ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿವಿ 11ನೇ ಘಟಿಕೋತ್ಸವ ನಾಡಿದ್ದು, ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಆಗಮನ

Last Updated 27 ನವೆಂಬರ್ 2021, 13:21 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ನವೆಂಬರ್‌ 29 ರಂದು ಬೆಳಿಗ್ಗೆ 10 ಗಂಟೆಗೆ ಜರುಗಲಿದ್ದು, ರಾಜ್ಯಪಾಲ ಹಾಗೂ ಕುಲಾಧಿಪತಿ ಥಾವರಚಂದ್‌ ಗೆಹ್ಲೋಟ್‌ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಭಾಗವಹಿಸುವರು ಎಂದು ಕುಲಪತಿ ಪ್ರೊ.ಕೆ.ಎನ್‌.ಕಟ್ಟಿಮನಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ವಿಸ್ತರಣಾ ವಿಭಾಗದ ಉಪ ಮಹಾನಿರ್ದೇಶಕ ಡಾ.ಎ.ಕೆ.ಸಿಂಗ್‌ ಅವರು ಘಟಿಕೋತ್ಸವ ಭಾಷಣ ಮಾಡುವರು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು, ವಿದ್ಯಾವಿಷಯಕ ಪರಿಷತ್‌ ಸದಸ್ಯರು, ಪದವಿ ಪರಿಷ್ಕೃತ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ತಿಳಿಸಿದರು.

ಘಟಿಕೋತ್ಸವದಲ್ಲಿ 303 ಸ್ನಾತಕ, 107 ಸ್ನಾತಕೋತ್ತರ ಹಾಗೂ 26 ಡಾಕ್ಟರೇಟ್‌ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಅದರಲ್ಲಿ 172 ವಿದ್ಯಾರ್ಥಿನಿಯರು ಒಳಗೊಂಡಿದ್ದಾರೆ. ಸ್ನಾತಕ ಪದವಿಯಲ್ಲಿ 21 ಚಿನ್ನದ ಪದಕ, ಸ್ನಾತಕೋತ್ತರ ಪದವಿಗಳಲ್ಲಿ 14 ಚಿನ್ನದ ಪದಕ ಹಾಗೂ ಡಾಕ್ಟರೇಟ್‌ ಪದವಿಯಲ್ಲಿ 10 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾಡಿದ ಸಾಧನೆ: ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಕಾರ್ಯಗಳನ್ನು ನಿಯಮಿತವಾಗಿ ಮುಂದುವರಿಸಿದೆ. 2019–20ನೇ ಸಾಲಿನಲ್ಲಿ 44 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದ್ದು, 10 ಬೆಳೆ ಉತ್ಪಾದನೆ ಹೆಚ್ಚಿಸುವಂತವುಗಳಾಗಿದ್ದು, 16 ಕೃಷಿ ತಾಂತ್ರಿಕತೆಗೆ ಸಂಬಂಧಿಸಿವೆ ಹಾಗೂ 8 ಪೂರಕ ಸಂಶೋಧನೆಗಳಾಗಿವೆ ಎಂದರು.

2019 ರ ವರದಿ ಪ್ರಕಾರ, ದೇಶದ 75 ಕೃಷಿ ವಿಶ್ವವಿದ್ಯಾಲಯಗಳಲ್ಲಿ ರಾಯಚೂರು ವಿಶ್ವವಿದ್ಯಾಲಯವು ಈಗ 21ನೇ ಸ್ಥಾನದಲ್ಲಿದೆ. 2020 ರ ವರದಿಯು ಶೀಘ್ರದಲ್ಲೇ ಬರಲಿದ್ದು, 15ನೇ ಸ್ಥಾನಕ್ಕೆ ಏರಿಕೆಯಾಗುವ ವಿಶ್ವಾಸವಿದೆ. ಮುಂಬೈನ ಸಿಎಂಓ ಗ್ಲೋಬಲ್‌ ಸಂಸ್ಥೆಯು ‘ಅತ್ಯುತ್ತಮ ಕೃಷಿ ಸಂಸ್ಥೆ’ ಪ್ರಶಸ್ತಿ ನೀಡಿದೆ. ಕರ್ನಾಟಕ ಉನ್ನತ ಶಿಕ್ಷಣ ಮಂಡಳಿಯು ರಾಯಚೂರು ವಿಶ್ವವಿದ್ಯಾಲಯವನ್ನು ‘ನಾಲ್ಕು ಸ್ಟಾರ್‌’ಗಳ ಪಟ್ಟಿಗೆ ಸೇರ್ಪಡೆಗೊಳಿಸಿದೆ. ವಿಶ್ವವಿದ್ಯಾಲಯದ 55 ಪ್ರಾಧ್ಯಾಪಕರಿಗೆ ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಕಾರ್ಯಕ್ಕಾಗಿ ಅತ್ಯುತ್ತಮ ಸಾಧನೆ ಮನ್ನಣೆ ದೊರೆತಿದೆ ಎಂದು ತಿಳಿಸಿದರು.

ಮುಂದಿನ ಯೋಜನೆ: ಭೀಮರಾಯನಗುಡಿ ಹಾಗೂ ಕಲಬುರಗಿ ಮಹಾವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ರಾಯಚೂರು ವಿಶ್ವವಿದ್ಯಾಲಯದಲ್ಲಿ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಸ್ನಾತಕ ಪದವಿ ಅಧ್ಯಯನ ಕಾಲೇಜು ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಚಿಂಚೋಳಿಯಲ್ಲಿ ಅರಣ್ಯ ಮಹಾವಿದ್ಯಾಲಯ, ಬಳ್ಳಾರಿಯ ಹಗರಿ, ಬೀದರ್‌ನ ಔರಾದ್‌ನಲ್ಲಿ ಕೃಷಿ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಹವಾಮಾನ ಬದಲಾವಣೆ ಮತ್ತು ಕೃಷಿ ವ್ಯಾಪಾರ ಹಾಗೂ ನಿರ್ವಹಣೆ ಅಧ್ಯಯನಗಳ ಸಲುವಾಗಿ ಉತ್ಪೃಷ್ಟ ಪರಿಣತಿಯ ಕೇಂದ್ರಗಳನ್ನು ಪ್ರಾರಂಭಿಸಲು ಯೋಜಿಸಿದೆ. ಇದಕ್ಕಾಗಿ 11 ಪ್ರಸ್ತಾವನೆಗಳನ್ನು ಕೆಕೆಆರ್‌ಡಿಗೆ ಸಲ್ಲಿಸಲಾಗಿದೆ. ಬಸವ ಕಲ್ಯಾಣ ಹಾಗೂ ಚಿಂಚೋಳಿಯಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ. ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕಮ್ಯುನಿಟಿ ರೇಡಿಯೋ ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ಒದಗಿಸಿದ್ದು, ಮುಂದಿನ ಮೂರು ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ.ಎಂ.ಜಿ.ಪಾಟೀಲ, ಡಾ.ವೀರನಗೌಡ, ಡಾ.ಬಿ.ಕೆ.ದೇಸಾಯಿ, ಡಾ.ಡಿ.ಎಂ.ಚಂದರಗಿ, ಡಾ.ಸತ್ಯನಾರಾಯಣರಾವ್‌, ಡಾ.ಎಂ.ನೇಮಿಚಂದ್ರ, ಡಾ.ಅಶೋಕ ಜೆ., ಮಚೇಂದ್ರನಾಥ ಎಸ್‌., ಡಾ.ಜಾಗೃತಿ ದೇಶಮಾನ್ಯ, ರವಿ ಮೆಸ್ತಾ, ಡಾ.ಎಂ.ಭೀಮಣ್ಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT