ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಚುನಾವಣೆ ಹೊಸ್ತಿಲಲ್ಲಿ ಹೊಸ ವಿವಾದ

Published 7 ಡಿಸೆಂಬರ್ 2023, 4:27 IST
Last Updated 7 ಡಿಸೆಂಬರ್ 2023, 4:27 IST
ಅಕ್ಷರ ಗಾತ್ರ

ರಾಯಚೂರು: ನಗರದ ಕಾಟೆ ದರ್ವಾಜಾ ಬಳಿ ಸೈಯದ್ ಶಾ ಅಲ್ಲಾವುದ್ದೀನ್ ದರ್ಗಾ ಮುಂಭಾಗದಲ್ಲಿ ನಿರ್ಮಾಣ ಮಾಡಿದ ಕಮಾನು ತೆರವುಗೊಳಿಸುವಂತೆ ರಾಜ್ಯ ಪುರಾತತ್ವ ಇಲಾಖೆ ನಗರಸಭೆಗೆ ಸೂಚನೆ ನೀಡಿದೆ. ಈ ಮೂಲಕ ಲೋಕಸಭೆ ಚುನಾವಣೆ ಪೂರ್ವದಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ.

ಪುರಾತತ್ವ ಇಲಾಖೆಯ ರಾಯಚೂರು ಜಿಲ್ಲೆಯ ಕ್ಯೂರೇಟರ್‌ ನಗರಸಭೆ ಆಯುಕ್ತರಿಗೆ ಲಿಖಿತ ಸೂಚನೆ ನೀಡಿದ್ದಾರೆ. ಹೀಗಾಗಿ ಕಮಾನು ನಿರ್ಮಾಣ ಕಾಮಗಾರಿಯನ್ನು ನಗರಸಭೆ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

ಪುರಾತತ್ವ ಸ್ಮಾರಕಗಳ ಸಂರಕ್ಞಣಾ ಸಮಿತಿಗೆ ಜಿಲ್ಲಾಧಿಕಾರಿಯೇ ಅಧ್ಯಕ್ಷರಾಗಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳೂ ಜಿಲ್ಲಾಧಿಕಾರಿ ಅಧೀನದಲ್ಲೇ ಬರುವ ಕಾರಣ ಜಿಲ್ಲಾಧಿಕಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚರಿಕೆಯಿಂದ ಈ ದಿಸೆಯಲ್ಲಿ ಹೆಜ್ಜೆ ಇಡಲು ನಿರ್ಧರಿಸಿದೆ.

ಹಿಂದೆ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲೇ ನಗರದಲ್ಲಿ ಒಟ್ಟು 21 ಕಮಾನು ನಿರ್ಮಾಣ ಮಾಡಲಾಗಿದೆ. 22ನೇ ಕಮಾನು ನಿರ್ಮಾಣದ ಸಂದರ್ಭದಲ್ಲಿ ನಗರ ಶಾಸಕ ಶಿವಾರಾಜ ಪಾಟೀಲ ಹಾಗೂ ಬಿಜೆಪಿ ಮುಖಂಡರು ತಕರಾರು ಎತ್ತಿದ್ದಾರೆ. 22ನೇ ಕಮಾನು ಮುಸ್ಲಿಮರು ವಾಸವಾಗಿರುವ ಪ್ರದೇಶದಲ್ಲಿರುವುದೇ ಇದಕ್ಕೆ ಕಾರಣವಾಗಿದೆ.

‘ರಾಜ್ಯ ಪುರಾತತ್ವ ಇಲಾಖೆಯ ಕ್ಯೂರೇಟರ್ ನಗರಸಭೆಗೆ ಪತ್ರ ಬರೆದು ನಿರ್ಮಾಣದ ಹಂತದಲ್ಲಿರುವ ಕಮಾನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಎಷ್ಟು ದಿನಗಳ ಒಳಗಾಗಿ ಪಿಲ್ಲರ್‌ಗಳನ್ನು ತೆರವುಗೊಳಿಸಬೇಕು ಎನ್ನುವ ಗಡುವು ನೀಡಿಲ್ಲ. ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಜಿಲ್ಲಾಧಿಕಾರಿ ನಿರ್ದೇಶನದಂತೆ ಮುಂದಿನ ಕ್ರಮ ಕೈಕೊಳ್ಳಲಾಗುವುದು’ ಎಂದು ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಹೇಳಿದ್ದಾರೆ.

ನಗರಸಭೆಯ ಸಾಮಾನ್ಯ ಸಭೆಯಲ್ಲಿ ₹ 15 ಲಕ್ಷ ವೆಚ್ಚದಲ್ಲಿ ಕಮಾನು ನಿರ್ಮಾಣಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಗರಸಭೆ ಎಂಜಿನಿಯರ್‌ಗಳು ಸರಿಯಾಗಿ ಸ್ಥಳ ಪರಿಶೀಲನೆ ಮಾಡದೇ ಲೋಪ ಎಸಗಿದ್ದಾರೆ. ಕೋಟೆ ಸ್ಮಾರಕದಿಂದ 100 ಮೀಟರ್ ಅಂತರದಲ್ಲೇ ಎರಡು ಪಿಲ್ಲರ್‌ಗಳನ್ನು ನಿರ್ಮಿಸಿದರೂ ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸಹ ಗಂಭೀರವಾಗಿರಲಿಲ್ಲ. ಪ್ರಕರಣ ಇದೀಗ ಅದು ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ನವೆಂಬರ್ 30ರಂದು ಬಿಜೆಪಿ ಮುಖಂಡರು ನಗರಸಭೆ ಪುರಾತತ್ವ ಇಲಾಖೆಯ ನಿಯಮ ಉಲ್ಲಂಘನೆ ಮಾಡಿರುವ ಜಾಡು ಹಿಡಿದು ಕಾಮಗಾರಿ ಸ್ಥಗಿತಗೊಳ್ಳುವಂತೆ ಮಾಡಿದರು. ದರ್ಗಾದ ಬಳಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರಿಂದ ಮುಸ್ಲಿಮರೂ ಸ್ಥಳಕ್ಕೆ ಬಂದು ಧಾರ್ಮಿಕ ಘೋಷಣೆ ಕೂಗಿದ್ದರು. ಹೀಗಾಗಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ದರ್ಗಾ ಪ್ರದೇಶದಲ್ಲಿ ಪೊಲೀಸ್‌ ಬಂದೋಬಸ್ತ್ ಮುಂದುವರಿದಿದೆ.

‘ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಗರದಲ್ಲಿನ ಮಸೀದಿ ಬಳಿಯ ಕಮಾನು ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವುದಾದರೆ ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ಅತಿಕ್ರಮಣಕ್ಕೆ ಒಳಗಾಗಿರುವ ಪ್ರದೇಶದಲ್ಲಿನ ಎಲ್ಲ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಷಿರುದ್ದೀನ್ ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವ ಕಾರಣ ನಗರದಲ್ಲಿ ಕೋಮು ಸೌರ್ಹದತೆಗೆ ಧಕ್ಕೆ ಬರುತ್ತಿದೆ. ಅಲ್ಲದೇ ಸಾರ್ವಜನಿಕರ ತೆರಿಗೆ ಹಣವೂ ಪೋಲಾಗಿದೆ. ಹೀಗಾಗಿ ನಗರಸಭೆ ಹಾಗೂ ರಾಜ್ಯ ಪುರಾತತ್ವ ಇಲಖೆಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT