ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು: ಹೆಚ್ಚಿದ ಮಳೆಯ ನಿರೀಕ್ಷೆ

ಸಿಂಗಲ್ ಬ್ಯಾರನ್‌ಗೆ 1806 ಕೆ.ಜಿ ನಿಗದಿಗೊಳಿಸಿದ ಮಂಡಳಿ
ಎಚ್‌.ಎಸ್.ಸಚ್ಚಿತ್
Published 8 ಮೇ 2024, 6:34 IST
Last Updated 8 ಮೇ 2024, 6:34 IST
ಅಕ್ಷರ ಗಾತ್ರ

ಹುಣಸೂರು: ವಾಣಿಜ್ಯ ಬೆಳೆ ತಂಬಾಕು ಬೇಸಾಯಕ್ಕೆ ಭೂಮಿ ಹದಗೊಳಿಸಿ ಆಕಾಶದತ್ತ ನೋಡುತ್ತಿರುವ ರೈತರಿಗೆ ಇತ್ತೀಚಿನ ಮಳೆ ಸಂತಸ ತಂದಿಲ್ಲ. ರೈತರು ಹೆಚ್ಚಿ ಮಳೆಯ ನಿರೀಕ್ಷೆಯಲ್ಲೇ ಇದ್ದಾರೆ. ಏಪ್ರಿಲ್ ಮತ್ತು ಮೇ ಮೊದಲ ವಾರದಲ್ಲಿ ಮಳೆ ನಿರೀಕ್ಷೆಯಲ್ಲಿಯೇ ಸಸಿ ಮಡಿಗಳನ್ನು ಬೆಳೆಸಿದ್ದು, ಪೋಷಣೆಗೆ ಹರಸಾಹಸ ಮಾಡುವಂತಾಗಿದೆ. ಕೊಳವೆ ಬಾವಿಯುಳ್ಳವರು ಅಲ್ಲಲ್ಲಿ ನಾಟಿ ಪ್ರಕ್ರಿಯೆ ಮುಗಿಸಿ ನಿರಾಸೆಗೊಂಡಿದ್ದಾರೆ.

ಹಳೆ ಮೈಸೂರು ಭಾಗದ ಪ್ರಮುಖ ವಾಣಿಜ್ಯ ಬೆಳೆ ವರ್ಜಿನಿಯ ತಂಬಾಕಿಗೆ ವಿಶ್ವದಾದ್ಯಂತ ಬಹು ಬೇಡಿಕೆ ಇದೆ. ಕಳೆದ ಸಾಲಿನಲ್ಲಿ ಇಳುವರಿ ಕುಸಿತದ ನಡುವೆ ಬಂಪರ್ ದರ ಸಿಕ್ಕಿದ್ದು, ಈ ಸಾಲಿನಲ್ಲಿ ಹೆಚ್ಚುವರಿ ಪ್ರದೇಶದಲ್ಲಿ ತಂಬಾಕು ಬೆಳೆಯಲು ಉತ್ಸುಕರಾಗಿದ್ದಾರೆ.

‘2024–25ನೇ ಸಾಲಿನಲ್ಲಿ ಅತಂತ್ರ ವಾತಾವರಣದ ನಡುವೆಯೇ ಬೆಳೆಗಾರರು ತಂಬಾಕು ಬೆಳೆಯುತ್ತಿದ್ದಾರೆ. ಮೂರು ವರ್ಷದ ಇಳುವರಿ ಸರಾಸರಿ ಗಮನದಲ್ಲಿಟ್ಟು ಈ ಸಾಲಿಗೆ ಮಂಡಳಿ ಸಿಂಗಲ್ ಬ್ಯಾರನ್ ಪರವಾನಗಿ ಹೊಂದಿರುವ ರೈತರಿಗೆ ಹೆಚ್ಚುವರಿ 1ಎಕರೆ 25 ಗುಂಟೆ ಸೇರಿದಂತೆ ಒಟ್ಟು 4.25 ಎಕರೆಯಲ್ಲಿ ‌‌‌1,806 ಕೆ.ಜಿ ಬೆಳೆಯಲು ಅವಕಾಶ ನೀಡಿದೆ’ ಎಂದು ಮಂಡಳಿ ಪ್ರಾದೇಶಿಕ ಕಚೇರಿ ಅಧಿಕಾರಿ ಜಿ.ಬುಲ್ಲು ಸುಬ್ಬರಾವ್ ತಿಳಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಸಿತ: ‘ಇಂಡೋನೇಷ್ಯಾ, ಬ್ರೆಜಿಲ್, ಆಫ್ರಿಕಾ, ಜಿಂಬಾಬ್ವೆ ದೇಶಗಳಲ್ಲಿ ಕಳೆದ ಸಾಲಿನಲ್ಲಿ ಪ್ರಕೃತಿ ವೈಫಲ್ಯದಿಂದ ಬೆಳೆ ಸಂಪೂರ್ಣ ನೆಲಕಚ್ಚಿತ್ತು. ಚೀನಾ ಕಳೆದ ಸಾಲಿನಿಂದ ತಂಬಾಕು ರಪ್ತು ಸ್ಥಗಿತಗೊಳಿಸಿದ್ದು, 10 ಕೋಟಿ ಕೆ.ಜಿ ತಂಬಾಕು ಕೊರತೆ ಎದುರಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ತಂಬಾಕು ಇಲ್ಲ. ಈ ಮಧ್ಯೆ ತಂಬಾಕು ಮಂಡಳಿ ಹೆಚ್ಚುವರಿ ಕೆ.ಜಿ ನಿಗದಿಗೊಳಿಸಿದ್ದು, ರಾಜ್ಯದಲ್ಲಿ 70ರಿಂದ 72 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ನಿರೀಕ್ಷೆ ಇದೆ’ ಎಂದು ಐಟಿಸಿ ಲೀಫ್ ವ್ಯವಸ್ಥಾಪಕ ಅಧಿಕಾರಿ ಶ್ರೀನಿವಾಸ್ ರೆಡ್ಡಿ ತಿಳಿಸಿದರು.

‘ಕಳೆದ ಸಾಲಿನಲ್ಲಿ ತಂಬಾಕು ಕೈ ಹಿಡಿದು ಲಾಭ ಸಿಕ್ಕಿದೆ. ಈ ಸಾಲಿನಲ್ಲಿ ಮಂಡಳಿ 4.25 ಎಕರೆಯಲ್ಲಿ ಬೆಳೆಯಲು ಅವಕಾಶ ಕಲ್ಪಿಸಿ ಹೆಚ್ಚುವರಿ ರಸಗೊಬ್ಬರ ನೀಡಿರುವುದು ಬೆಳೆಗಾರರಿಗೆ ಅನುಕೂಲವಾಗಿದೆ. ಈಗಾಗಲೇ ಭೂಮಿ ಹದಗೊಳಿಸಿ ಸಸಿ ನಾಟಿಗೆ ಮಳೆ ನಿರೀಕ್ಷೆಯಲ್ಲಿದ್ದೇನೆ’ ಎಂದು ಹೊಸ ವಾರಂಚಿ ಕೊಪ್ಪಲಿನ ರೈತ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಣಸೂರು ತಾಲ್ಲೂಕಿನ ತಟ್ಟೆಕೆರೆಯಲ್ಲಿ ಬಿಸಿಲ ಝಳದಲ್ಲೇ ತಂಬಾಕು ಸಸಿ ನಾಟಿ ಮಾಡುತ್ತಿರುವ ಮಹಿಳೆಯರು
ಹುಣಸೂರು ತಾಲ್ಲೂಕಿನ ತಟ್ಟೆಕೆರೆಯಲ್ಲಿ ಬಿಸಿಲ ಝಳದಲ್ಲೇ ತಂಬಾಕು ಸಸಿ ನಾಟಿ ಮಾಡುತ್ತಿರುವ ಮಹಿಳೆಯರು
ಕುಮಾರ್
ಕುಮಾರ್

ಸಸಿ ಮಡಿಗಳ ಪೋಷಣೆಗೆ ಬೆಳೆಗಾರರ ಹರಸಾಹಸ ಹೆಚ್ಚುವರಿ ಪ್ರದೇಶದಲ್ಲಿ ತಂಬಾಕು ಬೆಳೆಯಲು ಉತ್ಸುಕ ರಾಜ್ಯದಲ್ಲಿ 70ರಿಂದ 72 ಸಾವಿರ ಹೆಕ್ಟೇರ್ ಪ್ರದೇಶ ನಿರೀಕ್ಷೆ

ಭೂಮಿ ತಾಪಕ್ಕೆ ಸಸಿ ದಿಂಡು ಕೊಳೆಯವ ಭೀತಿ ‘ತಂಬಾಕು ಬೆಳೆಗಾರರು ಮಳೆ ಬೀಳುವವರೆಗೆ ಸಸಿಗಳನ್ನು ಉಳಿಸಿಕೊಳ್ಳಬೇಕಿದೆ. ಬಿಸಿಲಿನ ನಡುವೆ ಬರುವ ಮಳೆಗೆ ಸಸಿ ನಾಟಿ ಮಾಡುವುದರಿಂದ ಭೂಮಿ ತಾಪಕ್ಕೆ ಸಸಿ ದಿಂಡು ಕರಗಿ ಕೊಳೆಯಬಹುದು’ ಎಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಮಕೃಷ್ಣನ್ ಹೇಳಿದರು. ಈ ಸಂದರ್ಭದಲ್ಲಿ ಗ್ಲೋ ಇಟ್ 8 ಮಿಲಿ ಅಥವಾ ಕೋಸೈಡ್ 20 ಗ್ರಾಂ ಪುಡಿಯನ್ನು 15 ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಿದಲ್ಲಿ ದಿಂಡು ಕೊಳೆಯುವಿಕೆ ನಿಯಂತ್ರಿಸಬಹುದು. ಕರಿಕಡ್ಡಿ ಅಥವಾ ಸೊರಗು ರೋಗ ಕಂಡುಬಂದಲ್ಲಿ ರೆಡೋಮಿಲ್ ಗೋಲ್ಡ್ ಅಥವಾ ಮೆಟ್ಕೋ 10 ಗ್ರಾಂ ಔಷಧವನ್ನು 10 ಲೀ ನೀರಿಗೆ ಬೆರೆಸಿ ಸಿಂಪಡಿಸಲು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT