ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳನ್ನು ಹುಟ್ಟು ಹಾಕಿದ ಮಸ್ಕಿಯ 127 ವರ್ಷಗಳ ‌ಹಳೆಯ ಸರ್ಕಾರಿ ಶಾಲೆ!

ಮಸ್ಕಿ: 127 ವರ್ಷಗಳ ಇತಿಹಾಸ – 1965ರಲ್ಲಿ ಉತ್ತಮ ಶಾಲೆ ಪ್ರಶಸ್ತಿ
Published 4 ನವೆಂಬರ್ 2023, 6:39 IST
Last Updated 4 ನವೆಂಬರ್ 2023, 6:39 IST
ಅಕ್ಷರ ಗಾತ್ರ

ಮಸ್ಕಿ: ಪಟ್ಟಣದಲ್ಲಿ 127 ವರ್ಷ ಪೂರೈಸಿರುವ ಸರ್ಕಾರಿ ಪ್ರಾಥಮಿಕ ಶಾಲೆ ಇರುವುದು ಇಡೀ ಜಿಲ್ಲೆಯ ಹೆಮ್ಮೆ.

14ರ ಮೇ, 1886 ರಲ್ಲಿ ಜಯರಾವ್ ಸೇರಿ ಈವರೆಗೆ ನಲವತ್ತಕ್ಕೂ ಹೆಚ್ಚು ಮುಖ್ಯೋಪಾಧ್ಯಾಯರನ್ನು, ನೂರಾರು ಶಿಕ್ಷಕರು, ಸಹಸ್ರಾರು ವಿದ್ಯಾರ್ಥಿಗಳು ಅಲ್ಲದೆ ಇಲ್ಲಿ ಕಲೆತ ಅನೇಕರು ರಾಜಕಾರಣಿ, ಐಎಎಸ್ ಅಧಿಕಾರಿ, ಸಾಹಿತಿಗಲಾಗಿದ್ದಾರೆ.

ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ, ಮನೋಹರ ಮಸ್ಕಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಶೈಲಪ್ಪ ಬ್ಯಾಳಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಎಚ್.ಬಿ.ಮುರಾರಿ, ಪಾಮಯ್ಯ ಮರಾರಿ ಸೇರಿದಂತೆ ಅನೇಕರು ರಾಜಕೀಯದಲ್ಲಿ ಗುರುತಿಸಲು ಈ ಶಾಲೆಯ ಶಿಕ್ಷಣವೇ ಕಾರಣ ಎನ್ನಬಹುದು.

ಮುದ್ದು ಮೋಹನ, ನ್ಯಾಯಾಧೀಶ ನಾಗರಾಜ ಕಾರಟಗಿ, ಸರ್ಕಾರಿ ಅಭಿಯೋಜಕ ಚನ್ನಪ್ಪ ಹರಸೂರು ಅವರಂತಹ ಅಧಿಕಾರಿಗಳು, ಲಕ್ಷ್ಮೀಕಾಂತ ಮಸ್ಕಿಕರ್ ಅಂತಹ ಪೊಲೀಸ್ ಅಧಿಕಾರಿಗಳನ್ನು, ಖ್ಯಾತ ವಕೀಲ ಮಸ್ಕಿ ನಾಗರಾಜ ಅವರಂತ ವಕೀಲರನ್ನು ಈ ಸರ್ಕಾರಿ ಶಾಲೆ ಸಮಾಜಕ್ಕೆ ಕೊಟ್ಟಿದೆ.

ಸ್ವಾಮಿರಾವ್ ಕುಲಕರ್ಣಿ, ಮಹಾಂತೇಶ ಮಸ್ಕಿ, ಸಂಶೋಧಕ ಚನ್ನಬಸಯ್ಯ ಹಿರೇಮಠ, ಗುಂಡುರಾವ್ ದೇಸಾಯಿ, ಅನ್ನಪೂರ್ಣಮ್ಮ ಸಾಲಿಮಠ ಅವರಂತ ಅನೇಕ ಸಾಹಿತಿಗಳನ್ನು, ಬರಹಗಾರರನ್ನು ಹಾಗೂ ವೈದ್ಯರನ್ನು ಈ ಶಾಲೆ ನೀಡಿದ್ದು ವಿಶೇಷ.

1940ರಲ್ಲಿ ನಿಜಾಮ ಸರ್ಕಾರ ಶಾಲೆಗೆ ಕಟ್ಟಡ ನಿರ್ಮಿಸಿತ್ತು. ಅದನ್ನು ಪ್ರಾಚ್ಯವಸ್ತು ಇಲಾಖೆಯವರು ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. 1952 ರಲ್ಲಿ ಮುಖ್ಯೋಪಾಧ್ಯಾಯರಾಗಿ ಬಂದ ಷಡಕ್ಷರಪ್ಪನವರು ಆಗಿನ ಶಾಸಕರಾದ ಬಸನಗೌಡ ಹಾಗೂ ಸ್ಥಳೀಯರ ಸಹಕಾರದಿಂದ ಸ್ಥಳೀಯ ಆಡಳಿತದೊಂದಿಗೆ ಪತ್ರ ವ್ಯವಹಾರ ನಡೆಸಿ ಶಿಕ್ಷಣ ಇಲಾಖೆಯ ಸುಪರ್ದಿಗೆ ಕಟ್ಟಡವನ್ನು ಪಡೆದರು.

ಷಡಕ್ಷರಪ್ಪನವರು ಮುಖ್ಯಶಿಕ್ಷಕರಾಗಿ ಶಾಲೆಗೆ ಕಾಲಿಟ್ಟ ಮೇಲೆ ವಿಭಿನ್ನ ಚಟುವಟಿಕೆಗಳಿಂದ ಶಾಲೆ ಪ್ರಗತಿಯತ್ತ ಸಾಗಿತು. 1965 ರಲ್ಲಿ ಈ ಶಾಲೆಗೆ ಉತ್ತಮ ಶಾಲೆ ಎಂಬ ಪ್ರಶಸ್ತಿ ದೊರೆಯಿತು.

ಶಾಲಾ ಕೈತೋಟದ ಅಭಿವೃದ್ಧಿ, ಗಣೇಶೋತ್ಸವ ಆಚರಣೆ, ಸಾಂಸ್ಕೃತಿಕ ಚಟುವಟಿಕೆಗಳು ಗಮನ ಸೆಳೆದವು. ಇದೆಲ್ಲರ ರೂವಾರಿ ಷಡಕ್ಷರಪ್ಪನವರಿಗೆ 1999 ರಲ್ಲಿ ಅಂದಿನ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಅಮರಯ್ಯ ಸಾಲಿಮಠ, ವೆಂಕಟರಾವ್, ವಿ.ಆರ್.ದೊನ್ನಿ ಅಂತಹ ಅನೇಕ ಶಿಕ್ಷಕರು ಶಾಲೆಯ ಅಭಿವೃದ್ಧಿಗೆ ಶ್ರಮಿಸಿದರು.

1996 ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅದ್ದೂರಿ ಶತಮಾನೋತ್ಸವ ಆಚರಿಸಿಕೊಂಡಿತು. ಶಾಲೆಯ ಹಳೆ ವಿದ್ಯಾರ್ಥಿಗಳು ಮುಖ್ಯದ್ವಾರ ನಿರ್ಮಿಸಿ ಶಾಲೆಯ ಅಂದ ಹೆಚ್ಚಿಸಿದರು. ಈ ಮೂಲಕ ಕೃತಜ್ಞತಾ ಭಾವ ಮೆರೆದರು.

ಹಳೆ ಕಟ್ಟಡಗಳು ಬಿದ್ದ ಕಾರಣ ಶಾಲೆಯ ಮುಂಭಾಗದಲ್ಲಿ ಹೊಸ ಕಟ್ಟಗಳನ್ನು ನಿರ್ಮಿಸಲಾಗಿದೆ. ಶಾಲೆಯ ಮೂಲ ಆವರಣ ಹಾಳು ಕೊಂಪೆಯಂತಾಗಿದೆ. ಬಿದ್ದ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು. ಸರ್ಕಾರ ಹಾಗೂ ಹಳೆ ವಿದ್ಯಾರ್ಥಿಗಳು ಹೊಸ ಕಟ್ಟಡ ನಿರ್ಮಿಸಿ ಶಾಲೆಯ ಗತ ವೈಭವ ಮರುಕಳಿಸುವಂತೆ ಮಾಡಬೇಕು ಎನ್ನುವುದು ಗ್ರಾಮಸ್ಥರ ಮನವಿಯಾಗಿದೆ.

ಪಟ್ಟಣದ ಸರ್ಕಾರಿ ಪ್ರಾಥಮಿಕ ಕೇಂದ್ರ ಶಾಲೆಗೆ 127, ಮೆದಿಕಿನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ 116 ವರ್ಷಗಳು ತುಂಬಿವೆ. ಆದರೆ ತಾಲ್ಲೂಕಿನ ಶಿಕ್ಷಣ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ‌

ಈ ಬಗ್ಗೆ ಮಸ್ಕಿಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಲಿಂಗಸುಗೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವಿಚಾರಿಸಿದರೆ ‘ನಮ್ಮಲ್ಲಿ ಶತಮಾನ ಕಂಡ ಶಾಲೆಗಳು ಯಾವುದು ಇಲ್ಲ’ ಎನ್ನುತ್ತಾರೆ. 

ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶತಮಾನ ಪೂರೈಸಿದ ಶಾಲೆಗೆ ಸರ್ಕಾರ ನೀಡಿದ ₹5 ಲಕ್ಷ ಅನುದಾನದಿಂದ ಈ ಎರಡು ಶಾಲೆಗಳು ವಂಚಿತಗೊಂಡಿವೆ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಮುರಾರಿ ಆರೋಪಿಸಿದ್ದಾರೆ

ಮುದ್ದು ಮೋಹನ
ಮುದ್ದು ಮೋಹನ
ಗ್ರಾಮೀಣ ಭಾಗದ ಆದರ್ಶ ಶಾಲೆ ಯಾವುದು ಎಂದು ಯಾರಾದರೂ ಕೇಳಿದರೆ ಅದು ನನ್ನೂರು ಮಸ್ಕಿ ಸರ್ಕಾರಿ ಪ್ರಾಥಮಿಕ ಶಾಲೆ ಎಂದು ಹೇಳಲೇಬೇಕು. ನನ್ನ ಪ್ರಾಥಮಿಕ ಶಿಕ್ಷಣ ಇದೇ ಶಾಲೆಯಲ್ಲಿ ಆಗಿದೆ. ಶಾಲೆಯಲ್ಲಿ ಅನೇಕ ಆದರ್ಶ ಶಿಕ್ಷಕರ ಸೇವೆ ತ್ಯಾಗದ ಜೊತೆಗೆ ಶಿಕ್ಷಣ ಹಾಗೂ ಸಾಂಸ್ಕೃತಿಕ ವಾತಾವರಣ ಕೈತೋಟ ನನ್ನ ಕಣ್ಣು ಮುಂದೆ ಇದೆ. 127 ವರ್ಷ ಕಂಡ ಶಾಲೆಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ಹಾಗೂ ಸರ್ಕಾರ ಮುಂದಾಗಲಿ
ಮುದ್ದು ಮೋಹನ ನಿವೃತ್ತ ಐಎಎಸ್ ಅಧಿಕಾರಿ ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಶಾಲೆಯ ಹಳೆ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT