ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ | ₹8 ಕೋಟಿ ಮೌಲ್ಯದ ಹೆಚ್ಚವರಿ ಜಮೀನು ಪತ್ತೆ

Published 8 ಅಕ್ಟೋಬರ್ 2023, 6:41 IST
Last Updated 8 ಅಕ್ಟೋಬರ್ 2023, 6:41 IST
ಅಕ್ಷರ ಗಾತ್ರ

ಶಹಾಪುರ: ಸಣ್ಣ ಕೈಗಾರಿಕೆ ಅಭಿವೃದ್ಧಿ ಯೋಜನೆ(ಐಡಿಎಸ್‌ಎಂಟಿ) ಅಡಿಯಲ್ಲಿ ನಗರಸಭೆ ಭೂ ಸ್ವಾಧೀನಪಡಿಸಿಕೊಂಡ ಜಮೀನು 35 ವರ್ಷದಿಂದ ಸಾರ್ವಜನಿಕ ಉಪಯೋಗಕ್ಕೆ ಬಾರದೆ ಹಾಳು ಬಿದ್ದಿತ್ತು. ಈಗ ನಗರಸಭೆ ಸಿಬ್ಬಂದಿ ಸುಮಾರು ₹8 ಕೋಟಿ ಮೌಲ್ಯದ ಹೆಚ್ಚುವರಿ ಜಮೀನು ಪತ್ತೆ ಹಚ್ಚಿದ್ದಾರೆ.

ಅಂದಿನ ಪುರಸಭೆ 1986ರಲ್ಲಿ ಒಟ್ಟು 93 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿತ್ತು. ಬಳಿಕ 1988ರಲ್ಲಿ ನಿವೇಶನ ರಚನೆ ಮಾಡಿ 1,816 ಪ್ಲಾಟ್ ನಿರ್ಮಿಸಿ ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಒಂದಿಷ್ಟು ಜಮೀನು ಹಾಗೆ ಉಳಿದಿತ್ತು.

35 ವರ್ಷದ ಹಿಂದೆ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಹೆಚ್ಚುವರಿಯಾಗಿ ಉಳಿದ ಜಮೀನು ಪತ್ತೆ ಹಚ್ಚುವಂತೆ ಸಿಬ್ಬಂದಿಗೆ ಸೂಚಿಸಿದ್ದೆ. ಈಗ ಸುಮಾರು ₹8ಕೋಟಿ ಮೌಲ್ಯದ ಜಮೀನು ದೊರಕಿದೆ. ನಿವೇಶನಗಳನ್ನು ಹರಾಜು ಪ್ರಕ್ರಿಯೆ ನಡೆಯಿಸಿ ಬಂದ ಹಣವನ್ನು ಅಭಿವೃದ್ಧಿ ಕೆಲಸಕ್ಕೆ ವಿನಿಯೋಗಿಸಲಾಗುವುದು
ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ

ಮೂರು ತಿಂಗಳ ಹಿಂದೆ ಸಚಿವ ಶರಣಬಸಪ್ಪ ದರ್ಶನಾಪುರ ‘ಸ್ಥಳೀಯ ಸಂಪನ್ಮೂಲವನ್ನು ಕ್ರೋಢಿಕರಿಸುವ ಉದ್ದೇಶದಿಂದ ನಗರಸಭೆಗೆ ಬರಬೇಕಾದ ಆದಾಯ ಮೂಲ ಪತ್ತೆ ಹಚ್ಚಬೇಕು. ಸಾರ್ವಜನಿಕ ಆಸ್ತಿ ಸಂರಕ್ಷಣೆ ಮಾಡಲು ಜಮೀನು ಪತ್ತೆ ಹಚ್ಚಬೇಕು’ ಎಂದು ಸೂಚನೆ ನೀಡಿದ್ದರು. ಅದರಂತೆ ಕಾರ್ಯ ಕೈಗೆತ್ತಿಕೊಂಡ ಕಂದಾಯ ಇಲಾಖೆಯಿಂದ ಸಮಗ್ರವಾದ ದಾಖಲೆಗಳನ್ನು ಪಡೆದುಕೊಂಡು ಸರ್ವೇ ಕಾರ್ಯಕ್ಕೆ ಚಾಲನೆ ನೀಡಿದೆವು. ಫಿಲ್ಟರ ಬೆಡ್ ಹತ್ತಿರ ಇರುವ ಸರ್ವೇ ನಂಬರ್ 90/1ರಲ್ಲಿ 1.20 ಗುಂಟೆ, 92ರಲ್ಲಿ 4.26 ಹಾಗೂ 93ರಲ್ಲಿ 2.18 ಗುಂಟೆ ಸೇರಿ ಒಟ್ಟು 8.24 ಗುಂಟೆ ಜಮೀನು ಲಭ್ಯವಾಗಿದೆ' ಎಂದು ಪೌರಾಯುಕ್ತ ರಮೇಶ ಬಡಿಗೇರ ತಿಳಿಸಿದರು.

ನಮ್ಮ ಸಿಬ್ಬಂದಿ 8.24 ಗುಂಟೆ ಹೆಚ್ಚುವರಿಯಾಗಿ ಖಾಲಿ ಉಳಿದ ಜಮೀನು ಪತ್ತೆ ಹಚ್ಚಿದ್ದಾರೆ. ಭೂಮಿ ಸಮತಟ್ಟು ಮಾಡುವ ಕಾರ್ಯ ಸಾಗಿದೆ. ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ದೊರೆತ ತಕ್ಷಣ ಪ್ಲಾಟ್ ನಿರ್ಮಿಸಲಾಗುವುದು.
ರಮೇಶ ಬಡಿಗೇರ, ಪೌರಾಯುಕ್ತ

‘ಸದ್ಯ ಲಭ್ಯವಾಗಿರುವ ಜಮೀನಿನಲ್ಲಿ ನಿವೇಶನ(ಪ್ಲಾಟ್) ನಿರ್ಮಿಸಲು ನಗರ ಯೋಜನಾ ಪ್ರಾಧಿಕಾರಕ್ಕೆ ಲೇಔಟ್ ಮ್ಯಾಪ್ ಅನುಮೋದನೆಗೆ ಸಲ್ಲಿಸಿದೆ. ಸುಮಾರು 120 ಪ್ಲಾಟ್ ಲಭ್ಯವಾಗುವ ಅಂದಾಜು ಇದೆ. ನಂತರ ಹರಾಜು ಪ್ರಕ್ರಿಯೆ ಅನುಮೋದನೆಗಾಗಿ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT