ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಪಠ್ಯಪುಸ್ತಕ ಪೂರೈಕೆ ಮಾತ್ರ ಶೇ 63

ಮೇ 31ಕ್ಕೆ ಮಕ್ಕಳ ಸ್ವಾಗತಕ್ಕೆ ಶಾಲೆಗಳಲ್ಲಿ ತಯಾರಿ ಶುರು
Published 25 ಮೇ 2024, 7:59 IST
Last Updated 25 ಮೇ 2024, 7:59 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ‍ ಪ್ರೌಢಶಾಲೆಗಳ ಪ್ರಾರಂಭೋತ್ಸವದ ದಿನವೇ ಪಠ್ಯಪುಸ್ತಕಗಳ ವಿತರಣೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಆದರೆ, ಪೂರೈಕೆಯಾಗಿರುವುದು ಶೇ 63ರಷ್ಟು ಮಾತ್ರ.

2,236 ಸರ್ಕಾರಿ ಶಾಲೆಗಳಿಗೆ 30.5 ಲಕ್ಷ ಉಚಿತ ಪುಸ್ತಕಗಳಿಗೆ ಬೇಡಿಕೆಯಿದ್ದು, 19.64 ಲಕ್ಷ ಪುಸ್ತಕಗಳು ಪೂರೈಕೆಯಾಗಿವೆ. ಬಿಇಒಗಳಿಗೆ ತಲುಪಿರುವುದು 18.13 ಲಕ್ಷವಷ್ಟೇ. ಇನ್ನು ಖಾಸಗಿ ಶಾಲೆಗಳಿಗೆ 18.7 ಲಕ್ಷ ಪುಸ್ತಕಗಳ ಬೇಡಿಕೆಯಿದ್ದು, 11.74 ಲಕ್ಷ ಪೂರೈಕೆಯಾಗಿದೆ.

ಶಾಲೆಗಳಿಗೆ ಉಚಿತ ಪುಸ್ತಕಗಳು ತಲುಪಿರುವುದು ಶೇ 59.46 ಹಾಗೂ ಖಾಸಗಿ ಶಾಳೆಗಳಿಗಾಗಿ ಮಾರಾಟಕ್ಕೆ ಪೂರೈಕೆಯಾಗಿರುವುದು ಶೇ 60 ಮಾತ್ರ ಎಂದು ಇಲಾಖೆ ಅಂಕಿ– ಅಂಶಗಳು ಹೇಳಿವೆ.

ಮೇ 31ಕ್ಕೆ ಶಾಲೆಗಳು ಆರಂಭಗೊಳ್ಳಬೇಕಿದೆ. ಮೇ 29ಕ್ಕೆ ಶಾಲೆಗಳಲ್ಲಿ ಶಿಕ್ಷಕರು ಅಗತ್ಯ ಸಿದ್ಧತೆ ಕೈಗೊಳ್ಳಲಿದ್ದಾರೆ. ಈ ವೇಳೆಗೆ ಪಠ್ಯಪುಸ್ತಕಗಳು ತಲುಪಬೇಕಿತ್ತು. ಕಳೆದ ವರ್ಷವೂ ಶಾಲೆ ಆರಂಭವಾದರೂ ಪಠ್ಯಪುಸ್ತಕಗಳ ಕೊರತೆ ಉಂಟಾಗಿದ್ದರ ಆರೋಪವನ್ನು ಇಲಾಖೆಯು ಎದುರಿಸಿತ್ತು. ಈ ಬಾರಿಯೂ ಅದು ಮರುಕಳಿಸಿದೆ. ಪಠ್ಯಪುಸ್ತಕ ನಿರೀಕ್ಷೆಯಷ್ಟು ಪೂರೈಕೆಯಾಗಿಲ್ಲ ಎಂದು ಅಂಕಿ– ಅಂಶಗಳೇ ಹೇಳಿವೆ.

‘ವಾರದಲ್ಲಿಯೇ ತರಗತಿಗಳ ಆರಂಭವಿದೆ. ಮಕ್ಕಳನ್ನು ಸ್ವಾಗತಿಸುವ ದಿನವೇ ಅವರಿಗೆ ಅಗತ್ಯ ಪಠ್ಯಪುಸ್ತಕಗಳನ್ನು ಪೂರ್ಣ ಪ್ರಮಾಣದಲ್ಲಿ ವಿತರಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ತಾಲ್ಲೂಕುಗಳ ಉಗ್ರಾಣದಲ್ಲಿ ಪುಸ್ತಕ ಸಂಗ್ರಹಗೊಂಡಿವೆ. ಶಾಲಾರಂಭದ ವೇಳೆಗೆ ನಿರೀಕ್ಷಿತ ಗುರಿ ತಲುಪಲಿದ್ದೇವೆ’ ಎಂದು ಡಿಡಿಪಿಐ ಎಚ್‌.ಕೆ.ಪಾಂಡು ‘‍‍ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಪಠ್ಯ ಪುಸ್ತಕಗಳ ಜೊತೆಗೆ, ಶೂ–ಸಾಕ್ಸ್‌, ಸಮವಸ್ತ್ರ ಸರ್ಕಾರದಿಂದಲೇ ಉಚಿತವಾಗಿ ದೊರೆಯುತ್ತವೆ. ಜೂನ್‌ ಮೊದಲ ವಾರ ಇವುಗಳ ವಿತರಣೆಯನ್ನು ಮಾಡಲಾಗುವುದು’ ಎಂದೂ ಅವರು ಮಾಹಿತಿ ನೀಡಿದರು.

‘ಜಿಲ್ಲಾ ಶೈಕ್ಷಣಿಕ ವಲಯಗಳ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾಧಿಕಾರಿಗಳು ಶಾಲೆಗಳಿಗೆ ಪುಸ್ತಕಗಳ ಸರಬರಾಜಿಗೆ ಕ್ರಮವಹಿಸಿದ್ದಾರೆ. ಸಂಬಂಧಪಟ್ಟ ಶಿಕ್ಷಕರು ತರಗತಿವಾರು ಹಾಗೂ ವಿಭಾಗವಾರು ವಿತರಿಸಲು ಪುಸ್ತಕಗಳನ್ನು ಜೋಡಿಸಿಟ್ಟುಕೊಂಡಿದ್ದಾರೆ’ ಎಂದರು.

‘32 ಲಕ್ಷ ಪಠ್ಯಪುಸ್ತಕಗಳನ್ನು ನೀಡಿ  ಮಕ್ಕಳನ್ನು ಸ್ವಾಗತಿಸಲಾಗುವುದು. ತಿಂಗಳೊಳಗೆ ಸಮವಸ್ತ್ರ ನೀಡಲಾಗುವುದು. 6 ಹಾಗೂ 7ನೇ ತರಗತಿ ಹೆಣ್ಣು ಮಕ್ಕಳಿಗೂ ಪ್ರೌಢಶಾಲೆಯವರಂತೆಯೇ ಪಂಜಾಬಿ ಶೈಲಿಯ ಸಮವಸ್ತ್ರ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 3,446 ಶಾಲೆ

‘ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಸಮಾಜ ಕಲ್ಯಾಣ ಮತ್ತು ಬುಡಕಟ್ಟು ಇಲಾಖೆ ಅನುದಾನಿತ ಅನುದಾನರಹಿತ ಹಾಗೂ ಕೇಂದ್ರ ಸರ್ಕಾರ ಸೇರಿದಂತೆ ಒಟ್ಟು 3446 ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ’ ಎಂದು ಎಚ್‌.ಕೆ.ಪಾಂಡು ಹೇಳಿದರು.  ‘29ಕ್ಕೆ ಶಾಲಾವರಣ ಕೊಠಡಿ ಶೌಚಾಲಯ ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯ ಸಿದ್ಧತೆ ಮಾಡಿಕೊಳ್ಳಲು ಶಿಕ್ಷಕರಿಗೆ ಸೂಚಿಸಲಾಗಿದೆ. 30ರಂದು ಪೂರ್ವಭಾವಿ ಸಭೆ ನಡೆಸಬೇಕು. 31ಕ್ಕೆ ಶಾಲಾ ಪ್ರಾರಂಭೋತ್ಸವ ಇರಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT