ಶುಕ್ರವಾರ, ಡಿಸೆಂಬರ್ 6, 2019
19 °C
ತಪ್ಪಿತಸ್ಥರನ್ನು ಗಲ್ಲಿಗೇರಿಸಲು ವಿವಿಧ ಸಂಘಟನೆಗಳ ಒಕ್ಕೊರಲ ಒತ್ತಾಯ

ಪಶುವೈದ್ಯೆ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹೈದರಾಬಾದ್‌ ನಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಘಟನೆ ಖಂಡಿಸಿ ಎನ್ಎಸ್‌ಯುಐ,  ಗಂಧದಗುಡಿ ಫೌಂಡೇಶನ್ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ರಾಜಸ್ಥಾನದ ಜೈಪುರದ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿವೆ. ಮಹಿಳಾ ಸುರಕ್ಷತೆ  ಇಲ್ಲವಾಗಿದೆ.  ಇಂತಹ ಕಾಮಾಂಧರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಆಗ್ರಹಿಸಿದರು.

‘ತೆಲಂಗಾಣ ಸರ್ಕಾರ ಇಂತಹ ನೀಚ ಕೃತ್ಯ ತಡೆಯುವಲ್ಲಿ ವಿಫಲವಾಗಿದೆ. ಮಹಿಳೆಯರಲ್ಲಿ ಅಸುರಕ್ಷತಾ ಭಾವ ಕಾಡುತ್ತಿದೆ. ಕಠಿಣ ನಿಯಮಗಳನ್ನು ಜಾರಿಗೆ ತರಬೇಕು. ವಿಶೇಷ ನ್ಯಾಯಾಲಯ ರಚಿಸಬೇಕು. ಕಾನೂನು ಸುವ್ಯವಸ್ಥೆ ಬಿಗಿಗೊಳಿಸಬೇಕು. ಮಹಿಳಾ ಭದ್ರತೆಗೆ ವಿಶೇಷ ಮಹಿಳಾ ತಂಡ ರಚಿಸಬೇಕು. ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.

ಎನ್ಎಸ್‌ಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಬಾಲಾಜಿ, ಟಿ.ವಿ.ವಿನಯ್, ವಿಜಯ್, ಆರ್.ರಘು, ಅರ್ಜುನ್‌, ಆಕಾಶ್‌, ಗಂಧದ ಗುಡಿ ಫೌಂಡೇಶನ್ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ಕುಶಾಲ್, ಕಾರ್ಯದರ್ಶಿ ಆರ್.ಹೇಮಂತ್, ಬಿ.ವಿ.ಭರತ್, ಪ್ರಹ್ಲಾದ್, ಮಾರುತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸಾಗರದಲ್ಲಿಯೂ ಪ್ರತಿಭಟನೆ

ಸಾಗರ: ಈಚೆಗೆ ಹೈದರಬಾದ್‍ನಲ್ಲಿ ಪಶುವೈದ್ಯೆ ಡಾ. ಪ್ರಿಯಾಂಕ ರೆಡ್ಡಿ ಅವರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಆರೋಪಿಗಳಿಗೆ ತಕ್ಷಣ ಮರಣದಂಡನೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಸೋಮವಾರ ಕ್ರಿಯಾಶೀಲ ಮಹಿಳಾ ಮಂಡಳಿಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಾಗರ ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ಶೋಭಾ ಲಂಬೋದರ್, ‘‌ಪ್ರಕರಣದಲ್ಲಿ ಈಗಾಗಲೇ ಆರೋಪಿಗಳನ್ನು ಬಂಧಿಸ ಲಾಗಿದ್ದು, ತಪ್ಪಿತಸ್ಥರಿಗೆ ಸಮಯಾವಕಾಶ ನೀಡದಂತೆ ಮರಣ ದಂಡನೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

ಈಚಿನ ವರ್ಷಗಳಲ್ಲಿ ಮಹಿಳೆಯರ ಮೇಲೆ ದಿನದಿಂದ ದಿನಕ್ಕೆ ಅತ್ಯಾಚಾರ, ದೌರ್ಜನ್ಯದಂತಹ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಮಹಿಳೆಯರು ಒಬ್ಬಂಟಿಯಾಗಿ ತಿರುಗಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗುತ್ತಿದೆ. ಸರ್ಕಾರ ಮಹಿಳೆಯರ ರಕ್ಷಣೆಗೆ ಅತ್ಯಂತ ಕಠಿಣ ಕಾನೂನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಸ್ನೇಹಸಾಗರ ಸ್ವಸಹಾಯ ಮಂಡಳಿ ಅಧ್ಯಕ್ಷೆ ಚೂಡಾಮಣಿ ರಾಮಚಂದ್ರ ಮಾತನಾಡಿ, ‘ಆರೋಪಿಗಳನ್ನು ಗಲ್ಲಿಗೆ ಏರಿಸುವ ಮೂಲಕ ಮುಂದೆ ಇಂತಹ ಕುಕೃತ್ಯದಲ್ಲಿ ಇತರರು ತೊಡಗದಂತೆ ಸರ್ಕಾರ ಎಚ್ಚರಿಕೆ ನೀಡಬೇಕು. ವಕೀಲರು ವಕಾಲತ್ತು ವಹಿಸಬಾರದು’ ಎಂದು ವಿನಂತಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳಾಪರವಾಗಿ ಗಟ್ಟಿಯಾದ ಕಾನೂನು ಜಾರಿಗೆ ತರುವ ಅಗತ್ಯವಿದೆ.

ದೇಶದಲ್ಲಿ ಇಂತಹ ಕೃತ್ಯ ನಡೆದಾಗ ಆರೋಪಿಗಳನ್ನು ವಿಚಾರಣೆ ನೆಪದಲ್ಲಿ ಹೆಚ್ಚುದಿನ ಜೈಲಿನಲ್ಲಿ ಇರಿಸಿಕೊಳ್ಳದೇ ತಕ್ಷಣ ಅವರಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದು ಅಗ್ರಹಿಸಿದರು. ಗೀತಾ ದಳವಾಯಿ, ಡಿ.ಕೆ.ಸರೋಜ, ಜಯಲಕ್ಷ್ಮೀ ನಾರಾಯಣಪ್ಪ, ನಿರ್ಮಲಾ, ನಂದಾ ಗೊಜನೂರು ಇದ್ದರು.

ಪ್ರತಿಕ್ರಿಯಿಸಿ (+)