ಸೋಮವಾರ, ಸೆಪ್ಟೆಂಬರ್ 20, 2021
24 °C
ವಿಶೇಷ ಅಪರಾಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ಉಪವಿಭಾಗಾಧಿಕಾರಿ

ಎಫ್‌ಡಿಎಯಿಂದ ₹1.05 ಕೋಟಿ ದುರುಪಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಬೆಂಗಳೂರಿನಲ್ಲಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಇಲ್ಲಿಯ ಉಪ ವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪ್ರಕಾಶಬಾಬು ಅವರು ಉಪವಿಭಾಗಾಧಿಕಾರಿಯ ಖಾತೆಯಿಂದ ತನ್ನ ಸಂಬಂಧಿಗಳ ಬ್ಯಾಂಕ್‌ ಖಾತೆಗಳಿಗೆ ಒಟ್ಟು ₹1.05 ಕೋಟಿ ವರ್ಗಾಯಿಸಿಕೊಂಡು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

‘ಲೆಕ್ಕಪರಿಶೋಧನೆಯಲ್ಲಿ ಈ ಅಂಶ ಕಂಡು ಬಂದಿದೆ. ಈ ಹಣಕಾಸಿನ ಅವ್ಯವಹಾರದ ಕುರಿತು ಅಗತ್ಯ ಕಾನೂನು ಕ್ರಮ ಜರುಗಿಸಬೇಕು’ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ವಿಶೇಷ ಅಪರಾಧ ಪೊಲೀಸ್‌ ಠಾಣೆಗೆ ಗುರುವಾರ ದೂರು ಸಲ್ಲಿಸಿದ್ದಾರೆ.

ಸರ್ಕಾರದ ಹಣ ದುರುಪಯೋಗ ಆಗಿರುವ ಬಗ್ಗೆ ವಿವರವಾದ ವರದಿಯನ್ನು ಸಂತೋಷ ಕಾಮಗೌಡ ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ವಿಶೇಷ ಲೆಕ್ಕ ಪರಿಶೋಧನಾ ತಂಡವನ್ನು ನಿಯೋಜಿಸಿ 10 ವರ್ಷಕ್ಕಿಂತಲೂ ಹಿಂದಿನ ಅವಧಿಯ ಸಂಪೂರ್ಣ ಲೆಕ್ಕ ಪರಿಶೋಧನೆಗೆ ಆದೇಶ ಮಾಡುವಂತೆಯೂ ಕೋರಿದ್ದಾರೆ.

ಸಂಬಂಧಿಗಳಿಗೆ ಹಣ ವರ್ಗಾವಣೆ: ವಿಪತ್ತು ನಿರ್ವಹಣೆ, ಭೂಸ್ವಾಧೀನ, ದೇವಸ್ಥಾನಗಳ ಖಾತೆ, ಜುರಾಲಾ ಯೋಜನೆ ಸೇರಿದಂತೆ ಪ್ರಮುಖ ವಿಭಾಗಗಳ ಕಡತ ನಿರ್ವಹಿಸುತ್ತಿದ್ದ ಪ್ರಕಾಶಬಾಬು ಅವರು, ಪತ್ನಿ ಅಂಬಿಕಾ, ಮಾವ ಶಂಕರ ಹಾಗೂ ಅತ್ತೆ ನೀಲಮ್ಮ ಅವರ ಬ್ಯಾಂಕ್‌ ಖಾತೆಗಳಿಗೆ ಹಣ ಜಮಾ ಮಾಡಿರುವುದು ಕಂಡು ಬಂದಿರುವುದಾಗಿ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

2021ರ ಆಗಸ್ಟ್‌ 16 ರಂದು ಒಟ್ಟು ₹ 28,78,260 ಮೊತ್ತವು ಮೂವರು ಸಂಬಂಧಿಗಳ ಬ್ಯಾಂಕ್‌ ಖಾತೆಗಳಿಗೆ ಜಮಾ ಆಗಿದೆ. ಭೂಸ್ವಾಧೀನ ಖಾತೆಯಿಂದ 2017ರಲ್ಲಿ ನೇರವಾಗಿ ಅತ್ತೆ ಖಾತೆಗೆ ₹ 20 ಲಕ್ಷ
ಹಣವನ್ನು ಆರ್‌ಟಿಜಿಎಸ್‌ ಮಾಡಿರುವುದು ಲೆಕ್ಕ ಪರಿಶೋಧನೆಯಲ್ಲಿ ಖಾತ್ರಿಯಾಗಿದೆ.

ಮಾನ್ವಿ ತಾಲ್ಲೂಕು ಜಾಲಾಪೂರ ರೈತರೊಬ್ಬರಿಗೆ ಭೂಸ್ವಾಧೀನಕ್ಕಾಗಿ ನೀಡಬೇಕಿದ್ದ ಪರಿಹಾರ ಮೊತ್ತದ ಚೆಕ್‌ ಅನ್ನು ಚಾಣಾಕ್ಷತನದಿಂದ ತಿದ್ದಿ  ₹ 20 ಲಕ್ಷ ಹೆಚ್ಚಳ ಮಾಡಿಕೊಂಡು, ಪತ್ನಿಯ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಕಂಡುಬಂದಿದೆ. ದೇವದುರ್ಗ ತಾಲ್ಲೂಕು ಗಣಜಲಿ ಗ್ರಾಮದಲ್ಲಿ ಕೆರೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡ ರೈತ ಫಲಾನುಭವಿಗಳೊಂದಿಗೆ ತನ್ನ ಅತ್ತೆಯ ಹೆಸರನ್ನು ಕೂಡಾ ಸೇರ್ಪಡೆ ಮಾಡಿಕೊಂಡು 2016ರಲ್ಲಿ ₹18,47,518 ಮೊತ್ತವನ್ನು ಜಮಾ ಮಾಡಿಕೊಂಡಿರುವುದು ಖಾತ್ರಿಯಾಗಿದೆ ಎಂದು ಉಪವಿಭಾಗಾಧಿಕಾರಿ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಖಾತೆಗಳು ಸ್ಥಗಿತ

ಪ್ರಕಾಶಬಾಬು ಸಂಬಂಧಿಗಳೆಲ್ಲರ ಬ್ಯಾಂಕ್‌ ಖಾತೆಗಳ ವಿವರವನ್ನು ಕಲೆ ಹಾಕಲಾಗುತ್ತಿದ್ದು, ಇದುವರೆಗೂ ಪತ್ತೆಯಾದ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿರುವ ಹಣ ದುರುಪಯೋಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲಾಗಿದೆ.

ಲೆಕ್ಕ ಪರಿಶೋಧನೆ ತಂಡ ರಚನೆ

ಉಪವಿಭಾಗಾಧಿಕಾರಿ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಅವರು ಕ್ರಮ ಕೈಗೊಂಡಿದ್ದು, ಎಸಿ ಕಚೇರಿಯ ಎಲ್ಲಾ ಖಾತೆಗಳ ಲೆಕ್ಕ ಪರಿಶೋಧನೆ ಮಾಡುವುದಕ್ಕೆ ತಂಡವೊಂದನ್ನು ರಚಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ನಾಗರಾಜ ಅವರು ತಂಡದ ಮುಖ್ಯಸ್ಥರಾಗಿದ್ದು, ಲೆಕ್ಕಪರಿಶೋಧನಾ ವಲಯದ ಉಪನಿರ್ದೇಶಕ ನರಸಿಂಹಮೂರ್ತಿ ಸದಸ್ಯ ಕಾರ್ಯದರ್ಶಿ, ಇಬ್ಬರು ಸದಸ್ಯರು ಹಾಗೂ ಮೂವರು ಸಿಬ್ಬಂದಿ ತಂಡದಲ್ಲಿದ್ದಾರೆ. ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.