ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದ ಜಿಲ್ಲೆಯ ಹಣೆಪಟ್ಟಿ ಕಳಚಲು ಪ್ರಯತ್ನ’

ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ ಹೇಳಿಕೆ
Published 13 ಏಪ್ರಿಲ್ 2024, 15:47 IST
Last Updated 13 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ರಾಯಚೂರು: ‘ಹಿಂದುಳಿದ ಜಿಲ್ಲೆ ಎನ್ನುವ ರಾಯಚೂರಿನ ಹಣೆಪಟ್ಟಿ ಕಳಚಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ‌ನೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಪ್ರಚಾರ ಆರಂಭಿಸಿದ್ದು, ಜನರಿಂದ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ’ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ತಿಳಿಸಿದರು.

‘ದೇಶದಲ್ಲಿ ಕಾಂಗ್ರೆಸ್ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತಿದೆ. ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿಯೇ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದಿರುವೆ. ಏ.18ರಂದು ಅಪಾರ ಕಾರ್ಯಕರ್ತರ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸುವೆ’ ಎಂದು ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ಐಎಎಸ್ ಅಧಿಕಾರಿಯಾಗಿ ಈ ಭಾಗದಲ್ಲಿ ಕೆಲಸ ಮಾಡಿದ ಕಾರಣ ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಹಿರಿಯ ರಾಜಕೀಯ ನಾಯಕರು, ಶಾಸಕರ ಸಹಕಾರದಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವೆ’ ಎಂದು ತಿಳಿಸಿದರು.

‘ರಾಯಚೂರು ನನ್ನ ಕರ್ಮಭೂಮಿ. ಐಐಟಿ ವಂಚಿತ ಜಿಲ್ಲೆಗೆ ಏಮ್ಸ್ ತರಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಮತದಾರರು ನನ್ನ ಕೈಹಿಡಿಯಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈ ಭಾಗದ ಕುರಿತ ಕಾಳಜಿಯಿಂದಾಗಿಯೇ ಪ್ರಮುಖರೊಂದಿಗೆ ಸಮಾಲೋಚಿಸಿ ರಾಜಕೀಯಕ್ಕೆ ಬಂದಿರುವೆ. ಪಕ್ಷ ನೀಡಿದ ಜವಾಬ್ದಾರಿಯೊಂದಿಗೆ ಮತ್ತಷ್ಟು ಕೆಲಸ ಮಾಡುವೆ’ ಎಂದು ತಿಳಿಸಿದರು.

ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ‘ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಸಂಚರಿಸಿದ್ದಾರೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 10 ವರ್ಷದ ಆಡಳಿತದಲ್ಲಿ ಬಿಜೆಪಿ ರೈತ, ಕಾರ್ಮಿಕ, ಜನವಿರೋಧಿ ನೀತಿ ಅನುಸರಿಸಿದೆ. ಕೇಂದ್ರದ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ತೆರಿಗೆ ಪಾಲು ನೀಡುವಲ್ಲಿ ತಾರತಮ್ಯ ಹಾಗೂ ಬರ ಪರಿಹಾರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ರಾಜ್ಯದ ಜನರು ಆಕ್ರೋಶಭರಿತರಾಗಿದ್ದಾರೆ’ ಎಂದರು.

‘ಡಬಲ್ ಎಂಜಿನ್ ಸರ್ಕಾರವಿದ್ದಾಗಲೂ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ. ರಾಜ್ಯಕ್ಕೆ ಬರುವ ಅನುದಾನ ನೀಡುವಲ್ಲಿಯೂ ತಾರತಮ್ಯ ಮಾಡಲಾಗಿದೆ. ರಾಜ್ಯದ 25 ಸಂಸದರನ್ನು ಆರಿಸಿದರೂ ಬಿಜೆಪಿ ಶಾಸಕರು ಕೇಂದ್ರದ ವಿರುದ್ಧ ತುಟಿ ಬಿಚ್ಚಲಿಲ್ಲ. ಅವರ ಕೊಡುಗೆ ಏನು ಎನ್ನುವುದು ಜನರಿಗೆ ತಿಳಿದಿದೆ’ ಎಂದು ಹೇಳಿದರು.

‘371 ಜೆ ಕಾಯ್ದೆಯ ಅನುಷ್ಠಾನದ ಕುರಿತು ಸಚಿವ ಎಚ್.ಕೆ.ಪಾಟೀಲ, ಪ್ರಿಯಾಂಕ್ ಖರ್ಗೆ ನೇತೃತ್ವದ ಕಮಿಟಿಯಲ್ಲಿ ಚರ್ಚೆ ನಡೆದಿದೆ. ಎಚ್.ಕೆ.ಪಾಟೀಲ ಕಲ್ಯಾಣ ಕರ್ನಾಟಕ ಭಾಗದ ಪರ ಕಾಳಜಿ ಉಳ್ಳವರು. ಮುಖ್ಯಮಂತ್ರಿಗೆ ಪತ್ರ ಬರೆದಿರುವ ಬಗ್ಗೆ ಮಾಹಿತಿ ಇಲ್ಲ. ಯಾವ ಸಂದರ್ಭದಲ್ಲಿ ಅವರು ನೇಮಕಾತಿಯ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ ಎನ್ನುವುದು ತಿಳಿದಿಲ್ಲ’ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರ ಮಾತನಾಡಿ,‘ಈ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಬಿಜೆಪಿಯ ಒಡೆದಾಳುವ ನೀತಿ ವಿರುದ್ಧದ ಹೋರಾಟವಾಗಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲರಿಗೂ ಸಮಾನವಾಗಿ ಹಕ್ಕುಗಳನ್ನು ನೀಡುತ್ತಿದೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ‍ಕೈ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ‘ಕಾಂಗ್ರೆಸ್ ನುಡಿದಂತೆ ನಡೆದಿದೆ. ಬಿಜೆಪಿ ನಾಯಕರು ಹೊಟ್ಟೆ ಉರಿಯಿಂದ ಗ್ಯಾರಂಟಿಯ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಪ್ರಧಾನಿ ಮೋದಿ ಹಾಗೂ ಧರ್ಮದ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಸಂಸದರಾಗಿ ಕೆಲಸ ಮಾಡದ ಇವರಿಗೆ ಮತ ಕೇಳುವ ನೈತಿಕತೆಯಿಲ್ಲ’ ಎಂದರು.

ಮಾನ್ವಿ ಶಾಸಕ ಹಂಪಯ್ಯ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಶಾಂತಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಜಯಣ್ಣ, ಅಸ್ಲಂಪಾಶಾ, ಶ್ರೀನಿವಾಸ ಪತಂಗೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT