ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಬಿಸಿಎ ಕೋರ್ಸ್ ಆರಂಭಕ್ಕೆ ಗ್ರಹಣ

ಕಾಲೇಜು ಶಿಕ್ಷಣ ಇಲಾಖೆಗೆ 3 ವರ್ಷಗಳಿಂದ ಪ್ರಸ್ತಾವ ಸಲ್ಲಿಕೆ
Published 1 ಜೂನ್ 2023, 11:32 IST
Last Updated 1 ಜೂನ್ 2023, 11:32 IST
ಅಕ್ಷರ ಗಾತ್ರ

ಮಾನ್ವಿ: ಪಟ್ಟಣದ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿಸಿಎ ಕೋರ್ಸ್ ಆರಂಭಕ್ಕೆ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ಬೇಡಿಕೆ ಹೆಚ್ಚಾಗಿದೆ.

ಕಾಲೇಜಿನಲ್ಲಿ ಬಿಸಿಎ ಕೋರ್ಸ್ ಆರಂಭಿಸುವ ನಿಟ್ಟಿನಲ್ಲಿ ಮೂರು ವರ್ಷಗಳಿಂದ ನಿರಂತರವಾಗಿ ಕಾಲೇಜು ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿದ್ದರೂ ಮಂಜೂರಾತಿ ಸಿಗದಿರುವುದು ಅಚ್ಚರಿ ಮೂಡಿಸಿದೆ.

ಮೂರು ವರ್ಷಗಳ ಹಿಂದೆ ಸ್ಥಳೀಯ ವಿದ್ಯಾರ್ಥಿಗಳ ಆಸಕ್ತಿ ಹಾಗೂ ಪಾಲಕರ ಒತ್ತಾಯದ ಮೇರೆಗೆ ಕಾಲೇಜು ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಬಿಸಿಎ ಕೋರ್ಸ್ ಆರಂಭಕ್ಕೆ ನಿರ್ಣಯ ಕೈಗೊಳ್ಳಲಾಗಿತ್ತು. ಸದರಿ ನಿರ್ಣಯದ ಶಿಫಾರಸಿನ ಮೇರೆಗೆ ಕಾಲೇಜಿನ ಪ್ರಾಂಶುಪಾಲರು 2021-22ನೇ ಶೈಕ್ಷಣಿಕ ಸಾಲಿನಿಂದ ಪ್ರತಿ ವರ್ಷ ಕಾಲೇಜು ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ಈ ಕುರಿತು ಕಲಬುರಗಿಯ ಜಂಟಿ ನಿರ್ದೆಶಕರ ಕಚೇರಿಯಿಂದಲೂ ಇಲಾಖೆಯ ಆಯುಕ್ತರ ಕಚೇರಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಪದವಿ ಕಾಲೇಜುಗಳಲ್ಲಿ ಹೊಸ ಕೋರ್ಸ್‌ ಆರಂಭಕ್ಕೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಮಂಜೂರಾತಿ ನೀಡಲಾಗುತ್ತಿತ್ತು. ಆದರೆ, ಹಿಂದಿನ ರಾಜ್ಯ ಸರ್ಕಾರ 2021-22ನೇ ಸಾಲಿನಲ್ಲಿ ಹೊಸ ಕೋರ್ಸ್ಗಳ ಆರಂಭಕ್ಕೆ ವಿಶ್ವವಿದ್ಯಾಲಯದ ಬದಲಿಗೆ ಕಾಲೇಜು ಶಿಕ್ಷಣ ಇಲಾಖೆಯ ಅನುಮತಿಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಕಾರಣ ಸದರಿ ಕಾಲೇಜಿನಲ್ಲಿ ಬಿಸಿಎ ಕಾಲೇಜಿಗೆ ಮಂಜೂರಾತಿ ಸಿಗಲು ವಿಳಂಬವಾಗುತ್ತಿದೆ ಎಂಬುದು ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳ ಮುಖಂಡರ ದೂರು.

ಕಾಲೇಜಿನಲ್ಲಿ ಸುಸಜ್ಜಿತ ಕೊಠಡಿಗಳು, 50 ಕಂಪ್ಯೂಟರ್‌ಗಳನ್ನು ಹೊಂದಿರುವ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಸೇರಿದಂತೆ ಬಿಸಿಎ ಕೋರ್ಸ್ ಆರಂಭಕ್ಕೆ ಅಗತ್ಯ ಸೌಲಭ್ಯಗಳು ಇವೆ. ಕಾರಣ ಬಿಸಿಎ ಕೋರ್ಸ್ ಮಂಜೂರು ಮಾಡಬೇಕು ಎಂಬುದು ವಿದ್ಯಾರ್ಥಿ ಮುಖಂಡರ ವಾದ.

ಕಾಲೇಜಿನಲ್ಲಿ 2023-24ನೇ ಸಾಲಿನ ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ಕೋರ್ಸ್‌ಗಳ ಪ್ರವೇಶಗಳ ಆರಂಭಕ್ಕೆ ಚಾಲನೆ ನೀಡಲಾಗಿದೆ. ಈ ಶೈಕ್ಷಣಿಕ ವರ್ಷದಿಂದಲೇ ಬಿಸಿಎ ಕೋರ್ಸ್ ಆರಂಭಕ್ಕೆ ಮಂಜೂರಾತಿ ಪಡೆಯುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳ ಪಾಲಕರು ಮನವಿ ಮಾಡಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿಸಿಎ ಕೋರ್ಸ್ ಆರಂಭಕ್ಕೆ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಮೂಲಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

-ಡಾ.ಸುರೇಶ ಶರಣಪ್ಪ ಪ್ರಾಂಶುಪಾಲ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾನ್ವಿ

ಹೆಚ್ಚಿನ ವಿದ್ಯಾರ್ಥಿಗಳ ಬೇಡಿಕೆ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿಸಿಎ ಕೋರ್ಸ್ ಆರಂಭಿಸಬೇಕು.

-ಸುರೇಶ ಬೈಲ್ ಮರ್ಚೇಡ್ ಜಿಲ್ಲಾ ಉಪಾಧ್ಯಕ್ಷ ಭಾರತೀಯ ವಿದ್ಯಾರ್ಥಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT