ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತೂರುಗಳಲ್ಲಿ ಹೆತ್ತೂರು ಸುಗ್ಗಿ ಸಂಭ್ರಮ

10 ಗ್ರಾಮಗಳು ಒಟ್ಟಾಗಿ ಆಚರಿಸುವ ಹೆತ್ತೂರು ದೇವೀರಮ್ಮನವರ ಮಹೋತ್ಸವ
Last Updated 21 ಏಪ್ರಿಲ್ 2019, 10:48 IST
ಅಕ್ಷರ ಗಾತ್ರ

ಹೆತ್ತೂರು: ಹಂಚು ಎತ್ತಬೇಡ, ಒಣಗು ಮುರಿಬೇಡ, ಹಸಿ ಕಡಿಬೇಡ, ಒಳಗಿರೋರು ಒಳಗೆ, ಹೊರಗಿರೋರು ಹೊರಗೆ, ಸುಗ್ಗಿಯಮ್ಮನ ಸಾರೋ ಸಾರು....

ಹೀಗೆ ಡಂಗೂರ ಹಾಕುತ್ತಾ ಮನೆ ಮನೆಗೆ ಹೋಗಿ ಸಾರಿದರೆ ಆಗಿನಿಂದ ಜಾರಿಗೊಳ್ಳುತ್ತದೆ 9 ದಿನಗಳವರೆಗೆ ನಡೆಯುವ ಹೆತ್ತೂರು ದೇವೀರಮ್ಮ ನವರ ಸುಗ್ಗಿ ಉತ್ಸವದ ನೀತಿ ಸಂಹಿತೆ. ಅಂದಿನಿಂದ ಮಾಂಸಾಹಾರ ಸೇವನೆ, ಸೌದೆ ಕಡಿಯುವುದು, ಒಡೆಯುವುದು, ಹೆಂಚಿನಲ್ಲಿ ಆಹಾರ ಪದಾರ್ಥ ಬೇಯಿಸುವುದು, ಒಗ್ಗರಣೆ ಹಾಕುವುದು ದೂರದ ಊರಿಗೆ ಪ್ರಯಾಣ ಬೆಳೆಸುವುದು ಸಂಪೂರ್ಣ ಬಂದ್‌.

ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಹೆತ್ತೂರು ನಾಡಿನ ಹೆತ್ತೂರು, ಹಾಡ್ಲಹಳ್ಳಿ, ಕಿರ್ಕಳ್ಳಿ, ಮರ್ಕಳ್ಳಿ, ಮೆಕ್ಕಿರಮನೆ, ಮಟಗೂರು, ಕೊಣಬನ ಹಳ್ಳಿ ಸೇರಿದಂತೆ ಹತ್ತಾರು ಊರುಗಳ ಎಲ್ಲ ವರ್ಗದ ಜನರು ಒಗ್ಗೂಡಿ ಸುಗ್ಗಿ ಉತ್ಸವ ಆಚರಿಸುತ್ತಾರೆ. ವರ್ಷಪೂರ್ತಿ ದುಡಿಯುವ ರೈತರಿಗೆ, ಮಹಿಳೆಯರ ದೇಹ, ಮನಸ್ಸಿಗೆ ವಿಶ್ರಾಂತಿ ಸಿಗಲಿ ಹಾಗೂ ಸುಗ್ಗಿ ಉತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಸಂಭ್ರಮಿಸಲಿ ಎನ್ನುವ ಉದ್ದೇಶದಿಂದ ಈ ಕಟ್ಟುಪಾಡುಗಳನ್ನು ಮಾಡಲಾಗಿದೆ.

ಪ್ರತಿವರ್ಷ ಯುಗಾದಿಯ ನಂತರ ಬರುವ ಮಂಗಳವಾರದಿಂದ 9 ದಿನಗಳವರೆಗೆ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವರ ಸುಗ್ಗಿ ಉತ್ಸವ ಆಚರಿಸಲಾಗುತ್ತದೆ.

ಕಾಡು ಒಡೆಯನ ಸುಗ್ಗಿ: ಹೆತ್ತೂರು ನಾಡಿಗೆ ಸೇರಿದ ಎಲ್ಲ ಮನೆಗಳಲ್ಲಿ ಸುಗ್ಗಿಯ ನಿಯಮಗಳನ್ನು ಸಾರಲು ಬಂದವರಿಗೆ ಅಕ್ಕಿ, ಬೆಲ್ಲ, ಒಣಮೆಣಸು ಇನ್ನಿತರೆ ಪದಾರ್ಥಗಳನ್ನು ನೀಡುತ್ತಾರೆ. ಅವರು ಅದರಲ್ಲಿ ಅಂದು ರಾತ್ರಿ ನೈವೇದ್ಯ ಮಾಡಿ ಬಾಸಿಂಗ ಕಟ್ಟೆಯಲ್ಲಿರುವ ಕಾಡಿನೊಡಯನ ದೇವರಿಗೆ ಅರ್ಪಿಸಿ ಸುಗ್ಗಿ ಕುಣಿಯುತ್ತಾರೆ.

ಹೊನ್ನಾರು ಸುಗ್ಗಿ: ಸಾರು ಹಾಕಿದ ಮೂರನೇ ದಿನ, ಗುರುವಾರ ರಾತ್ರಿ ಯಿಂದ ಶುಕ್ರವಾರ ಬೆಳಿಗ್ಗೆವರೆಗೂ ಹೊನ್ನಾರು ಸುಗ್ಗಿ ಆಚರಿಸುತ್ತಾರೆ. ಗ್ರಾಮದ ಬಡಗಿ ಕುಟುಂಬದವರು ಸಾಂಪ್ರದಾಯಿಕವಾಗಿ ನೇರಳೆ ಮರದಿಂದ ಮಾಡಿದ ಚಿಕ್ಕ ನೇಗಿಲನ್ನು ಬಳಸಿ ಶುಕ್ರವಾರ ಮುಂಜಾನೆ ಹೊನ್ನಾರು ಬಿತ್ತಲಾಗುತ್ತದೆ.

ನೇಗಿಲನ್ನು ಹಿಡಿದುಕೊಂಡು ದವಸ ಧಾನ್ಯಗಳನ್ನು ಹೊನ್ನಾರು ಸುಗ್ಗಿಕಟ್ಟೆ ಆವರಣದಲ್ಲಿ ಓಡಿಕೊಂಡು ಚೆಲ್ಲುತ್ತ ವೃತ್ತಾಕಾರವಾಗಿ ಒಂದು ಸುತ್ತು ಬರಲಾಗುತ್ತದೆ. ಹೀಗೆ ಬಿತ್ತಿದ ಹೊನ್ನಾರಿನಲ್ಲಿ ದವಸ ಧಾನ್ಯ ಎಲ್ಲಿ ಹೆಚ್ಚು ಚೆಲ್ಲಿರುತ್ತದೆಯೋ ಆ ದಿಕ್ಕಿನಲ್ಲಿ ಹದವಾದ ಮಳೆಯಾಗಿ ಉತ್ತಮ ಫಸಲು ಕೈಸೇರಲಿದೆ ಎನ್ನುವುದು ಇಲ್ಲಿನ ಜನರ ನಂಬಿಕೆ.

ಬಿಲ್ಲುಸುಗ್ಗಿ (ದೊಡ್ಡಸುಗ್ಗಿ): ಸುಗ್ಗಿ ಉತ್ಸವದ ಎಂಟನೇ ದಿನವಾದ ಮಂಗಳವಾರ ರಾತ್ರಿ ಗ್ರಾಮದ ಸುಗ್ಗಿ ಕಟ್ಟೆಯಲ್ಲಿ ದೊಡ್ಡಸುಗ್ಗಿ ನಡೆಯುತ್ತದೆ.

ಮನೆ ಮನೆಗಳಲ್ಲಿ ನಕ್ಷತ್ರಾಕಾರವಾಗಿ ಬಿದಿರಿನ ಪಟ್ಟಿ ಕಟ್ಟಿ ಅದಕ್ಕೆ ಕಣಗಲೆ ಸೇರಿದಂತೆ ವಿವಿಧ ಹೂವುಗಳಿಂದ ಅಲಂಕರಿಸಿದ ಬಿಲ್ಲನ್ನು ವಾದ್ಯಮೇಳದೊಂದಿಗೆ ಮೆರವಣಿಗೆ ಯಲ್ಲಿ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ದೇವರಿಗೆ ಮೀಸಲು ಇದ್ದವರು ಮಾಡಿದ ರೊಟ್ಟಿ, ಕೋಸಂಬರಿ ಯನ್ನು ಎಡೆಮಾಡಿ ಬಿಲ್ಲು ಕಟ್ಟಿದವರಿಗೆ ಹಾಗೂ ಭಕ್ತರಿಗೆ ವಿತರಿಸಲಾಗುತ್ತದೆ.

ಬಳಿಕ, ಗ್ರಾಮದ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಕುಣಿಸುತ್ತಾ ಮೆರವಣಿಗೆಯ ಮೂಲಕ ಕೊಂಡೊಯ್ದು ಸುಗ್ಗಿಕಟ್ಟೆಯಲ್ಲಿರುವ ಉಯ್ಯಾಲೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ, ಸುಗ್ಗಿಕಟ್ಟೆಯ ಆವರಣದ ಸುತ್ತಲೂ ಬೆಳಿಗ್ಗೆವರೆಗೂ ಹತ್ತು ಗ್ರಾಮಗಳ ಹಿರಿಯರು, ಕಿರಿಯರು ಎಂದು ಲೆಕ್ಕಿಸದೇ ಸಾಂಪ್ರದಾಯಿಕ ವಾದ್ಯಕ್ಕೆ ಸುಗ್ಗಿ ಕುಣಿಯುತ್ತಾರೆ. ಅದಕ್ಕೆ, ಹೆಣ್ಣುಮಕ್ಕಳೂ ಹೆಜ್ಜೆ ಹಾಕುವ ಮೂಲಕ ಮೆರುಗು ಹೆಚ್ಚಿಸುತ್ತಾರೆ. ಸಾಂಪ್ರದಾಯಿಕ ವಸ್ತ್ರ ತೊಟ್ಟು ಕುಣಿವ ಕತ್ತಿ ಕುಣಿತವೂ ಸಂಭ್ರಮವನ್ನು ಹೆಚ್ಚಿಸುತ್ತದೆ.

ಬುಧವಾರ ಮುಂಜಾನೆ ಮತ್ತೆ ಮೆರವಣಿಗೆಯಲ್ಲಿ ಸ್ವಸ್ಥಾನಕ್ಕೆ ದೇವರನ್ನು ತರಲಾಗುತ್ತದೆ.

ಮಡೆ ಉತ್ಸವ: ಅಂತಿಮ ದಿನವಾದ ಬುಧವಾರ ಮಧ್ಯಾಹ್ನ ಅದ್ಧೂರಿಯಾಗಿ ಮಡೆ ಉತ್ಸವ ಆಚರಿಸಲಾಗುತ್ತದೆ. ದೇವರಿಗೆ ನೈವೇದ್ಯವನ್ನು ತಯಾರಿಸಿ ಅದನ್ನು ಚಿಕ್ಕಮ್ಮ ದೇವಿಯನ್ನು ಇಟ್ಟಿರುವ, ಅಲಂಕೃತ ಕುಕ್ಕೆಯಲ್ಲಿ ಇಟ್ಟು, ದೇವಿರಮ್ಮನ ಉತ್ಸವ ಮೂರ್ತಿ ಯೊಂದಿಗೆ ದೇವರ ಬನದಲ್ಲಿರುವ ಮಡೆಬನಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯ ಲಾಗುತ್ತದೆ. ಉತ್ಸವ ಸಾಗುವ ಮಾರ್ಗದುದ್ದಕ್ಕೂ ಭಕ್ತರು ಈಡುಗಾಯಿ ಹೊಡೆದು, ಕಾಣಿಕೆ, ಹರಕೆಗಳನ್ನು ಅರ್ಪಿಸುತ್ತಾರೆ.

ಮಾರ್ಗದಲ್ಲಿ ಸಿಗುವ ದೇವರ ಕೆರೆಯಲ್ಲಿ ಮೂಗುತಿ ಹುಡುಕುವ ಶಾಸ್ತ್ರ ನಡೆಯುತ್ತದೆ. ದೇವಿರಮ್ಮ ತಾಯಿ ತನ್ನ ಮೂಗುತಿಯನ್ನು ಈ ಕೆರೆಯಲ್ಲಿ ಕಳೆದುಕೊಂಡಿದ್ದಾಳೆಂದು, ಅದನ್ನು ತವರಿಗೆ ಹೋಗುವಾಗ ಹುಡುಕುತ್ತಾಳೆ ಎನ್ನುವ ಪ್ರತೀತಿ ಇದೆ.

ದೇವರ ಬನದಲ್ಲಿ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವರನ್ನು ಇಟ್ಟುಪ್ರತ್ಯೇಕವಾಗಿ ಪೂಜೆ ಸಲ್ಲಿಸುತ್ತಾರೆ. ಚಿಕ್ಕಮ್ಮ ದೇವರಿಗೆ ನವದಂಪತಿಗಳು ಪೂಜೆ ಸಲ್ಲಿಸುವ ಮೂಲಕ ಮಡೆ ಮುಗಿಯುತ್ತಾರೆ. ಬಳಿಕ ದೇವರುಗಳನ್ನು ಅದೇ ಮಾರ್ಗದಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದುಪೂಜೆ ಸಲ್ಲಿಸಿ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT