ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧೆಗಳಲ್ಲಿ ಪ್ರತಿಭೆಯ ‘ಚಿಲುಮೆ’

ವಿಶ್ವವಿದ್ಯಾಲಯದಲ್ಲಿ ಅಂತರ ಕಾಲೇಜು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ
Last Updated 8 ಡಿಸೆಂಬರ್ 2022, 16:59 IST
ಅಕ್ಷರ ಗಾತ್ರ

ಮೈಸೂರು: ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಕಾಲೇಜು ಆವರಣ. ಸುಶ್ರಾವ್ಯ ಸಂಗೀತಕ್ಕೆ ತಲೆದೂಗಿದ ಪ್ರೇಕ್ಷಕರು. ನೃತ್ಯ, ಹಾಡು, ಚಿತ್ರ ರಚನೆ ಹೀಗೆ... ಕಲಾವಿದರಿಂದ ಕಳೆಗಟ್ಟಿದ ಪ್ರತಿಭಾ ವೇದಿಕೆ.

– ಈ ಸಂಭ್ರಮದ ಕ್ಷಣಗಳಿಗೆ ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ ಸಾಕ್ಷಿಯಾಯಿತು.

ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೂರು ದಿನಗಳವರೆಗೆ ಸ್ಪರ್ಧೆ ನಡೆಯಲಿದೆ. ಮೊದಲ ದಿನವಾದ ಗುರುವಾರ ಶಾಸ್ತ್ರೀಯ ಸಂಗೀತ, ಸ್ಥಳದಲ್ಲೇ ಚಿತ್ರ ರಚನೆ, ಜನಪದ ನೃತ್ಯ, ವ್ಯಂಗ್ಯ ಚಿತ್ರ ರಚನೆ, ರಸಪ್ರಶ್ನೆ, ಪಾಶ್ಚತ್ಯ ಸಂಗೀತ, ವೃಂದ ಗಾನ, ಜಾನಪದ ಗೀತೆ, ಲಘು ಸಂಗೀತ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.

ಮೈಸೂರು ವಿಶ್ವವಿದ್ಯಾಲಯದ ಮುಖ್ಯ ದ್ವಾರದಿಂದ ಸಭಾ ವೇದಿಕೆಯವರೆಗೆಪೂಜಾ ನೃತ್ಯ ಮತ್ತು ಡೊಳ್ಳು ಕುಣಿತ ತಂಡಗಳೊಂದಿಗೆ ಮೆರವಣಿಗೆ ಸಾಗಿತು. ನಗಾರಿ ಮತ್ತು ಡೋಲಿನ ಸದ್ದಿಗೆ ವಿದ್ಯಾರ್ಥಿಗಳ ಜೊತೆಗೆ ಸಿಬ್ಬಂದಿಯೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಉದ್ಘಾಟನೆ: ಹಿನ್ನೆಲೆ ಗಾಯಕಿ ಡಾ.ಪ್ರಿಯದರ್ಶಿನಿ ಉದ್ಘಾಟಿಸಿ ಮಾತನಾಡಿ, ‘ಸ್ಪರ್ಧೆ ಕಲಿಯುವಿಕೆಯ ಒಂದು ಭಾಗ. ಸೋಲು–ಗೆಲುವು ಜೀವನದ ಅನೇಕ ಪಾಠಗಳನ್ನು ತಿಳಿಸುತ್ತದೆ. ಕಾಲೇಜು ಜೀವನದಲ್ಲಿ ಪಠ್ಯಗಳು ಮಾಹಿತಿ ಕಲಿಸುತ್ತವೆ. ಪಠ್ಯೇತರ ಚಟುವಟಿಕೆಗಳು ಜೀವನ ಮೌಲ್ಯಗಳನ್ನು ತಿಳಿಸುತ್ತದೆ’ ಎಂದರು.

ಕುಲಸಚಿವೆ ವಿ.ಆರ್.ಶೈಲಜಾ ಮಾತನಾಡಿ, ‘ನಾಡಿನ ಸಂಸ್ಕೃತಿ ಎಷ್ಟು ಶ್ರೀಮಂತವಾಗಿದೆ ಎಂಬುದು ಇತ್ತೀಚಿನ ಚಲನಚಿತ್ರಗಳಲ್ಲಿ ಕಾಣಸಿಗುತ್ತಿದೆ. ನಮ್ಮ ಸಂಸ್ಕೃತಿ ತಿಳಿಯುವುದರೊಂದಿಗೆ, ಅವುಗಳ ಬಗ್ಗೆ ಇತರರಿಗೆ ಮನದಟ್ಟು ಮಾಡುವ ಕಾರ್ಯ ಆಗಬೇಕು’ ಎಂದು ಆಶಿಸಿದರು.

‘ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗಿದೆ. ರಾಷ್ಟ್ರಕವಿ ಕುವೆಂಪು ಓಡಾಡಿದ ಮಣ್ಣಿನಲ್ಲಿ ಅಧ್ಯಯನ ಮಾಡುತ್ತಿರುವ ನಾವು, ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಟ ಧರ್ಮ ಕೀರ್ತಿರಾಜ್, ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕ ಪ್ರೊ.ಬಿ.ಎಸ್.ಚಂದ್ರಶೇಖರ, ನಿರ್ದೇಶಕಿ ಎಸ್.ಎನ್.ಸುಷ್ಮಾ, ಮಹೇಶ್ ಮಹದೇವ್, ಮಂಜು ಮಿಲನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT