ಮೈಸೂರು: ‘ಈಗ ನಿಜವಾದ ಸಂಸದರು ಎಷ್ಟು ಮಂದಿ ಇದ್ದಾರೆ? ಬಿಜೆಪಿಯಲ್ಲಿರುವುದು ಒಬ್ಬನೇ ಒಬ್ಬ. ಇನ್ನುಳಿದವರೆಲ್ಲ ಜೈ ಜೈ’ ಎಂದು ಲೇಖಕ ದೇವನೂರ ಮಹಾದೇವ ವ್ಯಂಗ್ಯವಾಡಿದರು.
ಮೈಸೂರು ವಿಶ್ವವಿದ್ಯಾಲಯದ ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣ ಕೇಂದ್ರದ ಅಂಬೇಡ್ಕರ್ ಪೀಠ ಮತ್ತು ಇಂಡಿಯನ್ ಪಾಲಿಟ್ ಫೋರಂ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಕ್ಷೇತ್ರ ಪುನರ್‌ವಿಂಗಡಣೆ: ಅಂತರರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್‌ನಲ್ಲಿ 2–3 ಮಂದಿ ಇರಬಹುದು; ಏಕೆಂದರೆ ಅಲ್ಲಿ ಭಿನ್ನಮತವಿದೆ. ಇತರ ಪಕ್ಷಗಳಲ್ಲಿ 2–3 ಜನ ಇರಬಹುದಷ್ಟೆ. ಉಳಿದವರೆಲ್ಲರೂ ಮಂದೆಯಂತೆ ವರ್ತಿಸುತ್ತಿದ್ದಾರೆ. ಇದಕ್ಕೇಕೆ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕು? ಸಂಸತ್ತಿನಲ್ಲಿ ಶಬ್ದಮಾಲಿನ್ಯ ಮಾಡಬೇಕಾ’ ಎಂದು ಕೇಳಿದರು.
‘ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚಿಸಿದರೆ ಕೇವಲ ಮೂರು ಮತ್ತೊಂದು ಹಿಂದಿ ಭಾಷೆಯ ರಾಜ್ಯಗಳಷ್ಟೆ ಕೂಡಿ ಕೇಂದ್ರದಲ್ಲಿ ಬಹುಮತ ಗಳಿಸಿಕೊಳ್ಳಬಹುದು. ಆಗ ಹಿಂದಿ ಭಾಷೆಯು ದೇಶದ ಉಳಿದೆಲ್ಲ ಶ್ರೀಮಂತ ಭಾಷೆಗಳ ಮೇಲೆ ಸವಾರಿ ಮಾಡೇ ಮಾಡುತ್ತದೆ. ಉತ್ತರ ಭಾರತ ಇಡೀ ಭಾರತವನ್ನು ಆಳಬಹುದು. ಆಗ ಇತರ ರಾಜ್ಯಗಳು ಸಾಮಂತ ರಾಜ್ಯಗಳಾಗುತ್ತವೆ. ಉತ್ತರದ ಹಿಂದಿ ಚಕ್ರವರ್ತಿಗೆ ಕಪ್ಪ ಕೊಡಬೇಕಾಗುತ್ತದೆ. ಆಗ ಭಾರತವು ಭಾರತವಾಗಿ ಉಳಿದಿರುವುದಿಲ್ಲ’ ಎಂದು ಪ್ರತಿಪಾದಿಸಿದರು.
‘ಭಾರತದ ಆರ್ಥಿಕ ನೀತಿಗಳು ಹೇಗಿವೆ ಎಂದರೆ, ಹುಲಿಗೆ ಹುಣ್ಣು ಬಂದ ಕಥೆಯಂತಿದೆ. ಹುಲಿಗೆ ಒಂದು ಗಾಯವಾಯಿತಂತೆ. ಅದು ಮತ್ತೊಂದು ಕಡೆ ಗಾಯ ಮಾಡಿಕೊಂಡು ಹುಣ್ಣನ್ನು ಅಲ್ಲಿಗೆ ನೆಟ್ಟಿತಂತೆ. ಭಾರತವೂ ಹೀಗೆಯೇ ಸಾಗುತ್ತಿದೆ. ರೋಗ ಲಕ್ಷಣಗಳಿಗೆ ಮದ್ದು ನೀಡುತ್ತಿದೆ, ರೋಗ ಮಾತ್ರ ಉಳಿದೇ ಇದೆ’ ಎಂದು ವಿಷಾದಿಸಿದರು.
‘ಪ್ರಾಕೃತಿಕ ಸಂಪತ್ತಿನ ಲೂಟಿ ನಿಲ್ಲಬೇಕು. ಸ್ವಾಯತ್ತ ಸಂಸ್ಥೆಗಳು ಹೆಚ್ಚು ಸ್ವಾಯತ್ತವಾಗಬೇಕು. ಸಾರ್ವಜನಿಕ ಸಂಪತ್ತು ಸಾರ್ವಜನಿಕವಾಗಿಯೇ ಉಳಿಯಬೇಕು. ಜೊತೆಗೆ ಸಾಮಾಜಿಕ ನ್ಯಾಯವೂ ನಡೆಯುತ್ತಿರಬೇಕು. ಇವು ಮಾತ್ರ ಭಾರತವನ್ನು ಕಾಪಾಡಬಲ್ಲವು. ರಾಜ್ಯಗಳ ನಡುವೆ ಅಸಮತೆ ಕಡಿಮೆಯಾಗಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.