ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ಗವಾಗುತ್ತಿರುವ ಹಸಿಮೆಣಸಿನಕಾಯಿ, ಕೋಳಿಮಾಂಸ

ದುಬಾರಿಯಾದ ಬಾಳೆಹಣ್ಣು, ಎಲೆಕೋಸು, ಇಳಿಕೆಗತಿಗೆ ಮರಳಿದ ಮೊಟ್ಟೆ
Last Updated 15 ಜುಲೈ 2019, 19:42 IST
ಅಕ್ಷರ ಗಾತ್ರ

ಮೈಸೂರು: ನಾಲ್ಕು ತಿಂಗಳ ನಂತರ ಹಸಿಮೆಣಸಿನಕಾಯಿ ದರ ನಗರದಲ್ಲಿ ನಿಯಂತ್ರಣಕ್ಕೆ ಬಂದಿದೆ. ತಿಂಗಳ ಆರಂಭದಲ್ಲಿ ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 40ರಲ್ಲಿದ್ದ ಇದರ ದರ ಈಗ ₹ 27ಕ್ಕೆ ಕಡಿಮೆಯಾಗಿದೆ. ಕಳೆದ ಗುರುವಾರ ಇದರ ಧಾರಣೆ ₹ 20ಕ್ಕೆ ಕುಸಿದಿತ್ತು.

ಫೆಬ್ರುವರಿಯಲ್ಲಿ ಇಷ್ಟು ಕನಿಷ್ಠ ದರ ದಾಖಲಾಗಿತ್ತು. ನಂತರದ ತಿಂಗಳುಗಳಲ್ಲಿ ₹ 80ರವರೆಗೂ ದರ ದಾಖಲಾಗಿತ್ತು. ಸದ್ಯ, ಬೆಲೆ ನಿಯಂತ್ರಣಕ್ಕೆ ಬಂದಿರುವುದು ‘ಖಾರಪ್ರಿಯ’ರಿಗೆ ಸಮಾಧಾನ ತರಿಸಿದೆ.

‘ಬಿರುಬೇಸಿಗೆಯ ಬಿಸಿಲಿನಲ್ಲಿ ಹಸಿಮೆಣಸಿನಕಾಯಿ ಸಸಿಗಳು ಸಮರ್ಪಕ ಇಳುವರಿ ನೀಡುತ್ತಿರಲಿಲ್ಲ. ಇದರಿಂದ ಇಳುವರಿ ಕಡಿಮೆಯಾಗಿತ್ತು. ಮದುವೆ ಮೊದಲಾದ ಶುಭ ಸಮಾರಂಭಗಳಿಗೂ ಇದು ಅತ್ಯಗತ್ಯವಾಗಿ ಬೇಕಿತ್ತು. ಹಾಗಾಗಿ, ಬೇಡಿಕೆ ಹೆಚ್ಚಿತ್ತು. ಈಗ ಆಷಾಢ ಬಂದಿರುವುದರಿಂದ ಸಹಜವಾಗಿಯೇ ಶುಭ ಸಮಾರಂಭಗಳು ನಡೆಯುತ್ತಿಲ್ಲ. ಇದರಿಂದ ಬೇಡಿಕೆ ಬಹಳಷ್ಟು ಕುಸಿದಿದೆ. ಬೆಲೆಯೂ ನಿಯಂತ್ರಣಕ್ಕೆ ಬಂದಿದೆ’ ಎಂದು ಹುಲ್ಲಹಳ್ಳಿಯ ರೈತ ಶಿವಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಏರಿಕೆಗತಿಯಲ್ಲಿ ಎಲೆಕೋಸು

ಬೀನ್ಸ್‌, ಕ್ಯಾರೆಟ್ ದರ ಏರಿಕೆಯಿಂದಾಗಿ ಗ್ರಾಹಕರು ಎಲೆಕೋಸಿನತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಕೇರಳ ಭಾಗದಲ್ಲೂ ಬೀನ್ಸ್ ಮತ್ತು ಕ್ಯಾರೆಟ್ ಬದಲಿಗೆ ಎಲೆಕೋಸಿನ ಖರೀದಿಯತ್ತಲೆ ಹೆಚ್ಚು ಒತ್ತು ನೀಡಿದ್ದರಿಂದ ಬೆಲೆ ಏರಿಕೆಗತಿಯಲ್ಲಿದೆ.

ಫೆಬ್ರುವರಿಯಲ್ಲಿ ದಿನವೊಂದಕ್ಕೆ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ 129 ಕ್ವಿಂಟಲ್‌ನಷ್ಟು ಎಲೆಕೋಸು ಬರುತ್ತಿದ್ದಾಗ ಇದರ ಸಗಟು ಧಾರಣೆ ಕೆ.ಜಿಗೆ ₹ 7 ಇತ್ತು. ಆದರೆ, ಈಗ ದಿನವೊಂದಕ್ಕೆ 340 ಕ್ವಿಂಟಲ್‌ನಷ್ಟು ಆವಕವಾಗುತ್ತಿದೆ. ಬೆಲೆ ಕೆ.ಜಿಗೆ ₹ 27ನ್ನು ತಲುಪಿದೆ. ಬೇಡಿಕೆ ಹೆಚ್ಚಿರುವುದರಿಂದಲೇ ಇದರ ಧಾರಣೆ ಏರಿಕೆ ಕಾಣುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವಾರ ಏಲಕ್ಕಿ ಬಾಳೆಹಣ್ಣಿನ ದರ ಮತ್ತಷ್ಟು ಹೆಚ್ಚಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಇದರ ದರ ಕೆ.ಜಿಗೆ ₹ 70 ಇದೆ. ಉಳಿದ ಮಾರುಕಟ್ಟೆಯಲ್ಲಿ ₹ 80 ಇದೆ. ಪಚ್ಚಬಾಳೆಯ ದರ ₹ 30ರಿಂದ ₹ 40 ಇದೆ.

ತರಕಾರಿಗಳು ; ಕಳೆದ ವಾರದ ಧಾರಣೆ ; ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ; 27; 24

ಬೀನ್ಸ್ ; 30; 34

ಕ್ಯಾರೆಟ್; 52; 55

ಎಲೆಕೋಸು; 23; 27

ದಪ್ಪಮೆಣಸಿನಕಾಯಿ; 46; 50

ಬದನೆ ; 15; 15

ನುಗ್ಗೆಕಾಯಿ; 40; 50

ಹಸಿಮೆಣಸಿನಕಾಯಿ; 40; 27

ಈರುಳ್ಳಿ; 18; 18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT