ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಾ–ಕಾಲೇಜು ಬಳಿ ತಂಬಾಕು ಮಾರಬೇಡಿ

ನಿಯಮ ಉಲ್ಲಂಘಿಸಿದ್ದರೆ ಕಾನೂನು ಕ್ರಮ: ಎಡಿಸಿ ಶಿವರಾಜು ಎಚ್ಚರಿಕೆ
Published : 23 ಆಗಸ್ಟ್ 2024, 15:54 IST
Last Updated : 23 ಆಗಸ್ಟ್ 2024, 15:54 IST
ಫಾಲೋ ಮಾಡಿ
Comments

ಮೈಸೂರು: ‘ಶಾಲಾ-ಕಾಲೇಜಿನ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ಮಾರುವುದು ಕಂಡುಬಂದರೆ ಅಂಥ ವ್ಯಕ್ತಿ ಅಥವಾ ಅಂಗಡಿಯ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಶುಕ್ರವಾರ ನಡೆದ ‘ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜಿನ ಮಕ್ಕಳು ತಂಬಾಕು ಸೇವನೆಗೆ ಒಳಗಾಗುತ್ತಿದ್ದಾರೆ. ಸುತ್ತಮುತ್ತಲಿನ ಅಂಗಡಿಗಳವರು ಅಥವಾ ವ್ಯಕ್ತಿಗಳು ಯಾರಿಗೂ ತಿಳಿಯದಂತೆ ಮಾರಾಟ ಮಾಡುವುದೇ ಅದಕ್ಕೆ ಕಾರಣವಾಗಿದೆ. ಅವರು ಮಕ್ಕಳನ್ನು ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ. ಅಂಥವರನ್ನು ಗುರುತಿಸಿ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಅಧಿಕಾರಿಗಳು ಶಾಲಾ– ಕಾಲೇಜುಗಳಿಗೆ ಭೇಟಿ ನೀಡಿ ತಂಬಾಕು ಸೇವನೆಯ ಸಂಬಂಧ ಕಾರ್ಯಕ್ರಮ ರೂಪಿಸಿ ಜಾಗೃತಿ ಮೂಡಿಸಬೇಕು. ಇದನ್ನು ಅಧಿಕಾರಿಗಳು ನಿರ್ಲಕ್ಷಿಸಿದರೆ ಮುಂದೆ ನಮ್ಮ ಮಕ್ಕಳೇ ಚಟಕ್ಕೆ ಬಲಿಯಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇಂದಿನಿಂದಲೇ ನಿಯಮಬಾಹಿರ ತಂಬಾಕು ಮಾರಾಟ ಹಾಗೂ ಸೇವನೆ ತಡೆಗಟ್ಟಲು ಮುಂದಾಗಬೇಕು’ ಎಂದು ತಾಕೀತು ಮಾಡಿದರು.

‘ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿರುವಂತಹ ಅಂಗಡಿಯ ಪರವಾನಗಿ ರದ್ದುಪಡಿಸಿಬೇಕು. ಅಂಗಡಿ ಮಾಲೀಕನಿಗೆ ದಂಡ ವಿಧಿಸಬೇಕು. ಸಾರ್ವಜನಿಕವಾಗಿ ತಂಬಾಕು ಸೇವನೆ ಮಾಡುವವರಿಗೆ ದಂಡ ವಿಧಿಸಬೇಕು. ಇದೆಲ್ಲದರ ಬಗ್ಗೆ ಅರಿವು ಮೂಡಿಸಬೇಕು’ ಎಂದು ತಿಳಿಸಿದರು.

‘ಪ್ರಸ್ತುತ ಜಿಲ್ಲೆಯ ತಂಬಾಕು ಸೇವನೆಯ ಪ್ರಮಾಣದಲ್ಲಿ ನಾವು ನಿಯಂತ್ರಣದ ಹಂತದಲ್ಲಿದ್ದೇವೆ. ಮುಂದೆ ನಿರ್ಮೂಲನೆಯ ಹಂತ ತಲುಪಿ ಯುವ ಪೀಳಿಗೆ ಹಾಗೂ ಮಕ್ಕಳನ್ನು ತಂಬಾಕು ಸೇವನೆಯ ಚಟದಿಂದ ಬಿಡಿಸಬೇಕು’ ಎಂದರು.

‘ಯಾವುದೇ ತಂಬಾಕು ಕಂಪನಿಗಳು ತಮ್ಮ ಬ್ರಾಂಡ್ ಹಾಗೂ ಥೀಮ್‌ಗಳನ್ನು ಪ್ರಚಾರ ಮಾಡುವಂತಿಲ್ಲ. ಈಗಾಗಲೇ ಕೆಲವು ಶಾಪ್‌ಗಳಲ್ಲಿ ತಂಬಾಕು ಸಂಬಂಧಿಸಿದ ಜಾಹೀರಾತು ಇದ್ದರೆ ತಕ್ಷಣವೆ ತೆರವುಗೊಳಿಸಲು ಕ್ರಮ ವಹಿಸಬೇಕು. ಇದಕ್ಕಾಗಿ ಜಾರಿ ತಂಡದವರು ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.

ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಸವಿತಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT