ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‌.ಡಿ. ಪ್ರವೇಶ ಪರೀಕ್ಷೆಗೆ ಏಕೀಕೃತ ವ್ಯವಸ್ಥೆ: ಮೈಸೂರು ವಿವಿಯಲ್ಲಿ ವಿರೋಧ

ಉನ್ನತ ಶಿಕ್ಷಣ ಇಲಾಖೆಯ ಕ್ರಮಕ್ಕೆ ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿಯ 2ನೇ ಸಾಮಾನ್ಯ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.
Published 31 ಜನವರಿ 2024, 11:12 IST
Last Updated 31 ಜನವರಿ 2024, 11:12 IST
ಅಕ್ಷರ ಗಾತ್ರ

ಮೈಸೂರು: ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌.ಡಿ ಪ್ರವೇಶಕ್ಕೆ ಏಕೀಕೃತ ವ್ಯವಸ್ಥೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಅರ್ಹತಾ ಪರೀಕ್ಷೆ) ನಡೆಸಲು ನಿರ್ಧರಿಸಿರುವ ಉನ್ನತ ಶಿಕ್ಷಣ ಇಲಾಖೆಯ ಕ್ರಮಕ್ಕೆ ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿಯ 2ನೇ ಸಾಮಾನ್ಯ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.

‘ಸರ್ಕಾರದ ಈ ಕ್ರಮದಿಂದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸ್ವಾಯತ್ತತೆಗೆ ಧಕ್ಕೆಯಾಗುತ್ತದೆ. ಸರ್ಕಾರ ಈ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಅಲ್ಲದೇ, ಇದು ವಿದ್ಯಾರ್ಥಿಗಳಿಗೆ ಪೂರಕವೂ ಆಗುವುದಿಲ್ಲ’ ಎಂದು ಸದಸ್ಯರೂ ಆಗಿರುವ ಬಿಐಎಂಎಸ್‌ ಪ್ರಾಧ್ಯಾಪಕ ಡಿ.ಆನಂದ್‌ ಪ್ರಸ್ತಾಪಿಸಿದರು. ಇದಕ್ಕೆ ಸದಸ್ಯರು ದನಿಗೂಡಿಸಿದರು.

‘ಎಲ್ಲವನ್ನೂ ಕೇಂದ್ರೀಕೃತ ಹಾಗೂ ಏಕೀಕೃತ ವ್ಯವಸ್ಥೆಯಲ್ಲಿ ನಿರ್ವಹಿಸಿದರೆ ವಿಶ್ವವಿದ್ಯಾಲಯಗಳಿಗೆ ಇರುವ ಪಾತ್ರವೇನು? ಅಧಿಕಾರವೇ ಇಲ್ಲದಂತಾಗುತ್ತದೆ. ಈಗಿನ ವ್ಯವಸ್ಥೆಯಲ್ಲಿ ಅಗತ್ಯವಿದ್ದಾಗ ಪರೀಕ್ಷೆ ನಡೆಸಿ ಪ್ರವೇಶ ಕೊಡಲಾಗುತ್ತಿದೆ. ಸರ್ಕಾರದಿಂದಲೇ ವರ್ಷಕ್ಕೊಮ್ಮೆ ನಡೆಸಿದರೆ ವಿದ್ಯಾರ್ಥಿಗಳ ಸಮಯ ಹಾಳಾಗುತ್ತದೆ. ಪಾದದ ಅಳತೆಗೆ ಶೂ ತೆಗೆದುಕೊಳ್ಳಬೇಕೇ ಹೊರತು, ಶೂಗೆ ತಕ್ಕಂತೆ ಪಾದವನ್ನು ಕತ್ತರಿಸುವ ವ್ಯವಸ್ಥೆ ಸರಿಯಲ್ಲ’ ಎಂಬ ಅಭಿಪ್ರಾಯ ಸದಸ್ಯರಿಂದ ವ್ಯಕ್ತವಾಯಿತು.

ಪ್ರತಿಕ್ರಿಯಿಸಿದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌, ‘ಸಭೆಯಲ್ಲಿ ನಾನೇ ಮೊದಲು ವಿರೋಧ ವ್ಯಕ್ತಪಡಿಸಿದೆ. ಆದರೆ,ಎಲ್ಲ ಭಾಗದವರೂ ಹೆಚ್ಚಿನ ಸಂಖ್ಯೆಯಲ್ಲಿ ಪಿಎಚ್‌.ಡಿಗೆ ಬರಬೇಕು ಎಂಬುದು ಹೊಸ ವ್ಯವಸ್ಥೆಯ ಉದ್ದೇಶ ಎಂದು ಸರ್ಕಾರದ ಪ್ರತಿನಿಧಿಗಳು ತಿಳಿಸಿದರು. ಅದಕ್ಕೆ ತಕ್ಕಂತೆ ಬೋಧಕರ ಸಂಖ್ಯೆಯನ್ನೂ ಹೆಚ್ಚಿಸಬೇಕು ಎಂದು ಕೇಳಿಕೊಂಡೆ’ ಎಂದು ಹೇಳಿದರು.

ಸರ್ಕಾರಕ್ಕೆ ಪತ್ರ

‘ಉದ್ದೇಶಿತ ವ್ಯವಸ್ಥೆಯಿಂದಾಗುವ ಬಾಧಕಗಳ ಕುರಿತು ಮನವರಿಕೆ ಮಾಡಿಕೊಡುವುದು ಹಾಗೂ ವಿರೋಧ ದಾಖಲಿಸಿ ಸರ್ಕಾರಕ್ಕೆ ಪತ್ರ ಬರೆಯಬೇಕು’ ಎಂದು ನಿರ್ಧರಿಸಲಾಯಿತು.

‘ಬಿ.ಇಡಿ. ಫಲಿತಾಂಶವನ್ನು ಬಹಳಷ್ಟು ವೇಗವಾಗಿ ಕೊಡಲಾಗುತ್ತಿದೆ. ಆದರೆ, ಅಂಕಪಟ್ಟಿ ನೀಡಿಲ್ಲ. ಇದರಿಂದಾಗಿ, ವಿದ್ಯಾರ್ಥಿಗಳು ಮೆರಿಟ್‌ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ವಿ.ವಿಯಿಂದ ಕೊಡುವ ಸ್ಕೋರ್‌ ಶೀಟ್‌ಗಳನ್ನು ಸಂಬಂಧಿಸಿದ ಇಲಾಖೆಗಳವರು ಮಾನ್ಯ ಮಾಡುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಛಾಯಾದೇವಿ ಬಿ.ಇಡಿ. ಕಾಲೇಜು ಪ್ರಾಂಶುಪಾಲ ಸಿ.ಆ್ಯಂಟನಿ ಕೋರಿದರು.

ಪ್ರತಿಕ್ರಿಯಿಸಿದ ಕುಲಪತಿ ಲೋಕನಾಥ್‌, ‘ಇದು ಯುಯುಸಿಎಂಎಸ್‌ (ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ)ಯ ತಾಂತ್ರಿಕ ಲೋಪದಿಂದ ಆಗುತ್ತಿರುವ ಸಮಸ್ಯೆಯಾಗಿದೆ. ನಾವೇ ಅಂಕಪಟ್ಟಿ ಮುದ್ರಿಸಿಕೊಡುತ್ತೇವೆ ಎಂದು ಸರ್ಕಾರ ಹೇಳಿದೆ. ನಾವೇ ಮುದ್ರಿಸಿ ವಿತರಿಸಲು ಈಗ ಅವಕಾಶವಿಲ್ಲ. ಇದರಿಂದ ಬಿ.ಇಡಿ. ಜೊತೆಗೆ ಇತರ ಪದವಿ ವಿದ್ಯಾರ್ಥಿಗಳಿಗೂ ತೊಡಕಾಗಿದೆ. ‘ವೀಸಾ’ ಅವಧಿ ಮುಗಿಯುತ್ತಿರುವ ವಿದೇಶಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುತ್ತಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಯುಯುಸಿಎಂಎಸ್‌ ವ್ಯವಸ್ಥೆಯಿಂದ ತೊಡಕು

ಕುಲಸಚಿವೆ ವಿ.ಆರ್. ಶೈಲಜಾ ಮಾತನಾಡಿ, ‘ಕಂದಾಯ ಇಲಾಖೆಯಲ್ಲಿ ಭೂಮಿ ತಂತ್ರಾಂಶದ ಮೂಲಕ ಲಕ್ಷಾಂತರ ಮಂದಿಗೆ ದಾಖಲೆಗಳನ್ನು ಒದಗಿಸಲಾಗುತ್ತಿದೆ. ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳಿಂದಲೂ ಅಂಕಪಟ್ಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದರೆ ಅಚ್ಚರಿಯೇ. ಸುಧಾರಿತ ತಂತ್ರಜ್ಞಾನ ಬಳಸಿದರೆ ತ್ವರಿತವಾಗಿ ಒದಗಿಸಲು ಅವಕಾಶವಿದೆ. ಇದನ್ನು ವಿವಿಯಲ್ಲೇ ಬಳಸಿ ನಿರ್ವಹಿಸಬಹುದಾಗಿದೆ’ ಎಂದು ಹೇಳಿದರು.

‘ಯುಯುಸಿಎಂಎಸ್‌ ವ್ಯವಸ್ಥೆ ತಾಂತ್ರಿಕವಾಗಿ ಬಲವಾಗಿಲ್ಲ. ಕುಂದುಕೊರತೆ ಪರಿಹರಿಸುವ ವ್ಯವಸ್ಥೆ ಸಮರ್ಪಕವಾಗಿಲ್ಲ. ಅದು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಬಹಳ ಸಮಸ್ಯೆ ಬಗೆಹರಿಯುತ್ತದೆ. ಇಲ್ಲಿ ಪ್ರಸ್ತಾಪವಾದ ಪ್ರಮುಖ ವಿಷಯಗಳನ್ನು ಫೆ.8ರಂದು ನಡೆಯಲಿರುವ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ಮಂಡಿಸಲಾಗುವುದು’ ಎಂದು ಕುಲಪತಿ ತಿಳಿಸಿದರು.

6ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ವಿಷಯದಲ್ಲಿ ತೊಡಕು ಉಂಟಾಗಿರುವುದನ್ನು ಸದಸ್ಯರು ಪ್ರಸ್ತಾಪಿಸಿದರು.

‘ಎನ್‌ಇಪಿ–2020 ಜಾರಿಯಾದ ನಂತರ ಇಂಟರ್ನ್‌ಶಿಪ್‌ ವಿಷಯದಲ್ಲಿ ಇನ್ನೂ ಸ್ಪಷ್ಟತೆ ದೊರೆತಿಲ್ಲ. ಅದಕ್ಕಾಗಿ ನಾವೇ ಪಠ್ಯಕ್ರಮ ಸಿದ್ಧಪಡಿಸಬೇಕು ಅಥವಾ ಉನ್ನತ ಶಿಕ್ಷಣ ಇಲಾಖೆಯಿಂದ ಪಠ್ಯಕ್ರಮ ಕೊಡುವವರೆಗೆ ಕಾಯಬೇಕು’ ಎಂದು ಕುಲಪತಿ ಲೋಕನಾಥ್ ಹೇಳಿದರು.

ಪಠ್ಯಕ್ರಮ ಮಾಡೋಣ

‘ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ಗೆ ಸಮಯಾವಕಾಶ ಸಿಗುತ್ತಿಲ್ಲ. ಈಗ ನಾವು ರಜೆಯಲ್ಲಿ ಪರೀಕ್ಷೆ ನಡೆಸುತ್ತಿದ್ದೇವೆ. ಅಲ್ಲದೇ, ದೊಡ್ಡ ಸಂಖ್ಯೆಯಲ್ಲಿರುವ ಎಲ್ಲರಿಗೂ ಇಂಟರ್ನ್‌ಶಿಪ್‌ ನೀಡಲು ಕಂಪನಿ ಅಥವಾ ಕಾರ್ಖಾನೆಗಳಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂಟರ್ನ್‌ಶಿಪ್‌ ಮಹತ್ವವೇನು, ಹೇಗಿರುತ್ತದೆ ಎಂಬಿತ್ಯಾದಿ ಸಾಮಾನ್ಯ ಮಾಹಿತಿ ಒಳಗೊಂಡ ಪಠ್ಯಕ್ರಮವನ್ನು ಮಾಡೋಣ’ ಎಂದು ಸಲಹೆ ನೀಡಿದರು. ಇದಕ್ಕೆ ಸಭೆ ಸಮ್ಮತಿಸಿತು. ಪಠ್ಯಕ್ರಮ ತಯಾರಿಸಲು ಸಮಿತಿ ರಚನೆಗೆ ತೀರ್ಮಾನಿಸಲಾಯಿತು.

‘ಬಿಬಿಎ ಹಾಗೂ ಬಿಸಿಎ ಕೋರ್ಸ್‌ ನಡೆಸಲು ಅನುಮೋದನೆ ಪಡೆದುಕೊಳ್ಳಬೇಕು ಎಂದು ಎಐಸಿಟಿಇ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಈಚೆಗೆ ಆದೇಶಿಸಿದೆ. ಅನುಮೋದನೆ ಇಲ್ಲದೇ ನಡೆಸುವುದು ತಾರತಮ್ಯಕ್ಕೆ ಕಾರಣವಾಗಬಹುದು. ಖಾಸಗಿ ಕಾಲೇಜುಗಳವರು ಅನುಮತಿ ಪಡೆದಿರುವುದನ್ನೇ ಹೈಲೈಟ್ ಮಾಡಿಕೊಂಡು ಪ್ರವೇಶಾತಿ ಹೆಚ್ಚಿಸಿಕೊಳ್ಳಬಹುದು. ಪಡೆದುಕೊಳ್ಳದ ಕಾಲೇಜುಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಸಾಧ್ಯತೆಯೂ ಇರುತ್ತದೆ. ಸರ್ಕಾರಿ ಕಾಲೇಜುಗಳಿಗೂ ಅಗತ್ಯವೇ ಎಂಬಿತ್ಯಾದಿ ಪ್ರಶ್ನೆಗಳಿವೆ. ಈ ವಿಷಯದಲ್ಲಿ ಸ್ಪಷ್ಟತೆ ಬೇಕಾಗಿದೆ’ ಎಂದು ಹಲವರಿ ಪ್ರಸ್ತಾಪಿಸಿದರು.

ಪ್ರತಿಕ್ರಿಯಿಸಿದ ಕುಲಪತಿ, ‘ಸರ್ಕಾರದ ಗಮನಕ್ಕೆ ತಂದು ಅಲ್ಲಿಂದ ಬರುವ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಬಿಸಿಎಗೆ ಪ್ರವೇಶಾತಿ ಹೆಚ್ಚುತ್ತಿದೆ. ಆದರೆ, ಬಿಎಗೆ ಶೇ 50ರಿಂದ ಶೇ 60ರಷ್ಟು, ಬಿಎಸ್‌ಸಿ ಹಾಗೂ ಬಿಕಾಂಗೆ ಶೇ 20ರಷ್ಟು ಪ್ರವೇಶಾತಿ ಕಡಿಮೆಯಾಗಿದೆ. ವಿ.ವಿಯಲ್ಲಿ 2007ರ ನಂತರ ನೇಮಕಾತಿ ನಡೆದಿಲ್ಲ. ಕಾಯಂ ಬೋಧಕರ ಹುದ್ದೆ ಶೇ 46ರಷ್ಟು ಕೊರತೆ ಇದೆ. ಯುವಜನರ ಭವಿಷ್ಯ ರೂಪಿಸುವ ಉನ್ನತ ಶಿಕ್ಷಣಕ್ಕೆ ಹೆ‌ಚ್ಚಿನ ಆದ್ಯತೆ ನೀಡುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.

ಕುಲಸಚಿವ ಪ್ರೊ.ಕೆ.ಎಂ. ಮಹದೇವನ್‌ ಹಾಗೂ ಹಣಕಾಸು ಅಧಿಕಾರಿ ರೇಖಾ ಕೆ.ಎಸ್. ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT