ಶುಕ್ರವಾರ, ಸೆಪ್ಟೆಂಬರ್ 17, 2021
30 °C

ದೇವರಿಗಿಂತ ಅನ್ನ ಮೊದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಣ್ಣನವರು ಮನುಷ್ಯನಿಗೆ ಮೂಲಭೂತವಾಗಿ ಬೇಕಾಗಿರುವ ಸಮಷ್ಟಿ ಕಲ್ಯಾಣ ಕಟ್ಟಿದರು. ದೇವರಿಗಿಂತ ಮೊದಲು ಅನ್ನ ಬೇಕು. ಕಷ್ಟಕ್ಕೆ ದೇವರು ಪರಿಹಾರವಲ್ಲ. ದುಡಿಮೆಯೇ ಪರಿಹಾರ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಜೀವನದ ಮೌಲ್ಯಗಳಿಗೆ ಬಸವಣ್ಣ ಮೆಟ್ಟಿಲು ಮಾಡಿ ಹೋಗಿದ್ದಾರೆ.

ಅನುಭಾವಿಯ ಅನುಭಾವವೇ ವೇದ. ಚರ್ತುವರ್ಣ ವ್ಯವಸ್ಥೆ ದೇಶಕ್ಕೆ ದೊಡ್ಡ ಶಾಪ, ಕಳಂಕ. ಬಸವಣ್ಣನವರು ಜಾತ್ಯತೀತ ವಾದದ ಪ್ರಜಾಪ್ರಭುತ್ವ ಶರಣ ಧರ್ಮವನ್ನು ತಂದರು. ದಲಿತ ಸಮಾಜದಲ್ಲಿ ಜನಿಸಿದ ಅಂಬೇಡ್ಕರ್‌ ನೋವು ಅನುಭವಿಸಿದರು. ದಲಿತರನ್ನು ಉದ್ಧಾರ ಮಾಡಿದ ಅವರು ಬಹಳ ದೊಡ್ಡವರು. ಬಸವಣ್ಣ ಬ್ರಾಹ್ಮಣ ಸಮಾಜದಲ್ಲಿ ಜನಿಸಿ ಮಾದರ ಚೆನ್ನಯ್ಯನ ಮಗನೆಂದು ಹೇಳಿಕೊಂಡಿದ್ದು, ಎಷ್ಟು ದೊಡ್ಡದು ಎಂದು ಕಲ್ಪನೆ ಮಾಡಿಕೊಳ್ಳಬೇಕು ನಾವುಗಳು.

ಗುಡಿ ಕಟ್ಟುವ ಸಂಸ್ಕೃತಿಗಿಂತ ಕೆಳ ವರ್ಗದವರನ್ನು ಮೇಲಕ್ಕೆತ್ತುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಇಂದಿಗೂ ಜಾತಿ ವಾಸನೆ ಹೋಗುತ್ತಿಲ್ಲ. ಮೇಲು-ಕೀಳು ಎಂಬ ಭೇದವನ್ನು ಲಿಂಗ ಹೊಡೆದು ಹಾಕಿತ್ತು. ಗಾಂಧೀಜಿಗೆ ಹರ್ಡೇಕರ್‌ ಮಂಜಪ್ಪ ಬಸವಣ್ಣನವರ ಕಾಯಕ, ಅಸ್ಪ್ರಶ್ಯತೆ ನಿವಾರಣೆ ತತ್ವ ಹೇಳಿದಾಗ ಅವರು ಈ ಎರಡೂ ತತ್ವಗಳನ್ನು ಅನುಸರಿಸಿದರೆ, ದೇಶವನ್ನು ಸಮೃದ್ಧಿಯಾಗಿ ಕಟ್ಟಬಹುದು ಎಂದು ಹೇಳಿದ್ದರು.

ಎಲ್ಲರನ್ನೂ ಎತ್ತಿಕೊಳ್ಳುವ ಶಕ್ತಿ ಬಸವಣ್ಣನವರ ತತ್ವದಲ್ಲಿದೆ. ಕಾಯಕ ತತ್ವ ತಂದವ ಬಸವಣ್ಣ. ಅವರು ಕಾಯಕಕ್ಕೆ ದೈವತ್ವ ತಂದರು. ಮನುಷ್ಯ ಸೇರಿದಂತೆ ಜಗತ್ತಿನ ಗಿಡ-ಮರ, ಪ್ರಾಣಿ, ನೀರಿಗೆ ಬಸವಣ್ಣ ನ್ಯಾಯ ನೀಡಿದರು. ರಾಷ್ಟ್ರಕ್ಕೆ ದಿವ್ಯ ಔಷಧ ಬಸವಣ್ಣ. ನಾವು ಎಂದಿಗೂ ಅವರನ್ನು ಮರೆಯಬಾರದು.

ಜಗತ್ತಿಗೆ ಶಾಪ ಕೊಡುವವನು ಸ್ವಾಮಿಯಲ್ಲ. ತಾಪ ಕಳೆಯುವವನು ಸ್ವಾಮಿ. ಜನರಲ್ಲಿ ತುಂಬಿರುವ ಅಜ್ಞಾನವನ್ನು ಸ್ವಾಮಿಗಳಾದವರು ತೊಲಗಿಸಬೇಕು. ಅವರಿಗೆ ಸರಿಯಾದ ಮಾರ್ಗ ತೋರಿಸಬೇಕು. ಅವರಲ್ಲಿರುವ ಭಯ ತೆಗೆದು ಉತ್ತಮ ಬದುಕು ಸಾಗಿಸುವ ಮಾರ್ಗ ತೋರಿಸಬೇಕು. ಪ್ರತಿಯೊಬ್ಬರೂ ಜೀವನವನ್ನು ಚೆನ್ನಾಗಿ ಕಳೆಯುವಂತಾಗಬೇಕು.

ಸಂಗ್ರಹ: ಪ್ರಕಾಶ.ಎನ್‌.ಮಸಬಿನಾಳ

ಬಸವನಬಾಗೇವಾಡಿಯಲ್ಲಿ ನಡೆಯುತ್ತಿರುವ ಪ್ರವಚನ ಸಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು