ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರ ಶಿಕ್ಷಣ: ಮೈಸೂರು ವಿ.ವಿ ಕೋರ್ಸ್

Last Updated 10 ಅಕ್ಟೋಬರ್ 2018, 10:01 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯಕ್ಕೆ 17 ದೂರಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅವಕಾಶ ನೀಡಿದೆ ಎಂದು ಪ್ರಭಾರಿ ಕುಲಪತಿ ಪ್ರೊ.ಆಯಿಷಾ ಷರೀಫ್‌ ತಿಳಿಸಿದರು.

ಮೈಸೂರು ವಿ.ವಿ.ಯು 1980ರಿಂದಲೇ ಅಂಚೆ ಮತ್ತು ತೆರಪಿನ ಶಿಕ್ಷಣ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿತ್ತು. 1996ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ಥಾಪನೆಯಾದ ಮೇಲೆ ದೂರ ಶಿಕ್ಷಣ ಕೋರ್ಸ್‌ಗಳನ್ನು ನಡೆಸುವುದನ್ನು ನಿಲ್ಲಿಸಲಾಯಿತು. ಇದೀಗ ಮತ್ತೆ ವಿ.ವಿ.ಯ ದೂರ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಟ್ಟು 17 ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆಯನ್ನು ನೀಡಿದ್ದು, ಈ ವರ್ಷ ಕೇವಲ 11 ಕೋರ್ಸುಗಳನ್ನು ಮಾತ್ರ ವಿ.ವಿ ಆರಂಭಿಸುತ್ತಿದೆ. ಬಿಎ ವಿಭಾಗದಲ್ಲಿ 6 ಕೋರ್ಸುಗಳನ್ನು ಹೊರತುಪಡಿಸಿ, ಬಾಕಿ 11 ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ₹ 10 ಸಾವಿರದಿಂದ ₹ 20 ಸಾವಿರದವರೆಗೆ ಶುಲ್ಕ ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬಿಬಿಎಂ, ಬಿಕಾಂ, ಬಿಎಸ್ಸಿ ಐಟಿ, ಎಂಎ ಅರ್ಥಶಾಸ್ತ್ರ, ಇಂಗ್ಲಿಷ್, ಇತಿಹಾಸ, ಕನ್ನಡ, ರಾಜ್ಯಶಾಸ್ತ್ರ, ಸಮಾಜವಿಜ್ಞಾನ, ಎಂಕಾಂ ಹಾಗೂ ಎಂಎಸ್ಸಿ ಮಾಹಿತಿ ವಿಜ್ಞಾನ ಕೋರ್ಸ್‌ಗಳಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಅ.20ರ ಒಳಗೆ ನೋಂದಣಿ ಮಾಡಿಕೊಳ್ಳಬಹುದು ಎಂದರು.

ಸೆಮಿಸ್ಟರ್‌ ಪದ್ಧತಿ:

‘ರಾಜ್ಯದ ಎಲ್ಲ ವಿ.ವಿ.ಗಳಿಗಿಂತ ಭಿನ್ನವಾಗಿ ಮೈಸೂರು ವಿ.ವಿ.ಯಲ್ಲಿ ದೂರಶಿಕ್ಷಣ ಕೋರ್ಸುಗಳನ್ನು ಸೆಮಿಸ್ಟರ್‌ ಪದ್ಧತಿಯಲ್ಲಿ ಜಾರಿಗೆ ತರಲಾಗುತ್ತಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವೂ ಸೇರಿದಂತೆ ಬೇರೆಲ್ಲ ವಿ.ವಿ.ಗಳಲ್ಲಿ ವಾರ್ಷಿಕ ಪದ್ಧತಿ ಇದೆ. ನಮ್ಮಲ್ಲಿ ಮಾತ್ರ ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ (ಸಿಬಿಸಿಎಸ್) ಅಳವಡಿಸಿಕೊಂಡಿರುವುದು ವಿಶೇಷವಾಗಿದೆ’ ಎಂದು ತಿಳಿಸಿದರು.

ರಾಜ್ಯದ ಎಲ್ಲ ಭಾಗಗಳ ವಿದ್ಯಾರ್ಥಿಗಳೂ ನೋಂದಣಿ ಮಾಡಿಕೊಳ್ಳಬಹುದು. ಆದರೆ, ನೋಂದಣಿ ಪ್ರಕ್ರಿಯೆ ಮಾತ್ರ ಮೈಸೂರು ವಿ.ವಿ.ಯ ಕೇಂದ್ರ ಕಚೇರಿಯಲ್ಲೇ ನಡೆಯಬೇಕು. ಅಂತೆಯೇ, ಸಂಪರ್ಕ ತರಗತಿಗಳೂ ವಿ.ವಿ ಕ್ಯಾಂಪಸ್ಸಿನಲ್ಲೇ ನಡೆಯುತ್ತವೆ ಎಂದು ಹೇಳಿದರು.

ಕುಲಸಚಿವ ಪ್ರೊ.ಆರ್‌.ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ, ದೂರಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಗುರು ಭಾಗವಹಿಸಿದ್ದರು.

ವಸ್ತುಪ್ರದರ್ಶನ: ಸಿದ್ಧತೆ ಪೂರ್ಣ

ಉನ್ನತ ಶಿಕ್ಷಣ ಇಲಾಖೆಯು ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಸ್ಥಾಪಿಸಲಿರುವ ಮಳಿಗೆಯ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಕುಲಸಚಿವ ಪ್ರೊ.ಆರ್.ರಾಜಣ್ಣ ತಿಳಿಸಿದರು.

18ರಂದು ಮಳಿಗೆಯ ಉದ್ಘಾಟನೆಯಾಗಲಿದೆ. ರಾಜ್ಯದ ಎಲ್ಲ ವಿ.ವಿ.ಗಳ ಮಾಹಿತಿ ಮಳಿಗೆಯಲ್ಲಿ ಸಿಗುತ್ತದೆ. ಪ್ರತಿ ವಿ.ವಿ.ಯಿಂದ ಸಾಕ್ಷ್ಯಚಿತ್ರ ಪಡೆಯಲಾಗಿದೆ. ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸುವರು, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭಾಗವಹಿಸುವರು ಎಂದರು.

ಜತೆಗೆ, ಜಂಬೂ ಸವಾರಿಯ ದಿನ ಸಾಗುವ ಸ್ತಬ್ಧಚಿತ್ರದ ಅಂತಿಮ ಸ್ವರೂಪವನ್ನು ಪೂರ್ಣಗೊಳಿಸಲಾಗಿದೆ. ಶಿಕ್ಷಣ ಕ್ಷೇತ್ರದ ಸಮಗ್ರ ಮಾಹಿತಿ ಸಿಗುವಂತೆ ಸಿದ್ಧಪಡಿಸಲಾಗಿದೆ. ಎಲ್‌ಇಡಿ ಪರದೆ ಬಳಸಿಕೊಂಡು ಉತ್ತಮ ವಿನ್ಯಾಸ ನೀಡಲಾಗಿದೆ. ಇದರ ಜತೆಗೆ 10 ನಿಮಿಷ ಹಾಗೂ 30 ನಿಮಿಷಗಳ ಪ್ರತ್ಯೇಕ ಸಾಕ್ಷ್ಯಚಿತ್ರವನ್ನು ಮೈಸೂರು ವಿಶ್ವವಿದ್ಯಾಲಯವನ್ನು ಕುರಿತು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT