲಾಗುತ್ತಿದೆ’ ಎಂದು ಶ್ಲಾಘಿಸಿದರು.

‘ಸುತ್ತೂರು ಕ್ಷೇತ್ರವು ಸರ್ವಜನಾಂಗದ ಶಾಂತಿಯ ತೋಟವಾಗಿದೆ‌. ಇಲ್ಲಿನ ಚಟುವಟಿಕೆಗಳು ಎಲ್ಲರನ್ನೂ ಒಳಗೊಂಡಿರುವುದು ಮಾದರಿಯಾಗಿದೆ’ ಎಂದರು.

ಜೆ.ಕೆ.ಟೈರ್ಸ್‌ ಕಂಪನಿಯ ಉಪಾಧ್ಯಕ್ಷ ವುಪ್ಪು ಈಶ್ವರರಾವ್ ಮಾತನಾಡಿ, ‘ಭಾರತೀಯ ಸಂಸ್ಕೃತಿಯ ಉಳಿಸಿ ಬೆಳೆಸುವಲ್ಲಿ ಶ್ರೀಮಠದ ಕೊಡುಗೆ ಅಪಾರವಾಗಿದೆ. ಶಾಂತಿ- ನೆಮ್ಮದಿ ನೆಲೆಸುವಂತೆ ಮಾಡುವ ಕಾರ್ಯವು ಇಲ್ಲಿ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯವಾಗಿದೆ’ ಎಂದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ‘ಮದುವೆಗೆಳೆಂದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು ಎನ್ನುವ ಮನೋಭಾವ ಬಂದಿದೆ. ಇದರ ಬದಲಿಗೆ ಪವಿತ್ರವಾದ ಈ ಜಾಗದಲ್ಲಿ ಸರಳವಾಗಿ ಸಾಮೂಹಿಕ ವಿವಾಹ ನಡೆಸುತ್ತಿರುವುದು ದೊಡ್ಡ ಸಂಗತಿಯೇ ಆಗಿದೆ. ಇದರಿಂದಾಗಿ ನೂರಾರು ಕುಟುಂಬಗಳು ಸಾಲದ ಹೊರೆಯಿಂದ ಪಾರಾಗಿವೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ‘ಸುತ್ತೂರು ಜಾತ್ರೆ ನೋಡಲು ಎರಡು‌ ಕಣ್ಣುಗಳು ಸಾಲದು. ಈ ಮಠ ಮಾಡುತ್ತಿರುವ ದೇಶಸೇವೆಯು ಅಪಾರವಾದುದು’ ಎಂದರು.

‘ನವ ವಿವಾಹಿತರು ಜೋಡೆತ್ತುಗಳಂತೆ ಜೊತೆಯಲ್ಲಿ ಸಾಗಿ ಜೀವನ ನಡೆಸಬೇಕು’ ಎಂದು ತಿಳಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಬಿ.ಪ್ರಭುದೇವ ಮಾತನಾಡಿ, ‘ಸಾಮೂಹಿಕ ಹಾಗೂ ಸರಳ ವಿವಾಹದಿಂದ ರೈತ‌ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಸಂಕಷ್ಟದ ಈ ಸಮಯದಲ್ಲಿ ಇಂತಹ ಕಾರ್ಯ ಶ್ಲಾಘನೀಯವಾಗಿದೆ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಸರಳ– ಸಾಮೂಹಿಕ ವಿವಾಹಕ್ಕೆ ಎಲ್ಲರೂ ಆದ್ಯತೆ ನೀಡಬೇಕು. ವಿಜೃಂಭಣೆಯ ಮದುವೆಗಳ ಬದಲಿಗೆ ಸರಳ ಮದುವೆಗಳು ಎಲ್ಲರಿಗೂ ಸಹಕಾರಿಯಾಗಿವೆ. ಶ್ರೀಮಂತರೂ ಇದೇ ಹಾದಿಯಲ್ಲಿ ಸಾಗಬೇಕು’ ಎಂದು ಆಶಿಸಿದರು.

ಮಾನವ ಧರ್ಮ ಬಿತ್ತುತ್ತಿದೆ

ಸಾನ್ನಿಧ್ಯ ವಹಿಸಿದ್ದ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸುತ್ತೂರು ಮಠವೆಂದರೆ ಸರಳ ಹಾಗೂ ಸೌಜನ್ಯಕ್ಕೆ ಹೆಸರಾದುದು. ಮಾನವ ಧರ್ಮ ತತ್ವಗಳನ್ನು ಬಿತ್ತುವ ಅಪರೂಪದ ಸಮನ್ವಯವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಪದ್ಧತಿಗಳಿಲ್ಲ, ಪ್ರೀತಿಯ ‌ಪದ್ಧತಿ ಇರುವವರೆಲ್ಲರೂ ಈ‌ ಮಠಕ್ಕೆ ಬರಬಹುದಾಗಿದೆ’ ಎಂದರು.‌

‘ಸತಿ–ಪತಿಯಾದವರು ಇಬ್ಬರೂ ಸಮಾನರು ಎಂದು‌ ಜೀವನ ಸಾಗಿಸಬೇಕು’ ಎಂದು ತಿಳಿಸಿದರು.

ಆದಾಯ ತೆರಿಗೆ ಇಲಾಖೆಯ ಆಯುಕ್ತ ಸತೀಶ್, ಎಸ್ಪಿ ಸೀಮಾ‌ ಲಾಟ್ಕರ್ ಮಾತನಾಡಿದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೋಕೋಪಯೋಗಿ ಸಚಿವ ಸಿ.ಟಿ.ಪಾಟೀಲ ಮಾಂಗಲ್ಯ ವಿತರಿಸಿದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಜ್ಞಾವಿಧಿ ಬೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT