ಶನಿವಾರ, ಡಿಸೆಂಬರ್ 14, 2019
24 °C

ಅಂಬೇಡ್ಕರ್‌ಗೆ ಅಪಮಾನ: ದೇಶದ್ರೋಹ ಪ್ರಕರಣ ದಾಖಲಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ವ್ಯಕ್ತಿಗಳ ವಿರುದ್ಧ  ದೇಶದ್ರೋಹದ ದೂರು ದಾಖಲಿಸಬೇಕು ಎಂದು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ಗೋಪಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಆಧುನಿಕ ಯುಗದಲ್ಲಿ ವಿಕೃತ ಮನಸ್ಸಿನ ಮನುವಾದಿಗಳು ದೌರ್ಜನ್ಯ ಮನೋಭಾವ ಹೊಂದಿದ್ದಾರೆ. ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಲಾಗುತ್ತಿದೆ. ಸಾಮಾಜಿಕ ಸಮಾನತೆ ಸಹಿಸದ ಮನುವಾದಿಗಳು ಕುತಂತ್ರಗಳಿಂದ ಸಂವಿಧಾನಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಾಲೆಗಳಲ್ಲಿ ಸಂವಿಧಾನ ದಿನ ಆಚರಿಸಲು ಸರ್ಕಾರ ಹೊರಡಿಸಿದ ಮಾರ್ಗದರ್ಶಿ ಕೈಪಿಡಿಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ. ಅದು ಸಾಮೂಹಿಕ ಪ್ರಯತ್ನದ ಫಲ. ಬೇರೆಬೇರೆ ಸಮಿತಿಗಳು ಬರೆದ ಸಂವಿಧಾನ ಒಟ್ಟುಗೂಡಿಸಿ, ಅಂತಿಮ ಕರಡು ತಯಾರಿಸುವ ಕೆಲಸ ಅಂಬೇಡ್ಕರ್ ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ. ಇದು ಅಂಬೇಡ್ಕರ್ ಚಾರಿತ್ರ್ಯ ನಾಶ ಮಾಡಲು ನಡೆದ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ನಿರ್ದೇಶಕ ಇದಕ್ಕೆ ನೇರ ಹೊಣೆ. ಸಚಿವ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಮುಖಂಡರಾದ ಬಿ.ಎ.ಭಾನುಪ್ರಸಾದ್, ಎಂ.ಶ್ರೀಧರ್, ಎಸ್.ರವೀಂದ್ರ, ಹರೀಶ್ ಬಾಬು, ರಾಮ್ ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)