ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Teachers' Day: ರಾಮೇಗೌಡಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿ

Published : 5 ಸೆಪ್ಟೆಂಬರ್ 2024, 6:30 IST
Last Updated : 5 ಸೆಪ್ಟೆಂಬರ್ 2024, 6:30 IST
ಫಾಲೋ ಮಾಡಿ
Comments

ಹುಣಸೂರು: ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮೇಗೌಡ ಎ. 2024–25ನೇ ಶೈಕ್ಷಣಿಕ ಸಾಲಿನ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 4 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅವರು, ಆಡಳಿತಾತ್ಮಕ ವೈಖರಿ, ಕಾಲೇಜು ಅಭಿವೃದ್ಧಿಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಹಾಗೂ ದಾಖಲಾತಿ ಪ್ರಮಾಣ ಗಣನೀಯವಾಗಿ ಹೆಚ್ಚಳ ಮಾಡಿರುವುದನ್ನು ಪರಿಗಣಿಸಿ ಪ್ರಶಸ್ತಿಗೆ ಸರ್ಕಾರ ಆಯ್ಕೆ ಮಾಡಿದೆ. ರಾಮೇಗೌಡ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, 2020 ನವೆಂಬರ್‌ನಲ್ಲಿ ಹುಣಸೂರು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಪ್ರಾಂಶುಪಾಲರಾಗಿ ನಿಯೋಜ ನೆಗೊಂಡಿದ್ದು, ಆ ದಿನದಲ್ಲಿ ಕಾಲೇಜಿನಲ್ಲಿ ಮೂಲ ಸೌಕರ್ಯ ಕೊರತೆ ಕಾಡುತ್ತಿತ್ತು. ಇದಲ್ಲದೆ ದಾಖಲಾತಿ ಪ್ರಮಾಣ ಮತ್ತು ಫಲಿತಾಂಶ ಎರಡೂ ಕಡಿಮೆ ಇತ್ತು. ಹುಣಸೂರು ಉಪವಿಭಾಗದ ಎಚ್.ಡಿ.ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ದಾಖಲಾಗಿದ್ದರೂ ಸವಲತ್ತುಗಳ ಕೊರತೆ, ಓದುವ ವಾತಾವರಣ ಇಲ್ಲವಾಗಿತ್ತು ಎಂದು ತಿಳಿಸಿದರು.

ಕಾಲೇಜಿಗೆ 4 ಕೊಠಡಿ ಮಂಜೂರಾಗಿತ್ತು, ಸರ್ಕಾರ ಹಾಗೂ ಹಿಂದಿನ ಶಾಸಕ ಎಚ್.ಪಿ.ಮಂಜುನಾಥ್ ಅವರ ಬೆನ್ನುಹತ್ತಿ ಹೆಚ್ಚುವರಿ 6 ಕೊಠಡಿ ಮಂಜೂರಾತಿ ಪಡೆಯಲಾಯಿತು. ಜಿಲ್ಲಾಪಂಚಾಯಿತಿ ಆಡಳಿತ ಕಚೇರಿ ತೆರವುಗೊಳಿಸಿ, ಕಾಲೇಜು ಆಡಳಿತಾತ್ಮಕ ಕೊಠಡಿ ನಿರ್ಮಿಸಿಕೊಳ್ಳಲಾಯಿತು. ಕಾಲೇಜು ಆವರಣದಲ್ಲಿದ್ದ ಹಳೆ ಕಟ್ಟಡವನ್ನು ₹ 3 ಲಕ್ಷ ಅನುದಾನ ಬಳಸಿ ನವೀಕರಣಗೊಳಿಸಿ ವಿದ್ಯಾರ್ಥಿಗಳಿಗೆ ಸಭಾಂಗಣ ನಿರ್ಮಿಸಲಾಗಿದೆ ಎನ್ನುತ್ತಾರೆ ಅವರು.

ಶೌಚಾಲಯ: 900ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದ ಕಾಲೇಜಿನಲ್ಲಿ ಶೌಚಾಲಯದ ಕೊರತೆ ಮತ್ತು ನೀರಿನ ಸಮಸ್ಯೆ ಕಾಡುತ್ತಿತ್ತು. ಹೊಸ ಕಟ್ಟಡದಲ್ಲಿ ನೆಪಮಾತ್ರಕ್ಕೆ ಶೌಚಾಲಯವಿತ್ತಾದರೂ ಸವಲತ್ತುಗಳಿರಲಿಲ್ಲ. ಇನ್ಫೊಸಿಸ್‌ ಪ್ರತಿಷ್ಠಾನದಿಂದ ₹20 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಶೌಚಾಲಯ ನಿರ್ಮಾಣ ಮಾಡಲಾಯಿತು.

ಮೈಸೂರಿನ ನೋಟು ಮುದ್ರಣ ವಿಭಾಗದ ಡಿ.ಎನ್.ಪಿ.ಎಂ ವತಿಯಿಂದ ₹ 15 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಪ್ರಯೋಗಾಲಯ, ಹುಣಸೂರು ಪ್ಲೆವುಡ್ಸ್ ಕಂಪನಿಯಿಂದ ₹ 2 ಲಕ್ಷ ಮೌಲ್ಯದ ಪೋಡಿಯಂ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಶಾಸಕರ ನಿಧಿ ₹ 8 ಲಕ್ಷದಲ್ಲಿ ಜೀವಶಾಸ್ತ್ರ ವಿಭಾಗ ಜೀರ್ಣೋದ್ಧಾರ ಮತ್ತು ಸರ್ಕಾರದ ಅನುದಾನ ₹ 5 ಲಕ್ಷದಲ್ಲಿ ರಾಸಾಯನಿಕ ಮತ್ತು ಭೌತಶಾಸ್ತ್ರ ಪ್ರಯೋಗಾಲಯ ಅಭಿವೃದ್ಧಿಗೊಳಿಸಲಾಗಿದೆ ಎಂದರು.

ಫಲಿತಾಂಶ ಮತ್ತು ದಾಖಲೆ: 2020ರಲ್ಲಿ 955 ವಿದ್ಯಾರ್ಥಿಗಳಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಪರಿಣಾಮ ಬೀರಿದವು. ಫಲಿತಾಂಶದಲ್ಲಿ ಗಣನೀಯ ಏರಿಕೆ ಗಮನಿಸಿದ ವಿದ್ಯಾರ್ಥಿಗಳಲ್ಲಿ ಕಾಲಕ್ರಮೇಣ ವಿಶ್ವಾಸ ಮೂಡಿ ದಾಖಲಾತಿ ಪ್ರಮಾಣ ಏರುಗತಿಯಲ್ಲಿ ಸಾಗಿತು. 2024–25 ನೇ ಸಾಲಿನಲ್ಲಿ 1,250 ವಿದ್ಯಾರ್ಥಿಗಳು ಕಾಲೇಜಿನ 8 ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಸಾಲಿನ ಫಲಿತಾಂಶದಲ್ಲಿ ಗಣನೀಯ ಏರಿಕೆ ಕಂಡು ಶೇ 84 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.

ದಾಖಲಾತಿ ಪ್ರಮಾಣ ಏರಿಕೆ

ಉಪವಿಭಾಗದ ಮೂರು ತಾಲ್ಲೂಕಿನ ವಿವಿಧ ಹಾಡಿಗಳಿಂದ 100ಕ್ಕೂ ಹೆಚ್ಚು ಆದಿವಾಸಿ ವಿದ್ಯಾರ್ಥಿನಿಯರು ಕಾಲೇಜಿಗೆ ದಾಖಲಾಗಿ ವ್ಯಾಸಂಗ ನಡೆಸಿದ್ದಾರೆ. ಖಾಸಗಿ ಕಾಲೇಜುಗಳ ಸ್ಪರ್ಧೆಯ ಮಧ್ಯೆಯೂ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ದಾಖಲೆ ಪ್ರಮಾಣದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದ್ದು ಶಿಕ್ಷಕನಾಗಿ ತೃಪ್ತಿ ಸಿಕ್ಕಿದೆ ಎನ್ನುತ್ತಾರೆ ರಾಮೇಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT