ಕಾರ್ಯಕ್ರಮ ಮೊಟಕು: ಪೌರಕಾರ್ಮಿಕರಿಗೆ ನಿರಾಸೆ

7
44 ಕಾರ್ಮಿಕರಿಗೆ ಸೇವೆ ಕಾಯಂ ಆದೇಶಪತ್ರ ವಿತರಿಸದ ಜಿಲ್ಲಾಧಿಕಾರಿ

ಕಾರ್ಯಕ್ರಮ ಮೊಟಕು: ಪೌರಕಾರ್ಮಿಕರಿಗೆ ನಿರಾಸೆ

Published:
Updated:
Prajavani

ರಾಮನಗರ: ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಬೇಕಿದ್ದ ಪೌರಕಾರ್ಮಿಕರ ನೇಮಕಾತಿ ಪತ್ರ
ವಿತರಣೆ ಕಾರ್ಯಕ್ರಮವು ಕಡೆಯ ಕ್ಷಣದಲ್ಲಿ ರದ್ದಾಯಿತು. ಇದರಿಂದಾಗಿ ಉದ್ಯೋಗ ಕಾಯಂ ನಿರೀಕ್ಷೆಯಲ್ಲಿ ಇದ್ದ ಕಾರ್ಮಿಕರು ನಿರಾಸೆ ಅನುಭವಿಸಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿತ್ತು. ಅದರಂತೆ ಜಿಲ್ಲೆಯ ಐದು ಸಂಸ್ಥೆಗಳಲ್ಲಿ ಖಾಲಿ ಇರುವ 131 ಹುದ್ದೆಗಳ ಪೈಕಿ ಸೇವೆ ಕಾಯಂಗೊಂಡ 44 ಕಾರ್ಮಿಕರಿಗೆ ಜಿಲ್ಲಾಧಿಕಾರಿ ಆದೇಶ ಪತ್ರ ವಿತರಿಸಬೇಕಿತ್ತು. ಆದರೆ ಕಾರಣಾಂತರದಿಂದ ಕಾರ್ಯಕ್ರಮ ಮೊಟಕುಗೊಳಿಸಿದ ಜಿಲ್ಲಾಧಿಕಾರಿ ಅಲ್ಲಿಂದ ಹೊರ ನಡೆದರು. ಹಾರ–ತುರಾಯಿಗಳೊಂದಿಗೆ ಸಂಭ್ರಮಿಸಲು ಬಂದಿದ್ದ ಕಾರ್ಮಿಕರು ಅಲ್ಲಿಂದ ನಿರಾಸೆಯಿಂದಲೇ ವಾಪಸ್ ಆದರು.

ಸೇವೆ ಕಾಯಂಗೊಂಡ ಕಾರ್ಮಿಕರ ಜೊತೆಗೆ ನೇರ ವೇತನ ಪಾವತಿಗೆ ಆಯ್ಕೆಯಾದ 224 ಪೌರ ಕಾರ್ಮಿಕರು ಜಿಲ್ಲಾಧಿಕಾರಿ ಸಭಾಂಗಣದ ಬಳಿ ನೆರೆದಿದ್ದರು. ಅವರೆಲ್ಲ ಅಧಿಕಾರಿಗಳಿಗೆ, ಆಯುಕ್ತರಿಗೆ ಸನ್ಮಾನ ಮಾಡಲು ಹೂವಿನ ಗುಚ್ಛಗಳು, ಹಾರ, ಶಾಲುಗಳನ್ನು ಖರೀದಿಗೆ ತಂದಿದ್ದರು. ಕಾರ್ಯಕ್ರಮವೇ ನಡೆಯದ ಹಿನ್ನೆಲೆಯಲ್ಲಿ ಅವುಗಳನ್ನು ವಾಪಸ್ ತೆಗೆದುಕೊಂಡು ಹೋದರು.

ರಾಜಕೀಯ ಕಾರಣ: ಪೌರ ಕಾರ್ಮಿಕರ ನೇಮಕಾತಿ ವಿಷಯದಲ್ಲಿ ಆಯುಕ್ತರೇ ತೀರ್ಮಾನ ಕೈಗೊಂಡಿರುವುದು. ಆದೇಶ ಪತ್ರ ವಿತರಣೆ ಕಾರ್ಯಕ್ರಮಕ್ಕೆ ನಗರಸಭೆ, ಪುರಸಭೆಗಳ ಜನಪ್ರತಿನಿಧಿಗಳನ್ನು ಆಹ್ವಾನಿಸದೇ ಹೋದದ್ದು ಮುನಿಸಿಗೆ ಕಾರಣವಾಗಿತ್ತು. ಕೆಲವು ಮುಖಂಡರು ದೂರವಾಣಿ ಕರೆ ಮೂಲಕ ಜಿಲ್ಲಾಧಿಕಾರಿ ಬಳಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು ಎಂದು ಹೇಳಲಾಗುತ್ತಿದೆ.

*
ಆಯ್ಕೆಯಾದ ಎಲ್ಲ ಪೌರಕಾರ್ಮಿಕರ ಆದೇಶಪತ್ರಗಳು ಸಿದ್ಧಗೊಂಡಿವೆ. ಅವುಗಳನ್ನು ಆಯಾ ಸ್ಥಳೀಯ ಸಂಸ್ಥೆಗಳ ಆಯುಕ್ತರ ಮೂಲಕ ವಿತರಿಸಲಾಗುವುದು.
–ಕೆ. ಮಾಯಣ್ಣ ಗೌಡ, ಯೋಜನಾ ನಿರ್ದೇಶಕ , ನಗರಾಭಿವೃದ್ಧಿ ಕೋಶ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !