ಭಾನುವಾರ, ಸೆಪ್ಟೆಂಬರ್ 15, 2019
30 °C

ಗಾಂಧಿಗಿರಿ ಮೂಲಕ ಗಾಂಧಿ ವೃತ್ತ ನಿರ್ಮಾಣ

Published:
Updated:
Prajavani

ದೇವರಹಿಪ್ಪರಗಿ: ಮಹಾತ್ಮ ಗಾಂಧಿ ತತ್ವಗಳನ್ನೇ ನಂಬಿದ ಮಹಾನುಭಾವರೊಬ್ಬರ ಛಲದಿಂದ ನಿರ್ಮಾಣವಾದ ವೃತ್ತವೇ ಹಿಟ್ಟಿನಹಳ್ಳಿಯ ಗಾಂಧಿ ವೃತ್ತ.

ಬಹುತೇಕ ವೃತ್ತಗಳ ನಿರ್ಮಾಣದ ಹಿಂದೆ ಸ್ವಾರಸ್ಯಕರ ವಿಷಯ, ಕಥೆ, ಕಾರಣಗಳು ಇರುವಂತೆ ಹಿಟ್ಟಿನಹಳ್ಳಿಯ ಗಾಂಧಿ ವೃತ್ತ ನಿರ್ಮಾಣದ ಕಾರಣ ಹಾಗೂ ಕರ್ತೃ ವಿಶೇಷವಾಗಿದ್ದಾರೆ. ಅವರೇ ದಿ. ರುಕುಮ್‌ ಪಟೇಲ ಅಮೀನ್‌ ಪಟೇಲ್ ಬಿರಾದಾರ.

‘ಗ್ರಾಮದಲ್ಲಿ ಗಾಂಧೀಜಿ ವೃತ್ತ ನಿರ್ಮಿಸುವಂತೆ ಆಗ್ರಹಿಸಿ 25 ವರ್ಷ ಅವಿರತವಾಗಿ ಕೇವಲ ಪಂಚೆ ಧರಿಸಿ, ಒಂದೇ ಹೊತ್ತು ಆಹಾರ ಸೇವಿಸಿ, ಗಾಂಧಿಗಿರಿ ಮೂಲಕ ಅಂದು ಸಂಸದರಾಗಿದ್ದ ಬಸನಗೌಡ ಪಾಟೀಲ ಯತ್ನಾಳರ ಗಮನ ಸೆಳೆದರು. ₹1.60 ಲಕ್ಷ ಸಂಸದರ ಅನುದಾನದಡಿ, ಗಂಗನಹಳ್ಳಿ-ಚಿಕ್ಕರೂಗಿ ಗ್ರಾಮ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಗಾಂಧಿ ಪ್ರತಿಮೆಯೊಳಗೊಂಡ ವೃತ್ತ ನಿರ್ಮಿಸುವುದರ ಮೂಲಕ 2003-04ರಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗುವಂತೆ ಶ್ರಮಿಸಿದರು’ ಎಂದು ಗ್ರಾಮದ ಹಿರಿಯರಾದ ಅಪ್ಪಾರಾಯ ಬಿರಾದಾರ ಹಾಗೂ ಎಂ.ಎಂ.ಪಾಟೀಲ ವೃತ್ತ ನಿರ್ಮಾಣದ ಹಿನ್ನೆಲೆಯನ್ನು ಬಿಚ್ಚಿಟ್ಟರು.

ಗಾಂಧಿ ವೃತ್ತ ನಮ್ಮೂರಿನ ವಿಶೇಷ. ನಾಲ್ಕು ಕಂಬಗಳ ಮಧ್ಯೆ ವೃತ್ತಾಕಾರದ ಕಟ್ಟೆ ನಿರ್ಮಿಸಿ ನಡುವೆ ಶುಭ್ರ ಬಿಳಿ ಶಿಲೆಯಲ್ಲಿ ಹಸನ್ಮುಖಿ ಗಾಂಧಿ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಮೇಲುಗಡೆ ಗುಮ್ಮಟಾಕಾರದಲ್ಲಿ ವಿನ್ಯಾಸ ಮಾಡಿ ವೃತ್ತಕ್ಕೆ ಕಬ್ಬಿಣದ ಗ್ಯಾಲರಿ ನಿರ್ಮಿಸಲಾಗಿದೆ. ಮುಂದುಗಡೆ ಬಲಭಾಗದಲ್ಲಿ ಧ್ವಜಸ್ತಂಭ ನಿಲ್ಲಿಸಲಾಗಿದ್ದು, ಇದನ್ನು ಕರ್ನಾಟಕ ಭೂಸೇನಾ ನಿಗಮದವರು ಅಂದಿನ ರುಕುಮ್‌ ಪಟೇಲ್ ಬಿರಾದಾರ ಅವರ ಆಶಯ ಹಾಗೂ ಬಸನಗೌಡ ಪಾಟೀಲರ ನಿರ್ದೇಶನದಂತೆ ನಿರ್ಮಾಣ ಮಾಡಿದ್ದಾರೆ.

‘ವೃತ್ತವನ್ನು ಗಾಂಧೀಜಿ ಜಯಂತಿ, ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ದಿನಗಳಂದು ವಿಶೇಷವಾಗಿ ಸಿಂಗರಿಸಿ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ’ ಎನ್ನುತ್ತಾರೆ ಗ್ರಾಮದ ಗಾಂಧಿ ಪ್ರೇಮಿಗಳಾದ ಎಂ.ಜಿ.ಪಾಟೀಲ, ಮಲಕಪ್ಪ ಬಿರಾದಾರ ಹಾಗೂ ಚನ್ನಪ್ಪ ಕುಂಬಾರ.

Post Comments (+)