ಮಂಗಳವಾರ, ಜನವರಿ 28, 2020
22 °C
ವೃತ್ತಿಯಿಂದ ಉಪನ್ಯಾಸಕ; ಪ್ರವೃತ್ತಿಯಿಂದ ಹಾಸ್ಯ ಕಲಾವಿದ

ಹಾಸ್ಯದ ಗರಿಮೆ ಮೆರೆದ ಗಿರೀಶ

ಅಮರನಾಥ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ದೇವರಹಿಪ್ಪರಗಿ: ‘ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ;ನಗುವ, ನಗಿಸುವ, ನಗಿಸಿ, ನಗುತ ಬಾಳುವ ವರವಮಿಗೆ ನೀನು ಬೇಡಿಕೊಳ್ಳೊ’ ಎಂಬ ಉಕ್ತಿಯಂತೆ ಪಟ್ಟಣದ ಗಿರೀಶ ಕುಲಕರ್ಣಿ ಅವರು ತಮ್ಮ ಗಂಭೀರ ತೆಳುಹಾಸ್ಯದ 350ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ತಾಲ್ಲೂಕಿನಾದ್ಯಂತ ಚಿರಪರಿಚಿತರಾಗಿದ್ದಾರೆ.

ಪಟ್ಟಣದ ಹರನಾಳ ಕುಲಕರ್ಣಿ ಮನೆತನದ ಗಿರೀಶ ಕುಲಕರ್ಣಿ ಎಂಎ, ಬಿ.ಇಡಿ ಪದವೀಧರರು. ಎಂಟು ವರ್ಷಗಳಿಂದ ಸಿಂದಗಿಯ ಪದ್ಮರಾಜ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಸ್ಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಇವರು ಸಿಂದಗಿ, ದೇವರಹಿಪ್ಪರಗಿ, ಕನ್ನೋಳ್ಳಿ, ಬೋರಗಿ-ಪುರದಾಳ, ಗೋಲಗೇರಿ, ಬೂದಿಹಾಳಗಳಲ್ಲಿ ಜರುಗಿದ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿಜಯಪುರ, ಮುದ್ದೇಬಿಹಾಳ, ಬಸವನಬಾಗೇವಾಡಿ, ತಾಂಬಾ, ಚಡಚಣ, ದೇವರ ಗೆಣ್ಣೂರ, ನಾಲತವಾಡ, ಆಲಮೇಲ, ತಿಕೋಟಾ, ಜಾಯವಾಡಗಿ, ಗುಬ್ಬೇವಾಡಗಳಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ನವಿರು ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

‘ನಾನು ಬಿಎ ಓದುತ್ತಿರುವಾಗ ಕಾಲೇಜಿನ ಕಾರ್ಯಕ್ರಮಗಳಲ್ಲಿ ಜೋಕ್ಸ್, ಚುಟುಕುಗಳನ್ನು ಹೇಳುತ್ತಿದ್ದೆ. ಆ ಮೂಲಕ ನನ್ನಲ್ಲಿದ್ದ ಸಭಾ ಕಂಪನವನ್ನು ಹೋಗಲಾಡಿಸಿ, ಧೈರ್ಯ ತುಂಬಿಕೊಂಡೆ. ಕ್ರಮೇಣ ಗಣೇಶ ಚತುರ್ಥಿ, ನವರಾತ್ರಿ ಉತ್ಸವ, ಕನ್ನಡ ರಾಜ್ಯೋತ್ಸವ ದಿನಗಳಂದು ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ಶಾಲಾ ಕಾಲೇಜುಗಳ ವಾರ್ಷಿಕ ಸ್ನೇಹ ಸಮ್ಮೇಳನಗಳಲ್ಲಿ ಭಾಗವಹಿಸಲು ಆರಂಭಿಸಿದೆ. ಇಲ್ಲಿ ಒಂದು ಗಂಟೆ ಕಾರ್ಯಕ್ರಮ ನೀಡುತ್ತಿದ್ದಂತೆಯೇ ಬೇರೆ ಬೇರೆ ಕಡೆಗಳಿಂದ ಕರೆಗಳು ಬರಲಾರಂಭಿಸಿದವು’ ಎಂದು ಗಿರೀಶ ಕುಲಕರ್ಣಿ ತಮ್ಮ ಸಾಧನೆಯನ್ನು ಬಿಚ್ಚಿಟ್ಟರು.

‘ಇದುವರೆಗೆ 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಕೆಲವು ಕಾರ್ಯಕ್ರಮಗಳಲ್ಲಿ ಜನಪ್ರಿಯ ಹಾಸ್ಯ ಕಲಾವಿದರಾದ ಇಂದುಮತಿ ಸಾಲಿಮಠ, ಬಸವರಾಜ ಮಾಮನಿ, ರವಿ ಭಜಂತ್ರಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ನನ್ನ ಸೌಭಾಗ್ಯ. ಹಾಸ್ಯ ಪ್ರಸಂಗಗಳಿಗೆ ಪೂರಕವಾಗಿ ಜೋಕ್ಸ್, 5000ಕ್ಕೂ ಹೆಚ್ಚು ಹನಿಗವನ ಸಂಗ್ರಹ ಸೇರಿದಂತೆ ಚುಟುಕು, ಡೊಳ್ಳು, ಜಾನಪದ ಗೀತೆಗಳನ್ನು ಸಾಂದರ್ಭಿಕವಾಗಿ ಹಾಡುವುದನ್ನು ಕರಗತ ಮಾಡಿಕೊಂಡಿದ್ದೇನೆ. ನನ್ನ ಕಲೆಗೆ ಕಾಲೇಜಿನ ಸಿಬ್ಬಂದಿ, ಸ್ನೇಹಿತರು, ಮುಖ್ಯವಾಗಿ ನನ್ನ ಕುಟುಂಬ ಹಾಗೂ ದೇವರಹಿಪ್ಪರಗಿಯ ಜನತೆ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದು ಸ್ಮರಿಸಿಕೊಂಡರು.

ಸಂಪರ್ಕ: 98869 22086

ಪ್ರತಿಕ್ರಿಯಿಸಿ (+)