ಗುರುವಾರ , ಮಾರ್ಚ್ 23, 2023
30 °C
ನಾಗಮಂಗಲದ ಆರಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಎಲ್.ಆರ್.ಶಿವರಾಮೇಗೌಡ

ಮುಖಂಡರ ಜೇಬು ತುಂಬಿದೆ, ಅಭಿವೃದ್ಧಿ ಆಗಿಲ್ಲ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ‘ಕಳೆದ ಇಪ್ಪತ್ತೈದು ವರ್ಷಗಳಲ್ಲಿ ತಾಲ್ಲೂಕಿನ ಅಭಿವೃದ್ಧಿಯ ಸಾಧನೆ ಶೂನ್ಯ. ಆದರೆ, ಕೆಲವು ಮುಖಂಡರ ಜೇಬು ಭರ್ತಿಯಾಗಿದೆ’ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು.

ತಾಲ್ಲೂಕಿನ ಆರಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯ ನಂತರ ಕಂಚನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಶಾಸಕರಾಗುವುದು ತಾಲ್ಲೂಕಿನ ಮತ್ತು ಜನರ ಅಭಿವೃದ್ಧಿ ಮಾಡುವುದಕ್ಕಾಗಿಯೇ ಹೊರತು ವೈಯಕ್ತಿಕ ಅಭಿವೃದ್ಧಿ ಮಾಡಿಕೊಳ್ಳಲು ಅಲ್ಲ. ನನ್ನ ನಂತರ ತಾಲ್ಲೂಕಿನಲ್ಲಿ ‌ಅಧಿಕಾರ ಪಡೆದ ಚಲುವರಾಯಸ್ವಾಮಿ, ಸುರೇಶ್ ಗೌಡ ಅವರು ಮಾಡಿರುವ ಅಭಿವೃದ್ಧಿಯಾದರೂ ಏನು? 800 ಮತದಾರರಿರುವ ಈ ಊರಿಗೆ ದಶಕಗಳು ಕಳೆದರೂ ಸಮರ್ಪಕ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ನನ್ನ ಅವಧಿಯಲ್ಲಿ ಮಾಡಿರುವ ರಸ್ತೆ, ಶಾಲೆ, ಕುಡಿಯುವ ನೀರಿ‌ನ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಿಲ್ಲ. ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಾಗುವಳಿ ಚೀಟಿ ನೀಡಲು ಜನರಿಂದ ಲಕ್ಷಾಂತರ ರೂಪಾಯಿ ಪಡೆಯಲಾಗುತ್ತಿದೆ’ ಎಂದು ಆರೋಪಿಸಿದರು.

‘ತಾಲ್ಲೂಕಿನ ಮೈಲಾರಪಟ್ಟಣ ಮತ್ತು ಕೋಟೆಬೆಟ್ಟ ಮುಖ್ಯ ರಸ್ತೆಗಳು ಶಾಸಕರ ಮನೆಯ ಮುಂದೆಯೇ ಹಾದು ಹೋಗುತ್ತಿವೆ. ಅದನ್ನು ನೋಡಿ ನಂತರ ತಾಲ್ಲೂಕಿನ ಅಭಿವೃದ್ಧಿಯ ಬಗ್ಗೆ ಮಾತನಾಡಲಿ. ಜತೆಗೆ ಗುತ್ತಿಗೆದಾರರಿಂದ ಒಂದು ರೂಪಾಯಿಯನ್ನು ಪಡೆದಿಲ್ಲ ಎಂದು ಶಾಸಕ ಸುರೇಶ್ ಗೌಡರು ಧರ್ಮಸ್ಥಳದ ಅಣ್ಣಪ್ಪ ಸ್ವಾಮಿಯ ಮುಂದೆ ಪ್ರಮಾಣ ಮಾಡಲಿ. ನಾನೂ ಹಣ ನೀಡಿರುವವರ ಕಡೆಯಿಂದ ಪ್ರಮಾಣ ಮಾಡಿಸಲು ಸಿದ್ಧ’ ಎಂದು ಸವಾಲು ಹಾಕಿದರು.

‘ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು, ಜನರ ಬಳಿಗೆ ಹೋಗಿ ಮತ ಕೇಳುತ್ತೇನೆ. ನನಗೆ ಆಶೀರ್ವಾದ ಮಾಡಿದರೆ ತಾಲ್ಲೂಕಿನ ಜನರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ’ ಎಂದರು.

ಇರಕನಘಟ್ಟ, ಆರಣಿ ಸೇರಿದಂತೆ ಹಲವು ಗ್ರಾಮಗಳ ಯುವಕರು ಬೇರೆ ಪಕ್ಷಗಳನ್ನು ತ್ಯಜಿಸಿ ಶಿವರಾಮೇಗೌಡರ ಬಣಕ್ಕೆ ಸೇರ್ಪಡೆಯಾದರು.

ಮುಖಂಡರಾದ ಎಲ್.ಎಸ್.ಚೇತನ್ ಗೌಡ, ಪಾಳ್ಯ ರಘು, ಮಂಜೇ ಗೌಡ, ಗ್ರಾಮಸ್ಥರಾದ ರಾಜಣ್ಣ, ಸಿದ್ಧಲಿಂಗಣ್ಣ, ಲಕ್ಷ್ಮಣಗೌಡ, ಗಂಗಣ್ಣ, ಶಿವಕುಮಾರ್, ಯೋಗೇಶ್, ಧನಂಜಯ್, ತಿಮ್ಮೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.