ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಅಕ್ರಮ ಖರೀದಿ ಆರೋಪ

Last Updated 23 ಫೆಬ್ರುವರಿ 2020, 12:03 IST
ಅಕ್ಷರ ಗಾತ್ರ

ರಾಯಚೂರು: ನಗರದ ನವೋಯ ಎಜ್ಯುಕೇಶನ್ ಟ್ರಸ್ಟ್‌ನಿಂದ ಭೂಮಿಯನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು, ನವೋದಯ ಎಂಜಿನಿಯರಿಂಗ್‌ ಕಾಲೇಜು ನಿರ್ಮಾಣ ಮಾಡಲಾಗಿದೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಆರೋಪಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಜನವಾಡ ಬಡಾವಣೆ ನಿವಾಸಿಗಳಿಗೆ ಸಂಬಂಧಿಸಿದ ಭೂಮಿಯನ್ನು 2011 ರಲ್ಲಿ ವರ್ಗಾವಣೆ ಮಾಡಲಾಗಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಗರದ ಮಂತ್ರಾಲಯ ರಸ್ತೆ, ಚಂದ್ರಬಂಡಾ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ನೂರಾರು ಎಕರೆ ಭೂಮಿ ದಲಿತರಿಗೆ ಸೇರಿದೆ. ಆದರೆ, ನಕಲಿ ದಾಖಲೆ ಸೃಷ್ಟಿಸಿ ಒಳಗೊಳಗೆ ಭೂಮಿ ಪರಭಾರೆ ಮಾಡಿಕೊಳ್ಳಲಾಗಿದೆ. ಸರ್ಕಾರಿ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದರು.

ನವೋದಯ ಎಂಜಿನಿಯರಿಂಗ್ ಕಾಲೇಜು 27 ಎಕರೆ 26 ಗುಂಟೆಯಲ್ಲಿ ನಿರ್ಮಿಸಿದ್ದು, ಎಲ್ಲವೂ ದಲಿತರ ಪಿತ್ರಾರ್ಜಿತ ಆಸ್ತಿಯಾಗಿದೆ. ಭೂಮಿಗಾಗಿ ಕಳೆದ 15 ವರ್ಷದಿಂದ ಹೋರಾಟ ನಡೆಸಲಾಗುತ್ತಿದೆ. ಮೊದಲ ಬಾರಿಗೆ ಬಹಿರಂಗವಾಗಿ ಹೋರಾಟ ಆರಂಭಿಸಲಾಗಿದೆ. ಈ ಭೂಮಿಯನ್ನು ಮಾಲೀಕರು ಮಾರಾಟ ಮಾಡಿಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಈ ಕೂಡಲೇ ಸಮಗ್ರ ತನಿಖೆ ನಡೆಸಬೇಕು. ಎಸ್‌ಸಿ, ಎಸ್‌ಟಿ ಆಸ್ತಿ ಪರಭಾರೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಭೂಮಿ ಕಳೆದುಕೊಂಡಿರುವ ದಲಿತರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಆಸ್ತಿ ವರ್ಗಾವಣೆಗೆ ಸಹಿ ಮಾಡಿರುವ ಮೂಲ ಮಾಲೀಕರ ಸಹಿಗೂ, ನಕಲಿ ಸಹಿಗೂ ತಾಳೆ ಆಗುತ್ತಿಲ್ಲ. ಈ ಬಗ್ಗೆ ವರದಿಯೊಂದು ಪ್ರಯೋಗಾಲಯದಿಂದ ಬಂದಿದೆ. ಈ ಎಲ್ಲ ದಾಖಲೆಗಳನ್ನು ಆಧರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಅನಿಲಕುಮಾರ, ರವಿ ದಾದಾಸ, ಶೇಖ್ ಹುಸೇನ್, ಜಿ.ಅಮರೇಶ, ವಿಜಯಕುಮಾರ್, ಜಂಬಲಮ್ಮ, ಪಾಗುಂಟಮ್ಮ, ಮಾರಮ್ಮ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT