ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಿಂದ ರಾಷ್ಟ್ರೀಯ ನಾಟಕೋತ್ಸವ

Last Updated 12 ಫೆಬ್ರುವರಿ 2020, 13:44 IST
ಅಕ್ಷರ ಗಾತ್ರ

ಶಿವಮೊಗ್ಗ: ಸುವರ್ಣಸಂಸ್ಕೃತಿ ಭವನದಲ್ಲಿರಾಷ್ಟ್ರೀಯ ನಾಟಕೋತ್ಸವ ಫೆ.15ರಿಂದ 22ರ ವರೆಗೆ ಎಂಟು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ತಿಳಿಸಿದರು.

ನಾಟಕೋತ್ಸವವನ್ನು 15ರಂದು ಸಂಜೆ 6.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಬಿ.ವೈ.ರಾಘವೇಂದ್ರ ರಂಗ ತಂಡಗಳ ವಿಶಿಷ್ಟ ನಾಟಕಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸುವರು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

15ರಂದು ಮಣಿಪುರದ ಎನ್.ಟಿ. ಥಿಯೇಟರ್ ತಂಡದಿಂದ ಹಂಟರ್ಸ್ ಸಾಂಗ್’ ಮಣಿಪುರಿ ನಾಟಕ ಪ್ರದರ್ಶನ, 16ರಂದು ರಾಹಿ ಥಿಯೇಟರ್ ಮುಂಬಯಿ ತಂಡದಿಂದ ‘ಜಲ್ಕಾರಿ’ ಹಿಂದಿ ನಾಟಕ, 17ರಂದು ಪಾದುವ ರಂಗ ಅಧ್ಯಯನ ಕೇಂದ್ರ ಮಂಗಳೂರು ತಂಡದಿಂದ ‘ಕೆಂಡೋನಿಯನ್ಸ್’ ತುಳು ನಾಟಕ, 18ರಂದು ರಂಗಾಯಣ ಧಾರವಾಡದ ‘ವಿದಿಶಾ ಪ್ರಹಸನ’ ಕನ್ನಡ ನಾಟಕ, 19 ರಂದು ನೃತ್ಯ ನಿಕೇತನ ಕೊಡವೂರು ಉಡುಪಿ ತಂಡದಿಂದ ‘ನಾರಸಿಂಹ’ ನೃತ್ಯ ನಾಟಕ, 20 ರಂದು ಸ್ಥಳೀಯ ಕಲಾ ತಂಡಗಳಿಂದ ರಂಗಗೀತೆ ಮತ್ತು ರಂಗರೂಪಕ ಪ್ರದರ್ಶನ, 21 ರಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡಬಿದರೆ ತಂಡದಿಂದ ‘ಧಾಂ ಧೂಂ ಸುಂಟರಗಾಳಿ’ ಕನ್ನಡ ನಾಟಕ, 22ರಂದು ಅನನ್ಯ ಬೆಂಗಳೂರು ತಂಡದಿಂದ ‘ಉಚ್ಛಿಷ್ಟ’ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.

ನಾಟಕೋತ್ಸವದ ಅಂಗವಾಗಿ ರಂಗಭೂಮಿ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಶಿಕ್ಷಣದಲ್ಲಿ ರಂಗಭೂಮಿ ವಿಷಯದಲ್ಲಿ ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ. 20ರಂದು ಬೆಳಿಗ್ಗೆ 11ಕ್ಕೆ ಬಿ.ಎಂ. ಕುಮಾರಸ್ವಾಮಿ ವಿಚಾರಸಂಕಿರಣ ಉದ್ಘಾಟಿಸುವರು. ‘ಸಾಮಾಜಿಕ ಮನೋ ವಿಕಸನದಲ್ಲಿ ರಂಗಭೂಮಿಯ ಪಾತ್ರ’ ವಿಷಯದ ಕುರಿತು ಗೋಷ್ಠಿಯಲ್ಲಿ ಕಟೀಲ್ ಅಶೋಕ ಪೈ ಕಾಲೇಜು ಪ್ರಾಂಶುಪಾಲರು ಡಾ.ಸಂಧ್ಯಾ ಕಾವೇರಿ ವಿಷಯ ಮಂಡಿಸುವರು. ‘ಯುವ ಸಮೂಹ ಮತ್ತು ರಂಗಭೂಮಿ’ ಕುರಿತ ಎರಡನೇ ಗೋಷ್ಠಿಯಲ್ಲಿ ಪ್ರೊ.ಗೌರಿಶಂಕರ್ ವಿಷಯ ಮಂಡಿಸುವರು. `ಶಿಕ್ಷಣದಲ್ಲಿ ರಂಗಭೂಮಿಯ ಪ್ರಾತ್ಯಕ್ಷಿಕೆ’ ಕುರಿತು ಡಾ.ಸಾಸ್ವೆಹಳ್ಳಿ ಸತೀಶ್ ವಿಷಯ ಮಂಡಿಸುವರು. ‘ಮಕ್ಕಳ ರಂಗಭೂಮಿಯಲ್ಲಿ ತಂತ್ರಜ್ಞಾನದ ಅಳವಡಿಕೆ’ ಕುರಿತು ಶ್ರವಣ್ ಹೆಗ್ಗೋಡು ವಿಷಯ ಮಂಡಿಸುವರು ಎಂದು ಮಾಹಿತಿ ನೀಡಿದರು.

ಶಿವಮೊಗ್ಗ ರಂಗಾಯಣದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಹೊ.ನ.ಸತ್ಯ, ಇಕ್ಬಾಲ್ ಅಹಮದ್ ಮತ್ತು ಡಾ.ಎಂ. ಗಣೇಶ್ ಅವರನ್ನು ನಾಟಕೋತ್ಸವದ ಸಂದರ್ಭದಲ್ಲಿ ಗೌರವಿಸಲಾಗುವುದು. ಪ್ರತಿ ನಾಟಕಕ್ಕೆ ₹ 20 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕೋತ್ಸವದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ರಂಗ ಸಮಾಜ ಸದಸ್ಯ ಹಾಲಸ್ವಾಮಿ, ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್, ನಾಟಕೋತ್ಸವದ ಸಂಚಾಲಕ ಮಂಜುನಾಥ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT