ಮಂಗಳವಾರ, ನವೆಂಬರ್ 12, 2019
26 °C

ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ಆಗ್ರಹ: ನಾಳೆ ಪ್ರತಿಭಟನಾ ಜಾಥಾ

Published:
Updated:

ಶಿವಮೊಗ್ಗ: ಕಾಡು ಪ್ರಾಣಿಗಳ ಉಪಟಳ ನಿಯಂತ್ರಿಸಲು ಆಗ್ರಹಿಸಿ ಅ.21ರಂದು ಪ್ರವಾಸಿಮಂದಿರದ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ.

ಮಲೆನಾಡಿನಲ್ಲಿ ಮಂಗಗಳು, ಆನೆ ಮತ್ತಿತರ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳು ನಾಶವಾಗುತ್ತಿವೆ. ಬೆಳೆಗಳನ್ನು ಕಾಡು ಪ್ರಾಣಿಗಳಿಂದ ಸಂರಕ್ಷಿಸಬೇಕು ಎಂಬ ಹಕ್ಕೋತ್ತಾಯಕ್ಕಾಗಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡಿನ ಮುಖಂಡರಾದ ಪುರುಷೋತ್ತಮ್ ಬೆಳ್ಳಕ್ಕಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾಗರ, ಹೊಸನಗರ ತಾಲ್ಲೂಕು ರೈತರು ತೀರಾ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಡು ಪ್ರಾಣಿಗಳು ಸಾಂಪ್ರಾದಾಯಿಕ ಬೆಳೆಗಳಾದ ಗೇರು, ಕಾಳುಮೆಣಸು, ಶುಂಠಿ, ಅಡಿಕೆ, ತೆಂಗು, ಬಾಳೆ, ಭತ್ತ, ಕಾಫಿ, ಹಣ್ಣಿನ ಬೆಳೆ, ತರಕಾರಿ, ಹೂವು ಹಾಳುಮಾಡುತ್ತಿವೆ. ಮಂಗಗಳ ಕಾಟ ಮಿತಿ ಮೀರಿದೆ. ಮಂಗಗಳು ಶೇ 10ರಷ್ಟು ತಿಂದರೆ, ಶೇ 90ರಷ್ಟು ಹಾಳುಮಾಡುತ್ತವೆ. ಅಡಿಕೆ ಮರಗಳನ್ನೂ ಬಿಡುತ್ತಿಲ್ಲ. ಸಾಂಬಾರು ಬೆಳೆಗಳು ಕೂಡ ಸಂಪೂರ್ಣ ನಾಶವಾಗುತ್ತಿವೆ ಎಂದು ಅಳಲು ತೋಡಿಕೊಂಡರು.

ಒಂದೇ ಹೋಬಳಿಯಲ್ಲಿ ಸುಮಾರು ₨ 3 ಕೋಟಿ ಮೌಲ್ಯದ ಏಲಕ್ಕಿ ಬೆಳೆ, ₨ 2 ಕೋಟಿ ಮೌಲ್ಯದ ಬಾಳೆ, ಶುಂಠಿ ನಾಶ ಮಾಡಿವೆ. ಆನೆಗಳಿಗಿಂತ ಹೆಚ್ಚು ನಾಶ ಈ ಮಂಗಗಳಿಂದ ಆಗುತ್ತಿದೆ. ಮನೆಗಳಿಗೂ ಬಂದು ಕಿರುಕುಳ ನೀಡುತ್ತವೆ. ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಹೋಗುತ್ತಿವೆ ಎಂದು ದೂರಿದರು.

ಅರಣ್ಯ ನಿಯಮಗಳ ಅನ್ವಯ ಮಮಂಗಳನ್ನು ಕೊಲ್ಲುವಂತಿಲ್ಲ. ಹಾಗಾಗಿ, ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಕಾಡುಕೋಣ, ಆನೆ, ಹಂದಿ ಮೊದಲಾದ ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಶಾಶ್ವತ ಬೇಲಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)