ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತಾಗಿ ಬಾರದ ಆಂಬ್ಯುಲೆನ್ಸ್‌...!

Last Updated 28 ಮೇ 2014, 6:55 IST
ಅಕ್ಷರ ಗಾತ್ರ

ಸಾಲಿಗ್ರಾಮ: ಅಪಘಾತ ಅಥವಾ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ತುರ್ತುಚಿಕಿತ್ಸೆ ಅಗತ್ಯ ಬಿದ್ದಾಗ ಸಕಾಲದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿ, ಜೀವ ಉಳಿಸುವ ‘ತುರ್ತುವಾಹನ’ ನಿಂತು 8ತಿಂಗಳು ಕಳೆದಿದೆ!.

ಇದರಿಂದ ನೂರಾರು ರೋಗಿಗಳಿಗೆ ಆಂಬ್ಯುಲೆನ್ಸ್‌ ಸೌಲಭ್ಯ ದೊರಕದೆ, ಖಾಸಗಿ ವಾಹನದಲ್ಲಿ ಪ್ರಯಾಣ ಮಾಡಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಎದುರಾಗಿದೆ.

ಇದು ಕೆ.ಆರ್. ನಗರ ತಾಲ್ಲೂಕಿನ ಸಾಲಿಗ್ರಾಮ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತುರ್ತುಚಿಕಿತ್ಸೆ ಬಯಸಿ ಬರುವ ರೋಗಿಗಳಿಗೆ ಸಿಗುತ್ತಿ­ರುವ ಸಾಕ್ಷಾತ್ ನರಕಯಾತನೆ. ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುಮಾರು 15ವರ್ಷಗಳ ಹಿಂದೆ ತುರ್ತುವಾಹನವನ್ನು ನೀಡಲಾಗಿದ್ದು ಪದೇ ಪದೇ ರಿಪೇರಿಗೆ ಬರುವ ಜತೆಗೆ ರೋಗಿಗಳನ್ನು ತುರ್ತುಚಿಕಿತ್ಸೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲೇ ಕೆಟ್ಟು ನಿಂತು ರೋಗಿ­ಗಳನ್ನು ಮತ್ತಷ್ಟು ಕಂಗಾಲಾ­ಗು­ವಂತೆ ಮಾಡುತ್ತಿತ್ತು.

ಕಳೆದ 8 ತಿಂಗಳ ಹಿಂದೆ ಕೆಟ್ಟು ಹೋದ ವಾಹನ ರಿಪೇರಿಗೆ ಸಂಬಂಧ­ಪಟ್ಟ ಇಲಾಖೆ ಎಂಜಿನಿಯರ್‌ ‘ಈ ವಾಹನ ತುರ್ತು ಸಂಚಾರಕ್ಕೆ ಯೋಗ್ಯ­ವಲ್ಲ’ ಎಂದು ಸಲಹೆ ನೀಡಿದ ಮೇರೆಗೆ ಈ ವಾಹನವನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲೇ ನಿಲ್ಲಿಸಲಾಗಿದೆ. ಅಲ್ಲದೆ 108 ತುರ್ತುವಾಹನ ಕೂಡಾ ಕಳೆದ 2 ತಿಂಗಳ ಹಿಂದೆಯೇ ಕೆಟ್ಟಿದ್ದು, ರಿಪೇರಿಗೆ ಹೋದ ವಾಹನ  ಇನ್ನೂ ವಾಸಸ್ಸಾಗಿಲ್ಲ.
ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ 400ಕ್ಕೂ ಅಧಿಕ ರೋಗಿಗಳು ಬರುವುದರ ಜತೆಗೆ ಹೆರಿಗೆ, ವಿಷ ಸೇವನೆ, ಅಪಘಾತ, ಹಾವು ಕಚ್ಚಿದ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸಲು ತಾಲ್ಲೂಕು ಅಥವಾ ಜಿಲ್ಲಾಸ್ಪತ್ರಗೆ ಕೆರೆದೊಯ್ಯಲು ಆಂಬ್ಯುಲೆನ್ಸ್‌ ಸೇವೆಯೆ ಇಲ್ಲದಂತಾಗಿದೆ.

ತಾಲ್ಲೂಕಿನ ಸಾಲಿಗ್ರಾಮ, ಹನಸೋಗೆ ಮತ್ತು ಕೆ.ಆರ್. ನಗರ ಆಸ್ಪತ್ರೆಗೆ 108 ವಾಹನವನ್ನು ಸರ್ಕಾರ ನೀಡಿದ್ದು, ಇವುಗಳ ಪೈಕಿ ಹನಸೋಗೆ ಮತ್ತು ಸಾಲಿಗ್ರಾಮ ಆಸ್ಪತ್ರೆಗಳ ತುರ್ತು ವಾಹನ ಕೆಟ್ಟು ನಿಂತಿವೆ. ಸಕಾಲದಲ್ಲಿ ರೋಗಿಗಳಿಗೆ ತುರ್ತುವಾಹನ ಸೌಲಭ್ಯ ಸಿಗದ ಹಿನ್ನೆಲೆಯಲ್ಲಿ ತಾಲ್ಲೂಕಿನ ಅನೇಕ ರೋಗಿಗಳು ತೊಂದರೆ ಅನುಭವಿಸಿ­ದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಗಳು ಈ ಬಗ್ಗೆ ಕ್ರಮಕೈಗೊಳ್ಳಲ್ಲಿ ಎಂದು ಜನರು ಮನವಿ ಮಾಡಿಕೊಂಡಿದ್ದಾರೆ.

ಶಾಸಕರಿಗೆ ಮನವಿ: ಸರ್ಕಾರಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗಂಧನಹಳ್ಳಿ, ಮೇಲೂರು, ಹರದನಹಳ್ಳಿ, ಮುಂಡೂರು ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹೆಚ್ಚಿನ ರೋಗಿಗಳು ತುರ್ತುಚಿಕಿತ್ಸೆಗೆ ಬರುತ್ತಿರುವ ಹಿನ್ನೆಲೆ­ಯಲ್ಲಿ ತುರ್ತುವಾಹನ ಇಲ್ಲದೆ ಬಡ ರೋಗಿಗಳು ಪರಿತಪ್ಪಿಸುತ್ತಿದ್ದಾರೆ. ಆದ್ದರಿಂದ ತಮ್ಮ ಹುಟ್ಟೂರಿನ ಆಸ್ಪತ್ರೆಗೆ ತುರ್ತುವಾಹನವನ್ನು ನೀಡಬೇಕು ಎಂದು ಜನರು ಶಾಸಕ ಸಾ.ರಾ.ಮಹೇಶ್ ಅವರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT