ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಬೇಟೆ: ಒಂದಂಕಿಗೆ ಇಳಿಕೆ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುರಕ್ಷತಾ ಕ್ರಮ, ಗಸ್ತು ಹೆಚ್ಚಳ ಪರಿಣಾಮ
Published 24 ಜನವರಿ 2024, 5:31 IST
Last Updated 24 ಜನವರಿ 2024, 5:31 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ನೈರುತ್ಯ ಭಾಗದಲ್ಲಿ ವಿಸ್ತಾರವಾಗಿ ಹರಡಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ಬೇಟೆ ಹಾಗೂ ನಾಟಾ ಸಾಗಣೆ ಪ್ರಕರಣಗಳು ಗಣನೀಯ ಇಳಿಕೆ ಕಂಡಿವೆ. 2023ರಲ್ಲಿ ದಾಖಲಾದ ಅರಣ್ಯ ಅಪರಾಧ ಪ್ರಕರಣಗಳು ಕೇವಲ 8!

2019–20ರಿಂದ 2023–24ರ ಅವಧಿಯಲ್ಲಿ ಒಟ್ಟು 117 ಅರಣ್ಯ ಅಪರಾಧ ಪ್ರಕರಣಗಳು ನಡೆದಿದ್ದು, ಇದೇ ಮೊದಲ ಬಾರಿ ಒಂದಂಕಿಯನ್ನು ದಾಟಿಲ್ಲ. ನಾಗರಹೊಳೆ ಅರಣ್ಯದಲ್ಲಿ ಕೈಗೊಂಡ ಸುರಕ್ಷತಾ ಕ್ರಮಗಳು, ಗಸ್ತು ಹೆಚ್ಚಳವೇ ಕಾರಣ ಎನ್ನುತ್ತದೆ ಇಲಾಖೆ.

ಕಬಿನಿ ಎಡದಂಡೆ ಹಾಗೂ ಜಿಲ್ಲೆಯ ಗಡಿಯುದ್ದಕ್ಕೂ ಚಾಚಿರುವ ಈ ರಾಷ್ಟ್ರೀಯ ಉದ್ಯಾನದಲ್ಲಿ 2019–20ರಲ್ಲಿ 25, 2020–21ರ ವರ್ಷದಲ್ಲಿ 41 ಪ್ರಕರಣ ದಾಖಲಾಗಿದ್ದವು. ಅರಣ್ಯದಲ್ಲಿ ವನ್ಯಜೀವಿಗಳ ಬೇಟೆ ಹೆಚ್ಚಳವಾಗಿತ್ತು. ಜಿಂಕೆ, ಹಂದಿ, ಕಡವೆ, ಕಾಟಿ ಬೇಟೆಯ ಜೊತೆಗೆ ತೇಗ, ಬೀಟೆ ಮರಗಳ ಕಳ್ಳ ಸಾಗಣೆ ಆತಂಕ ಮೂಡಿಸಿತ್ತು.

ಕಳೆದ ಐದು ವರ್ಷದಲ್ಲಿ ಜಿಂಕೆ ಮಾಂಸಕ್ಕಾಗಿ ಬೇಟೆಯಾಡಿದ ಪ್ರಕರಣಗಳು ಹೆಚ್ಚಿದ್ದರೂ ಹುಲಿ ಬೇಟೆ ಸಂಪೂರ್ಣ ತಗ್ಗಿದೆ. ಕಡವೆ, ಕಾಟಿ ಮಾಂಸಕ್ಕಾಗಿಯೂ ಬೇಟೆಗಳು ನಡೆದಿವೆ. ಬೇಟೆ ಪ್ರಕರಣಗಳನ್ನು ತ್ವರಿತವಾಗಿ ಭೇದಿಸಿ, ಬೇಟೆಗಾರರನ್ನು ಬಂಧಿಸುತ್ತಿರುವುದು, ಕ್ಯಾಮೆರಾ ಟ್ರ್ಯಾಪ್‌ಗಳ ಅಳವಡಿಕೆಯೇ ಅಪರಾಧ ಪ್ರಕರಣ ಗಣನೀಯವಾಗಿ ತಗ್ಗಲು ಕಾರಣ.

ಅರಣ್ಯ ಅತಿಕ್ರಮ ಪ್ರವೇಶವು ಕಳೆದ ವರ್ಷ ಒಂದೇ ಒಂದು ಪ್ರಕರಣ ನಡೆದಿದೆ. 2023ರ ಅಕ್ಟೋಬರ್‌ನಲ್ಲಿ ಡಿ.ಬಿ.ಕುಪ್ಪೆ ಅರಣ್ಯ ವಲಯದ ಉದ್ಬೂರು ಗೇಟ್‌ನಿಂದ ಸೂಕ್ಷ್ಮ ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದ, ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು.  

2 ನಾಟಾ ಕಳ್ಳ ಸಾಗಣೆ, 3 ಜಿಂಕೆ ಬೇಟೆ ಹಾಗೂ ಒಂದು ಇತರ ಪ್ರಾಣಿಯೊಂದರ ಬೇಟೆಯಷ್ಟೇ 2023ರಲ್ಲಿ ನಡೆದಿತ್ತು. ಆದರೆ, ಒಂದೂ ಹುಲಿ ಹತ್ಯೆ ಆಗಿಲ್ಲ. ಹುಲಿ ಸಾಂದ್ರತೆಗೆ ದೇಶದಲ್ಲಿ ಹೆಸರಾದ ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಇಲಾಖೆಯ ಸುರಕ್ಷತಾ ಕ್ರಮಗಳು ಮಾದರಿಯಾಗಿರುವುದಕ್ಕೆ ಉದಾಹರಣೆಯಾಗಿದೆ.

2023ರ ಜುಲೈನಲ್ಲಿ ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ನೇಗತ್ತೂರು ಗ್ರಾಮದ ಕಾಡಂಚಿನಲ್ಲಿ ಕಾಡು ಪ್ರಾಣಿ ಮಾಂಸ ತುಂಬಿರುವ ನಾಲ್ಕು ಚೀಲವನ್ನು ಅರಣ್ಯ ಸಂಚಾರ ಪತ್ತೆಹಚ್ಚಿತ್ತು.  ಅದೇ ತಿಂಗಳಲ್ಲಿ ಆನೆಚೌಕೂರು ವಲಯಕ್ಕೆ ಹೊಂದಿಕೊಂಡ ಜಮೀನಿನಲ್ಲಿ ಜಿಂಕೆ ಮಾಂಸ ತುಂಬಿದ ಎರಡು ಚೀಲ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಸಿಂಡೇನಹಳ್ಳಿ ಗ್ರಾಮದ ಇಬ್ಬರನ್ನು ಇಲಾಖೆಯು ತ್ವರಿತವಾಗಿ ಬಂಧಿಸಿತ್ತು.

‘ಕಳೆದ ವರ್ಷ ನಾಗರಹೊಳೆ ಡಿಸಿಎಫ್‌ ಆಗಿ ಅಧಿಕಾರವಹಿಸಿಕೊಂಡೆ. ಕಾಟಿ ಬೇಟೆ ಪ್ರಕರಣ ಹೊರತು ಪಡಿಸಿದರೆ, ವನ್ಯಜೀವಿ ಬೇಟೆ ಪ್ರಕರಣಗಳು ನಡೆದಿಲ್ಲ. ಅರಣ್ಯ ಅಕ್ರಮ ಪ್ರವೇಶ ಪ್ರಕರಣಗಳು ನಡೆದಿವೆಯಷ್ಟೇ. ಇಲಾಖೆಯು ಅಪರಾಧ ಪ್ರಕರಣಗಳ ಮೇಲೆ ನಿಗಾ ಇಟ್ಟಿದೆ. ನಾಟ, ತೇಗದ ಮರ ಕಳವು ಪ್ರಕರಣಗಳು ನಡೆದಿದ್ದು, ಕ್ರಮವಹಿಸಲಾಗಿದೆ’ ಎನ್ನುತ್ತಾರೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ. 

ಮಾಲತಿಪ್ರಿಯಾ
ಮಾಲತಿಪ್ರಿಯಾ
ಹರ್ಷಕುಮಾರ್ ಚಿಕ್ಕನರಗುಂದ
ಹರ್ಷಕುಮಾರ್ ಚಿಕ್ಕನರಗುಂದ

ಮೈಸೂರು ವಿಭಾಗದಲ್ಲಿ ಬೇಟೆ ವನ್ಯಜೀವಿ ಅಪರಾಧ ಪ್ರಕರಣಗಳು ಸಂಪೂರ್ಣ ತಗ್ಗಿವೆ. ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ನಾಗರಹೊಳೆ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ

-ಮಾಲತಿಪ್ರಿಯಾ ಸಿಸಿಎಫ್‌ ಮೈಸೂರು

ಮಾನವ ವನ್ಯಜೀವಿ ಸಂಘರ್ಷ ಹೆಚ್ಚಿರುವ ಮೇಟಿಕುಪ್ಪೆ ವೀರನಹೊಸಹಳ್ಳಿ ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್‌ಗಳ ಅಳವಡಿಕೆ ಕಾರ್ಯ ಭರದಿಂದ ನಡೆದಿದೆ. ಕಾಡಂಚಿನಲ್ಲಿ ಸಂಘರ್ಷ ಹಾಗೂ ಅಪರಾಧ ತಡೆಯುವುದು ಸಿಬ್ಬಂದಿಯ ಗುರಿ

-ಹರ್ಷಕುಮಾರ್ ಚಿಕ್ಕನರಗುಂದ ಡಿಸಿಎಫ್‌ ನಾಗರಹೊಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT