ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಭೆ ನಿಯಂತ್ರಣಕ್ಕಾಗಿ ಪ್ರಸಾದ ವಿತರಣೆಗೆ ತಡೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Last Updated 16 ಫೆಬ್ರುವರಿ 2023, 16:26 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ಸಮುದಾಯಗಳ ನಡುವಿನ ಪೈಪೋಟಿಯಿಂದ ಗಲಭೆ ನಡೆಯುವುದನ್ನು ತಪ್ಪಿಸುವುದಕ್ಕಾಗಿ ಉಡುಪಿ ಜಿಲ್ಲೆ ಕಾಪು ತಾಲ್ಲೂಕಿನ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಾಲಯದ ತಟ್ಟೆ ಪ್ರಸಾದ ಮತ್ತು ಅಜೆಕಾಯಿ ಪ್ರಸಾದ ವಿತರಣೆಗೆ ಜಿಲ್ಲಾಧಿಕಾರಿಯವರು ತಾತ್ಕಾಲಿಕವಾಗಿ ತಡೆ ವಿಧಿಸಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ವಿಧಾನ ಪರಿಷತ್‌ನಲ್ಲಿ ಗುರುವಾರ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ಉತ್ತರ ನೀಡಿದ ಅವರು, ‘ಎಲ್ಲೂರು ವಿಶ್ವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಯಾವುದೇ ಸಂಪ್ರದಾಯ ಮತ್ತು ಆಚರಣೆಗಳನ್ನು ಕೈಬಿಟ್ಟಿಲ್ಲ. ಆದರೆ, ಸ್ಥಳೀಯವಾಗಿ ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಜಿಲ್ಲಾಧಿಕಾರಿ ಕೆಲವು ಕ್ರಮ ಕೈಗೊಂಡಿದ್ದಾರೆ’ ಎಂದರು.

ಎರಡು ಸಮುದಾಯಗಳ ಜನರಿಗೆ ತಟ್ಟೆ ಪ್ರಸಾದ ಮತ್ತು ಅಜೆಕಾಯಿ ಪ್ರಸಾದ ವಿತರಿಸಲಾಗುತ್ತದೆ. ಎರಡೂ ಸಮುದಾಯಗಳ ಜನರು ತಮಗೆ ಮೊದಲು ಪ್ರಸಾದ ವಿತರಿಸುವಂತೆ ಪಟ್ಟು ಹಿಡಿದಿದ್ದರು. ಇದರಿಂದ ಸಂಘರ್ಷದ ವಾತಾವರಣ ಉಂಟಾಗಿತ್ತು. ಪ್ರಸಾದ ವಿತರಣೆಗೆ ಸಂಬಂಧಿಸಿದ ಪ್ರಕರಣ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲೂ ದಾಖಲಾಗಿತ್ತು. ಅಲ್ಲಿ ವಿಚಾರಣೆ ಮುಗಿಯುವವರೆಗೂ ಪ್ರಸಾದ ವಿತರಣೆಗೆ ತಡೆ ವಿಧಿಸಿದ್ದಾರೆ ಎಂದು ತಿಳಿಸಿದರು.

‘105 ಕುಟುಂಬಗಳಿಗೆ ಪ್ರಸಾದ ವಿತರಿಸಲಾಗುತ್ತಿತ್ತು. ನೂರಾರು ವರ್ಷಗಳ ಸಂಪ್ರದಾಯವನ್ನು ಬಲಾತ್ಕಾರದಿಂದ ತಡೆಯಲಾಗುತ್ತಿದೆ. ಸಂಪ್ರದಾಯದಂತೆ ಪ್ರಸಾದ ವಿತರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ವೆಂಕಟೇಶ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT