ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದಾನದಲ್ಲಿ ಬಾಂಬ್‌ ಸ್ಫೋಟ, ಗನ್‌ ಸದ್ದು!

ಗಣರಾಜ್ಯೋತ್ಸವ: ತ್ರಿವರ್ಣಧ್ವಜದ ರಂಗು, ದೇಶ ಭಕ್ತಿಯ ಹಣತೆ ಹಚ್ಚಿದ ಮಕ್ಕಳು
Last Updated 27 ಜನವರಿ 2019, 4:53 IST
ಅಕ್ಷರ ಗಾತ್ರ

ಮೈಸೂರು: ದಸರಾ ಪಂಜಿನ ಕವಾಯತು ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ವೇದಿಕೆಯಾಗುವ ಬನ್ನಿಮಂಟಪ ಮೈದಾನದಲ್ಲಿ ಶನಿವಾರ ಇದ್ದಕ್ಕಿದ್ದಂತೆ ಬಾಂಬ್‌ ಸ್ಫೋಟ, ಗನ್‌ ಸದ್ದು!

ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರರು ಬಾಂಬ್‌ ಸ್ಫೋಟಿಸಿದರು. ತಕ್ಷಣವೇ ಅಲರ್ಟ್‌ ಆದ ಕಮಾಂಡೊಗಳು ಆ ಮನೆ ಸುತ್ತುವರಿದು ಉಗ್ರರನ್ನು ಸದೆಬಡಿದರು. ಸೈನಿಕರ ಬಂದೂಕಿನಿಂದ ಹಾರಿದ ಗುಂಡುಗಳಿಗೆ ಭಯೋತ್ಪಾದಕರು ಚಿತ್‌ ಆದರು. ಕಾರ್ಯಾಚರಣೆಯನ್ನು ಯಶಸ್ಸುಗೊಳಿಸಿದ ಸೈನಿಕರು ಸಂಭ್ರಮಿಸಿದರು.

ಅಂದಹಾಗೆ, ಇದು ನಿಜವಾದ ಕಾರ್ಯಾಚರಣೆ ಅಲ್ಲ; ಬದಲಾಗಿ ಅಣಕು ಕಾರ್ಯಾಚರಣೆ. ಜಿಲ್ಲಾಡಳಿತದ ವತಿಯಿಂದ ಶನಿವಾರ ಆಯೋಜಿಸಿದ್ದ 70ನೇ ಗಣರಾಜ್ಯೋತ್ಸವದಲ್ಲಿ ಸಿಟಿ ಪ್ಯಾಂಥರ್ಸ್‌ ಕಮಾಂಡೊಗಳು ಈ ಪ್ರದರ್ಶನ ನೀಡಿ ಕಾರ್ಯಾಚರಣೆಯ ಚಿತ್ರ ಕಟ್ಟಿಕೊಟ್ಟರು.

ಮತ್ತೊಂದೆಡೆ ಉಗ್ರರ ದಾಳಿಯಿಂದ ಗಣ್ಯರನ್ನು ರಕ್ಷಣೆ ಮಾಡುವ ಅಣಕು ಪ್ರದರ್ಶನ ಗಮನ ಸೆಳೆಯಿತು. ಇಲ್ಲೂ ಬಂದೂಕಿನಿಂದ ಗುಂಡುಗಳು ಚಿಮ್ಮಿದವು!

ಬಾಂಬ್‌ಗಳ ಮೊರೆತ ಹಾಗೂ ಗುಂಡಿನ ಸದ್ದು ನೋಡುಗರ ಎದೆ ಝಲ್ಲೆನಿಸಿದವು. ಮಕ್ಕಳು ತುಸು ಬೆದರಿದರು. ಮೈಕಿನಲ್ಲಿ ಅಣಕು ಕಾರ್ಯಾಚರಣೆಯ ವೀಕ್ಷಕ ವಿವರಣೆಯೂ ಇತ್ತು. ಜಿಲ್ಲಾಡಳಿತವು ಇದೇ ಮೊದಲ ಬಾರಿ ಇಂಥ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಕಾರ್ಯಾಚರಣೆಯ ವಿಧಾನವನ್ನು ಜನರಿಗೆ ತಿಳಿಸಿಕೊಟ್ಟಿತು. ಜನರ ಚಪ್ಪಾಳೆಯು ಸೈನಿಕರಿಗೆ ಹುಮ್ಮಸ್ಸು ತುಂಬಿತು.

ಗಣರಾಜ್ಯೋತ್ಸವ ಅಂಗವಾಗಿ ಮೈದಾನದಲ್ಲಿ ತ್ರಿವರ್ಣಧ್ವಜದ ರಂಗು. ವಿದ್ಯಾರ್ಥಿಗಳು, ಸೈನಿಕರು, ‍ಪೊಲೀಸರು ದೇಶ ಭಕ್ತಿಯ ಹಣತೆ ಹಚ್ಚಿದರು. ಪ್ರೇಕ್ಷಕರ ಕಂಗಳಲ್ಲಿ ದೇಶ ಪ್ರೇಮದ ಧಾರೆ. ವಿಶಾಲ ಬಯಲು ಪ್ರದೇಶದಲ್ಲಿ ಮಕ್ಕಳು ಏಕತೆಯ ಸಂದೇಶ ಸಾರುವ ನೃತ್ಯ ಪ್ರದರ್ಶಿಸಿದರು. ರಾಷ್ಟ್ರೀಯ ಭಾವೈಕ್ಯ ಸಾರುವ ಗೀತೆಗೆ ತ್ರಿವರ್ಣ ಧ್ವಜ ಬೀಸಿದ ಪರಿ ನೋಡುಗರ ಹೃದಯ ಹಾಗೂ ಮನಸ್ಸುಗಳನ್ನು ಪ್ರಫುಲ್ಲಗೊಳಿಸಿತು.

ಸಿಕೆಸಿ ಪ್ರೌಢಶಾಲೆಯ ಸುಮಾರು 450 ಮಕ್ಕಳು ಯೋಗಾಸನ ಪ್ರದರ್ಶಿಸಿದರು. ಸದ್ವಿದ್ಯಾ ಪ್ರೌಢಶಾಲೆ 500 ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ನೃತ್ಯ ಪ್ರಸ್ತುತಪಡಿಸಿದರು. ವಿದ್ಯಾವರ್ಧಕ ಸಂಘ, ಬಿಎಂಶ್ರೀ ವಿದ್ಯಾಸಂಸ್ಥೆಯ 500 ಮಕ್ಕಳು ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ನೃತ್ಯದ ಮೂಲಕ ಅನಾವರಣಗೊಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ರಾಷ್ಟ್ರಧ್ವಜ ನೆರವೇರಿಸಿ ತೆರೆದ ಜೀಪಿನಲ್ಲಿ ಸಾಗಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ 24 ತುಕಡಿಗಳಿಂದ ಪಥಸಂಚಲ ನಡೆಯಿತು. ಪೊಲೀಸ್, ಎನ್‌ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ಶಾಲಾ ಮಕ್ಕಳು ಪಥ ಸಂಚಲನದಲ್ಲಿ ಪಾಲ್ಗೊಂಡರು. ಶಿಸ್ತಿನಿಂದ ಹೆಜ್ಜೆ ಹಾಕಿ ಗಮನ ಸೆಳೆದರು.

ಇದೇ ಮೋದಲ ಬಾರಿ ಭಾರತೀಯ ಚುನಾವಣಾ ಆಯೋಗದಿಂದ ವಿಶೇಷ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿತು. ಮತದಾನ ಜಾಗೃತಿ ಮೂಡಿಸುವ ಬೋರ್ಡ್ ಹಿಡಿದು ಶಾಲಾ ಮಕ್ಕಳು ಪಥ ಸಂಚಲನದಲ್ಲಿ ಪಾಲ್ಗೊಂಡರು.

‘ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನೀವು ಆತ್ಮಹತ್ಯೆ ಮಾಡಿಕೊಂಡು ನಿಮ್ಮ‌ ಕುಟುಂಬವನ್ನ ಬೀದಿಪಾಲು ಮಾಡಬೇಡಿ. ರೈತರ ಸಾಲಮನ್ನಾ ನಮ್ಮ‌ ಸರ್ಕಾರದ ಉದ್ದೇಶವಲ್ಲ. ರೈತರನ್ನ ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ಧಿ ‌ಮಾಡುವುದು ನಮ್ಮ‌ ಗುರಿ. ಬಡವರ ಮನೆ ಬಾಗಿಲಿಗೇ ನಮ್ಮ ಸರ್ಕಾರ ಹೋಗಿ ಸಮಸ್ಯೆ ಆಲಿಸಲಿದೆ’ ಎಂದು ದೇವೇಗೌಡ ಹೇಳಿದರು.

ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದವರಿಗೆ ಸುಮತಿನಾಥ ಜೈನ ನವಯುವಕ ಮಂಡಲ ವತಿಯಿಂದ ಉಪಾಹಾರ ಏರ್ಪಡಿಸಲಾಗಿತ್ತು.

ಶಾಸಕ ತನ್ವೀರ್‌ ಸೇಠ್‌, ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್‌, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ನಗರ ಪೊಲೀಸ್‌ ಕಮಿಷನರ್‌ ಕೆ.ಟಿ.ಬಾಲಕೃಷ್ಣ, ಎಸ್‌ಪಿ ಅಮಿತ್‌ ಸಿಂಗ್‌, ಮುಡಾ ಆಯುಕ್ತ ಕಾಂತರಾಜ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT