ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ನೇ ದಿನಕ್ಕೆ ಕಾಲಿಟ್ಟ ಸಿಎಎ ವಿರೋಧಿ ಧರಣಿ

ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಮುಂದುವರಿದ ಪ್ರತಿಭಟನೆ
Last Updated 6 ಫೆಬ್ರುವರಿ 2020, 13:40 IST
ಅಕ್ಷರ ಗಾತ್ರ

ರಾಯಚೂರು: ನಗರದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಸಿಪಿಐ (ಎಂಎಲ್‌)ನಿಂದ ಆರಂಭಿಸಿರುವ ಎನ್‌ಆರ್‌ಸಿ– ಸಿಎಎ ವಿರೋಧಿ ಅನಿರ್ದಿಷ್ಟಾವಧಿ ಧರಣಿ ಗುರುವಾರ 12 ದಿನಗಳನ್ನು ಪೂರ್ಣಗೊಳಿಸಿದೆ.

ಕರಾಳ ಕಾಯ್ದೆಗಳ ಜಾರಿಯನ್ನು ತಕ್ಷಣದಿಂದಲೇ ಕೈಬಿಡಬೇಕು ಎಂದು ಆಗ್ರಹಿಸಲಾಗುತ್ತಿದ್ದು, ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಚಿನ್ನಪ್ಪ ಕೊಟ್ರಿಕಿ ಮಾತನಾಡಿ, ಪ್ರಪಂಚದಲ್ಲಿ ಸರ್ವಾಧಿಕಾರ ಯಶಸ್ವಿಗೊಂಡಿಲ್ಲ. ಜರ್ಮನಿಯ ಹಿಟ್ಲರ್, ಇಟಲಿಯ ಮುಸಲೋನಿ ತಮ್ಮ ಪ್ಯಾಸಿಸ್ಟ್ ದಾಳಿಯನ್ನು ಮುನ್ನೆಡುಸುವಲ್ಲಿ ವಿಫಲರಾಗಿದ್ದಾರೆ ಎಂದರು.

ಇಂಥ ಸ್ಥಿತಿ ಪ್ಯಾಸಿಸ್ಟ್ ಮೋದಿ ಹಾಗೂ ಅಮಿತ್‌ ಶಾ ಅವರಿಗೂ ಒದಗಿ ಬರಲಿದೆ. ದೇಶದ್ರೋಹದ ವಿರುದ್ಧ ದೇಶಪ್ರೇಮಿಗಳ ಹೋರಾಟ ಭಾರತದಲ್ಲಿ ಯಶಸ್ವಿಗೊಳ್ಳಲಿದೆ. ಪರ್ಯಾಯ ಹಾದಿಯಲ್ಲಿ ಮುನ್ನಡೆಯಲು ಸಿದ್ಧಗೊಳ್ಳಬೇಕು ಎಂದು ಕರೆ ನೀಡಿದರು.

ಸಿಪಿಐ(ಎಂಎಲ್) ಜಿಲ್ಲಾ ಕಾರ್ಯದರ್ಶಿ ಕೆ.ನಾಗಲಿಂಗಸ್ವಾಮಿ ಮಾತನಾಡಿ, ಭಾರತದ ಆರ್ಥಿಕತೆಯ ಮೇಲೆ ಬಂಡವಾಳದ ಏಕಸ್ವಾಮ್ಯ ಹಿಡಿತವು ಹೆಚ್ಚಾಗುತ್ತಾ ನಡೆದಿದೆ. ಇದನ್ನೇ ಆರ್ಥಿಕತೆಯಲ್ಲಿ ಬಲಗೊಳ್ಳುತ್ತಿರುವ ಫ್ಯಾಸಿಸಂ ಎಂದು ಅರ್ಥ ಮಾಡಿಕೊಳ್ಳಬೇಕಾಗಿದೆ. ಹತ್ತಾರು ಸಾವಿರ ಮದ್ಯಮ ಹಾಗೂ ಲಕ್ಷಾಂತರ ಸಣ್ಣ ಕೈಗಾರಿಕೆಗಳನ್ನು ನೆಲಕ್ಕುರುಳಿಸಿ ಕೆಲವೇ ಕೆಲವು ಕಾರ್ಪೋರೇಟ್ ಕಂಪನಿಗಳ ಹಿಡಿತಕ್ಕೆ ದೇಶದ ಆರ್ಥಿಕ ವ್ಯವಹಾರ ಸಿಲುಕಿದೆ ಎಂದು ತಿಳಿಸಿದರು.

ಕಾರ್ಪೊರೇಟ್ ಬಂಡವಾಳಕ್ಕೆ ಭಾರೀ ವಿನಾಯಿತಿ, ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿಯ ಮೂಲಕ ಕೇಂದ್ರದ ಮೋದಿ ಸರ್ಕಾರವು ಈ ಆರ್ಥಿಕ ಏಕಸ್ವಾಮ್ಯ ಶಕ್ತಿಗಳ ಸೇವೆಗೆ ನಿಂತಿದೆ. ಇದರ ಪ್ರತಿಫಲವಾಗಿಯೇ ರಾಜಕೀಯ ಹಾಗೂ ಸಾಮಾಜಿಕ ರಂಗದಲ್ಲಿ ಕೇಸರಿ(ಹಿಂದುತ್ವ) ಫ್ಯಾಸಿಸಂ ತಲೆ ಎತ್ತಿ ನಿಂತಿದೆ ಎಂದು ಹರಿಹಾಯ್ದರು.

ಈ ಫ್ಯಾಸಿಸ್ಟ್ ದಬ್ಬಾಳಿಕೆಯ ಮೊದಲ ದಾಳಿಯೆ ಸಂವಿಧಾನವನ್ನು ಹಂತ ಹಂತವಾಗಿ ನಿರ್ವಿರ್ಯಗೊಳಿಸುವುದಾಗಿದೆ. ಕಾರ್ಮಿಕ ಕಾಯ್ದೆಗಳ ಬದಲಾವಣೆಯೂ ಇದರ ಭಾಗವಾಗಿದೆ. ಅಷ್ಟೇ ಅಲ್ಲದೆ, ಪೌರತ್ವ ತಿದ್ದುಪಡಿ ಕಾಯ್ದೆ-2019ರ ಅಂಗೀಕಾರ ಮತ್ತು ರಾಷ್ಟ್ರೀಯ ಜನಸಂಖ್ಯಾ ನೊಂದಣಿ(ಎನ್‌ಪಿಆರ್) ರಾಷ್ಟ್ರೀಯ ಪೌರತ್ವ ನೊಂದಣಿ(ಎನ್‌ಆರ್‌ಸಿ)ಯ ಹೇರಿಕೆಗಳು ಭಾರತದಲ್ಲಿ ಬಲಗೊಳ್ಳುತ್ತಿರುವ ಫ್ಯಾಸಿಸಂಗೆ ದೊಡ್ಡ ಸಾಕ್ಷಿಯಾಗಿವೆ ಎಂದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ಜಿ.ಅಮರೇಶ್ ಮಾತನಾಡಿ, ಧರ್ಮದ ಆಧಾರದ ಮೇಲೆ ದೇಶದ ಪೌರತ್ವವನ್ನು ನಿರ್ಧರಿಸುವ ಕೇಂದ್ರ ಬಿಜೆಪಿ ಸರ್ಕಾರದ ಪೌರ ನೀತಿಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್‌ವಾದಿ-ಲೆನಿನ್‌ವಾದಿ ರೆಡ್‌ಸ್ಟಾರ್ ಪಕ್ಷವು ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

ರಾಯಚೂರಿನಲ್ಲಿ ಆರಂಭವಾಗಿರುವ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆಯ ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರೋಧಿ ಹೋರಾಟವನ್ನು ಬೆಂಬಲಿಸಿ’ಕಮ್ಯೂನಿಸ್ಟ್ ಧರಣಿಯ ಮೂಲಕ ಟಿಪ್ಪು ಸುಲ್ತಾನ್ ಗಾರ್ಡನ್‌ನಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.

ಎಂ.ಗಂಗಾಧರ, ರವಿ ದಾದಸ್, ಮಾಬುಸಾಬ ಬೆಳ್ಳಟ್ಟಿ, ಯಲ್ಲಪ್ಪ ಉಟಕನೂರು, ಹುಚ್ಚರೆಡ್ಡಿ, ಮಲ್ಲಯ್ಯ ಕಟ್ಟಿಮನಿ, ಸಂತೋಷ ಹಿರೆದಿನ್ನಿ, ಮಾರುತಿ ಜಿನ್ನಾಪೂರ್, ಆರ್.ಹುಚ್ಚರೆಡ್ಡಿ, ಆದಿ ನಗನೂರು, ರಾಜಮಹ್ಮದ ಮತ್ತು ಶೇಖ ಹುಸೇನ್‌ಬಾಷಾ, ಕರಿಮುಲ್ಲಾ, ರಾಮು, ಹುಲಿಗೆಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT