ಪಾದಚಾರಿ ಮಾರ್ಗ ಅತಿಕ್ರಮಣ

ಶುಕ್ರವಾರ, ಏಪ್ರಿಲ್ 26, 2019
35 °C
ಜಾಣ ಕುರುಡು ಪ್ರದರ್ಶಿಸುತ್ತಿರುವ ಅಧಿಕಾರಿಗಳು: ಆರೋಪ

ಪಾದಚಾರಿ ಮಾರ್ಗ ಅತಿಕ್ರಮಣ

Published:
Updated:
Prajavani

ಶಿವಮೊಗ್ಗ: ನಗರದ ಹಲವೆಡೆ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಪಾದಚಾರಿ ಮಾರ್ಗಗಳು ಅತಿಕ್ರಮಣವಾಗಿದ್ದು, ಇದರಿಂದ ಪಾದಚಾರಿಗಳು ಹಲವು ಸಮಸ್ಯೆ ಎದುರಿಸುವಂತಾಗಿದೆ.

ನಗರದ ಜನನಿಬಿಡ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗವನ್ನು ಬೀದಿಬದಿ ವ್ಯಾಪಾರಿಗಳು, ಅಂಗಡಿಗಳ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರು ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಅನೇಕರು ಅನಿವಾರ್ಯವಾಗಿ ರಸ್ತೆಗಳಿಗೆ ಇಳಿಯಬೇಕಾದ ಪರಿಸ್ಥಿತಿ ಇದ್ದು, ಅಪಘಾತದ ಭೀತಿ ಎದುರಿಸುವಂತಾಗಿದೆ. 

ನಗರದ ಬಿ.ಎಚ್. ರಸ್ತೆ, ನೆಹರೂ ರಸ್ತೆ, ಗಾಂಧಿ ಬಜಾರ್, ವಿನೋಬನಗರ, ಸವಳಂಗ ರಸ್ತೆ, ಬಾಲರಾಜ ಅರಸ್‌ ರಸ್ತೆ, ಕುವೆಂಪು ರಸ್ತೆ ಹೀಗೆ ಹತ್ತು ಹಲವು ಜನನಿಬಿಡ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳು ಎಲ್ಲಿದೆ ಎಂಬುದನ್ನು ಹುಡುಕಬೇಕಿದೆ. ಬಹುತೇಕ ಕಡೆ ರಸ್ತೆಬದಿ ವ್ಯಾಪಾರಿಗಳು ಅತಿಕ್ರಮಣ ಮಾಡಿ ಪಾದಚಾರಿ ಮಾರ್ಗದ ಮೇಲೆಯೇ ವಸ್ತುಗಳನ್ನು ಮಾರಾಟಕ್ಕೆ ಇರಿಸಿದ್ದಾರೆ. ಇದರಿಂದ ಓಡಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.‌

ಬಿ.ಎಚ್‌.ರಸ್ತೆ, ನೆಹರೂ ರಸ್ತೆ, ವಿನೋಬನಗರ, ಸವಳಂಗ ರಸ್ತೆ ಅತ್ಯಂತ ಜನನಿಬಿಡವಾಗಿದೆ. ಈ ರಸ್ತೆಯ ಎರಡು ಬದಿಯಲ್ಲಿ ಹತ್ತಾರು ಶಾಲೆ, ಕಾಲೇಜುಗಳು ಇವೆ. ಸಾವಿರಾರು ವಿದ್ಯಾರ್ಥಿಗಳು ಈ ರಸ್ತೆಗಳನ್ನು ಹಾದು ಶಾಲೆ, ಕಾಲೇಜುಗಳಿಗೆ ಹೋಗಿ ಬರುತ್ತಿದ್ದಾರೆ. ಆದರೆ ಪಾದಚಾರಿ ಮಾರ್ಗ ಅತಿಕ್ರಮಣದಿಂದಾಗಿ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ಹಿರಿಯರು ಅನಿವಾರ್ಯವಾಗಿ ರಸ್ತೆಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಿತ್ಯವೂ ನರಕಯಾತನೆ:

ಒಂದೆಡೆ ಅಂಗಡಿಗಳು, ವ್ಯಾಪಾರಸ್ಥರು, ನಾಗರಿಕರು ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿದ್ದರೆ, ಮತ್ತೊಂದೆಡೆ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯಲ್ಲಿಯೇ ಪಾರ್ಕಿಂಗ್‌ ಮಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ. ವರ್ಷದಿಂದ ವರ್ಷಕ್ಕೆ ಪಾದಚಾರಿ ಮಾರ್ಗ ಅತಿಕ್ರಮಣ ಹೆಚ್ಚುತ್ತಲೇ ಇದೆ.  ಆದರೆ ಪೊಲೀಸರು, ಪಾಲಿಕೆಯ ಅಧಿಕಾರಿಗಳು, ಸಂಬಂಧಿಸಿದ ಜನಪ್ರತಿನಿಧಿಗಳು ಈ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಸಂಚಾರ ಪೊಲೀಸರು ಪಾದಚಾರಿ ಮಾರ್ಗಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಮೌನ ವಹಿಸಿದ್ದಾರೆ ಎನ್ನುವುದು ನಾಗರಿಕರ ದೂರು.

ರಾಜರೋಷವಾಗಿ ಅತಿಕ್ರಮಣ:

ಕೆಲವೆಡೆ ವ್ಯಾಪಾರಸ್ಥರು ಪಾದಚಾರಿ ಮಾರ್ಗಗಳನ್ನು ರಾಜಾರೋಷವಾಗಿ ಅತಿಕ್ರಮಿಸಿದ್ದಾರೆ. ವ್ಯಾಪಾರದ ಸರಕುಗಳನ್ನು ಪಾದಚಾರಿ ಮಾರ್ಗಗಳಲ್ಲಿಟ್ಟು ಅಡಚಣೆ ಮಾಡುತ್ತಿದ್ದಾರೆ. ಸಾಮಾನ್ಯ ಜನರು ಇದನ್ನು ಪ್ರಶ್ನಿಸಲಾಗದೆ, ಸಂಕಷ್ಟ ಅನುಭವಿಸುವಂತಾಗಿದೆ.

ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡಿಕೊಂಡು ಬದುಕು ನಡೆಸುವವರು ಅನೇಕ ಮಂದಿ ಇದ್ದಾರೆ. ಆದರೆ, ಅತಿಕ್ರಮಣ ಮಾಡಿಕೊಂಡು ವಸ್ತುಗಳನ್ನು ವ್ಯಾಪಾರಕ್ಕೆ ಇಟ್ಟರೆ ಪಾದಚಾರಿಗಳಿಗೆ ತೊಂದರೆ ಆಗಲಿದೆ. ಇದನ್ನು ತಪ್ಪಿಸಬೇಕಾದರೆ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳವನ್ನು ಗುರುತಿಸಬೇಕು. ಸಾರ್ವಜನಿಕರ ಓಡಾಡಕ್ಕೆ ಅನುಕೂಲ ಕಲ್ಪಿಸಬೇಕು ಎಂದು  ಮೋಹನ್ ಒತ್ತಾಯಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !