ಲಿಂಗಸುಗೂರು: ‘ಚಂದ್ರಯಾನ-3 ಯಶಸ್ವಿ ಉಡಾವಣೆ ನಂತರದಲ್ಲಿ ಇಸ್ರೊ ವಿಜ್ಞಾನಿಗಳು ಶುಕ್ರಗ್ರಹದತ್ತ ಅಧ್ಯಯನಕ್ಕೆ ಮುಂದಾಗಿದ್ದಾರೆ. ಈಗಾಗಲೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ’ ಎಂದು ಇಸ್ರೊ ಸಹ ನಿರ್ದೇಶಕ ಬಿ.ಎಚ್.ಎಂ ದಾರುಕೇಶ ಹೇಳಿದರು.
ಗುರುವಾರ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶುಕ್ರಗ್ರಹಯಾನ ಆರು ವರ್ಷಗಳ ಅವಧಿಯಲ್ಲಿ ನಡೆಯಲಿದೆ. ಈಗಾಗಲೇ ವಿಜ್ಞಾನಿಗಳ ಸಮೂಹ ಕ್ರಿಯಾಶೀಲವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕ್ರಿಕೆಟ್, ಸಿನೆಮಾ ನಾಯಕರ ಹೆಸರಲ್ಲಿ ಹಿಂದೆ ಸಂಭ್ರಮಿಸುತ್ತಿದ್ದರು. ಕಾಲ ಬದಲಾಗಿದೆ. ವಿಜ್ಞಾನಿಗಳ ಸಾಧನೆ ಕುರಿತು ಚರ್ಚೆಗಳು ನಡೆಯುತ್ತಿರುವುದು ಭಾರತದ ಸಾಧನೆ ಮೈಲುಗಲ್ಲಿಗೆ ನಿದರ್ಶನವಾಗಿದೆ’ ಎಂದರು.
‘ವಿಜ್ಞಾನ, ತಂತ್ರಜ್ಞಾನದ ಮಾಹಿತಿಯೇ ಇಲ್ಲದ ಕಾಲದಲ್ಲಿ ಭಾರತೀಯರು ವಿದೇಶಿಯರಿಗೆ ಬಾಹ್ಯಾಕಾಶದ ಕುರಿತು ಜ್ಞಾನ ಹಂಚುತ್ತಿದ್ದರು. ಅದೆಷ್ಟೊ ಬಾರಿ ವಿಜ್ಞಾನಿಗಳು ಜ್ಯೋತಿಷ್ಯ ಶಾಸ್ತ್ರದ ಅಧ್ಯಯನ ಮಾಡಿರುವ ನಿದರ್ಶನಗಳಿವೆ. ಬಾಹ್ಯಾಕಾಶ ಸಂಶೋಧನೆಯಿಂದ ಭೂಮಿ ಮೇಲಿನ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ. ಭೂಸ್ಥಿರ ಉಪಗ್ರಹ ತಂತ್ರಜ್ಞಾನದಿಂದ ಜನರ ಜೀವನಮಟ್ಟ ಸುಧಾರಣೆಗೆ ಸಹಕಾರಿ ಆಗಲಿದೆ’ ಎಂದು ವಿವರಣೆ ನೀಡಿದರು.
ಶಾಸಕ ಮಾನಪ್ಪ ವಜ್ಜಲ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ವಿಶ್ವದಲ್ಲಿ ಭಾರತ ನಂಬರ್ ಒನ್ ದೇಶವಾಗುವತ್ತ ದಾಪುಗಾಲು ಇಟ್ಟಿದೆ. ಕೇಂದ್ರ ಸರ್ಕಾರ ಕೂಡ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿದೆ. ಇಸ್ರೊ ಬಾಹ್ಯಾಕಾಶ ಸಂಸ್ಥೆಯಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಹಳ್ಳಿ ಹಳ್ಳಿಗಳಲ್ಲಿ ವಿಜ್ಞಾನಿಗಳನ್ನು ಸ್ವಾಗತಿಸಿ, ಸತ್ಕರಿಸುತ್ತಿರುವುದು ತಂತ್ರಜ್ಞಾನದ ಅರಿವು ಹೆಚ್ಚಿದೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದರು.
ಕುಮಾರರಾಮ ಇತಿಹಾಸ ಸಂರಕ್ಷಣ ಸಮಿತಿ ರಾಜ್ಯಾಧ್ಯಕ್ಷ ರಾಜೇಶ ನಾಯಕ, ಸದಸ್ಯರಾದ ಅಶೋಕ ನಾಯಕ, ಚನ್ನಬಸವ ಮೇಟಿ, ಮಹಾದೇವಪ್ಪ ನಾಗರಹಾಳ, ಗುರುರಾಜ ಮುತಾಲಿಕ್, ಪ್ರಭಾಕರ ಸೂಗೂರು, ಸೋಮು ನಾಯಕ, ಚಂದ್ರು ಬೆಂಡೋಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.