ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಸಂಸದ ಸೂಚನೆ

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ
Published 16 ನವೆಂಬರ್ 2023, 16:40 IST
Last Updated 16 ನವೆಂಬರ್ 2023, 16:40 IST
ಅಕ್ಷರ ಗಾತ್ರ

ರಾಯಚೂರು: ‌ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿ ರೈತರು ಸಂಕಷ್ಟದಲ್ಲಿದ್ದು, ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪರಿಹಾರ ಒದಗಿಸುವ ಕಾರ್ಯವಾಗಬೇಕು ಮತ್ತು ವಿವಿಧ ಇಲಾಖೆಗಳಲ್ಲಿರುವ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಸದ ರಾಜಾ ಅಮರೇಶ್ವರ ನಾಯಕ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಗಾರು, ಹಿಂಗಾರು ಮಳೆಯ ಕೊರತೆ ಹಾಗೂ ಅಕಾಲಿಕ ಮಳೆಯಿಂದಾಗಿ ರೈತರ ಬೆಳೆಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು. ಅಧಿಕಾರಿಗಳು ರೈತರಿಗೆ ಮಾರ್ಗದರ್ಶನ ನೀಡಬೇಕು ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. 

ಕೃಷಿ ಉತ್ಪನ್ನಗಳ ಬೆಳೆಗಳಿಗಿಂತ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಹೆಚ್ಚಿನ ಖರ್ಚಾಗಿರುತ್ತದೆ. ಆದ್ದರಿಂದ ಕೇಂದ್ರದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ರೈತರಿಗೆ ಮುಟ್ಟಿಸುವಲ್ಲಿ ಹೆಚ್ಚಿನ ಶ್ರಮವಹಿಸಬೇಕು. ರಾಯಚೂರು ತಾಲ್ಲೂಕಿನ ಕೃಷ್ಣಾ ಮೇಲ್ಸೇತುವೆ  ಕಾಮಗಾರಿಯನ್ನು ನಿಧಾನಗತಿಯಲ್ಲಿ ನಿರ್ಮಾಣ ಮಾಡಲಾಗುತಿದ್ದು, ಇದರಿಂದ ವಾಹಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಭಾರಿ ವಾಹಗಳ ಸಂಚಾರದಿಂದ ಹಳೆಯ ಸೇತುವೆಯೂ ಹಾಳಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸೇತುವೆ ನಿರ್ಮಾಣದ ಸಂಸ್ಥೆಗೆ ಸೂಚನೆ ನೀಡಬೇಕು ಎಂದರು.

ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕೇಂದ್ರ ಸರ್ಕಾರದಿಂದ ಜಲಜೀವನ್ ಹಾಗೂ ಜಲಧಾರೆ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಜಿಲ್ಲೆಯಲ್ಲಿ 1222 ಹಳಿಗಳಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಅದರಲ್ಲಿ ಕೇವಲ 498 ಜಲಜೀವನ್ ಮಿಷನ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, 498 ಕಾಮಗಾರಿಗಳು ಪ್ರಗತಿಯಲ್ಲಿವೆ. 165 ಕಾಮಗಾರಿಗಳು ಇನ್ನೂ ಪ್ರಾರಂಭಿಸಲಾಗಿಲ್ಲ. ಈ ರೀತಿ ಪ್ರಗತಿಯಲ್ಲಿ ಕುಂಠಿತಗೊಳ್ಳದೇ ಹೆಚ್ಚಿನ ಪ್ರಗತಿ ಸಾಧಿಸುವಂತೆ ಸೂಚಿಸಿದರು. 

ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ, ರೈತರಿಗಾಗಿ ಇರುವ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ರೈತರಿಗೆ ಮುಟ್ಟಿಸುವಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಇಲ್ಲವಾದಲ್ಲಿ ಇಲಾಖೆಯ ಅಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ. ಜಿಲ್ಲೆಯಲ್ಲಿ ಜೆಜೆಎಂ ಹಾಗೂ ಜಲಧಾರೆ ಯೋಜನೆಗಳು ಅತ್ಯಂತ ಅವಶ್ಯಕವಾದ ಯೋಜನೆಗಳಾಗಿದ್ದು, ಕಾಮಗಾರಿಗಳನ್ನು ಪೂರ್ಣಗೊಳಿಸಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ತಿಳಿಸಿದರು.

ಕೃಷಿ ಸಂಚಾಯಿ ಯೋಜನೆ ವಿಫಲ: ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರದೇಶಕಿ ಆರ್. ದೇವಿಕಾ ಅವರು ಇಲಾಖೆಯ ‍ಪ್ರಗತಿಯ ಬಗ್ಗೆ ಮಾತನಾಡುವಾಗ ಕೊಪ್ಪಳ ಸಂಸದ ಕರಡಿ ಸಂಗಣ್ಣ ಮಧ್ಯಪ್ರವೇಶಿಸಿ ಕೃಷಿ ಸಂಚಾಯಿ ಯೋಜನೆಯ ಪ‍್ರಗತಿಯ ಕುರಿತು ಅಸಮರ್ಪಕ ಮಾಹಿತಿ ನೀಡುತ್ತಿದ್ದೀರಿ ಎಂದು ಆಕ್ರೋಶಗೊಂಡರು.

’ಸಭೆಗೆ ತಪ್ಪು ಮಾಹಿತಿ ನೀಡಬೇಡಿ. ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆ ಅನುಷ್ಠಾನ ಮಾಡಲು ವಿಫಲರಾಗಿದ್ದು ಸರಿಯಲ್ಲ. ಯೋಜನೆಯಡಿ ರೈತರಿಗೆ ಪ್ರೋತ್ಸಾಹಧನ ಸಿಗುವಂತೆ ಸರಿಯಾದ ಸಮೀಕ್ಷೆ ಮಾಡಬೇಕು ಆದರೆ, ಇಲಾಖೆಯಿಂದ ಆಗಿಲ್ಲ. ಬರದ ವೇಳೆ ಸರ್ಕಾರ ಕೈಹಿಡಿಯದಿದ್ದರೆ ರೈತರಿಗೆ ಆತ್ಮಸ್ಥೈರ್ಯ ತುಂಬವವರು ಯಾರು ಎಂದು ರೇಗಾಡಿದರು.

ವಿಧಾನ ಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪೂರ, ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಶಿವರೆಡ್ಡಿ, ತಿಮ್ಮಾರೆಡ್ಡಿ ಭೋಗಾವತಿ, ಸತೀಶ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ, ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಯೋಜನಾ ನಿರ್ದೇಶಕ ಪ್ರಕಾಶ.ವಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT