ಶನಿವಾರ, ಮೇ 8, 2021
17 °C

ಪ್ರತಾಪಗೌಡ ಸಂಪರ್ಕಕ್ಕೆ ಬಂದ ಬಿಜೆಪಿ ನಾಯಕರು ಹೋಂ ಕ್ವಾರಂಟೈನ್ ಆಗಲಿ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಮಸ್ಕಿ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರಿಗೆ ಕೋವಿಡ್ ದೃಢಪಟ್ಟಿದೆ. ನಿಯಮದ ಪ್ರಕಾರ ಅವರ ಸಂಪರ್ಕಕ್ಕೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಹಾಗೂ ಮಸ್ಕಿ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಿದ ಸಚಿವರು ಹೋಂ ಕ್ವಾರಂಟೈನ್ ನಲ್ಲಿ ಇರಬೇಕು. ನಿಯಮ ಉಲ್ಲಂಘನೆ ಸರಿಯಲ್ಲ ಎಂದು ಎನ್ಆರ್‌ಬಿಸಿ 5ಎ ಕಾಲುವೆ ಹೋರಾಟ ಸಂಯುಕ್ತ ವೇದಿಕೆಯ ಮುಖಂಡ ಆರ್. ಮಾನಸಯ್ಯ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪಗೌಡ ಅವರು ಕೋವಿಡ್ ವ್ಯಾಕ್ಸಿನ್ ಮೊದಲನೇ ಡೋಸ್ ಹಾಕಿಕೊಂಡಿದ್ದರೂ ಕೋವಿಡ್‌ಗೆ ಗುರಿಯಾಗಿದ್ದು ದುರಾದೃಷ್ಟಕರ ಸಂಗತಿ. ಆದರೆ ಅವರ ಸಂಪರ್ಕಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಕ್ವಾರಂಟೈನ್ ಆಗದೇ ಬಿಂದಾಸ್ ಆಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಆತಂಕ ಮುಡಿಸಿದೆ. 76 ವರ್ಷದ ಯಡಿಯೂರಪ್ಪ ಅವರು ತಮ್ಮ ಆರೋಗ್ಯಕ್ಕಿಂತ ಚುನಾವಣೆಯೇ ಮುಖ್ಯವಾಗಿದೆಯೇ ಎಂದು ಪ್ರಶ್ನಿಸಿದರು.

 

ಎನ್ಆರ್ ಬಿಸಿ 5ಎ ಕಾಲುವೆಗಾಗಿ ಹೋರಾಟ ಸಮಿತಿಯಿಂದ 140 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸುತ್ತಿಲ್ಲ. ತಾಂತ್ರಿಕ ಸಮಸ್ಯೆಗಳನ್ನು ಹೇಳಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೃಷ್ಣ ಜಲಭಾಗ್ಯ ಯೋಜನೆಯಡಿ ಬರುವುದರಿಂದ ಅದಕ್ಕೆ ಅಧ್ಯಕ್ಷರು ಸ್ವತಃ ಮುಖ್ಯಮಂತ್ರಿ ಇದ್ದು ಬೇಡಿಕೆ ಈಡೇರಿಸಲು ಮುಂದೆ ಬರುತ್ತಿಲ್ಲ. ರೈತರ ಹೋರಾಟವನ್ನು ದಿಕ್ಕು ತಪ್ಪಿಸಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಾಪಗೌಡ ಅವರು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು ರೈತರು ಬಿಜೆಪಿ ಅಭ್ಯರ್ಥಿಗೆ ಮತ ಹಾಕದೇ ಸೋಲಿಸಬೇಕು ಎಂದು ಜಾಗೃತಿ ಮೂಡಿಸುತ್ತಿದ್ದು ರೈತರು, ಮತದಾರರು ಜಾಗೃತರಾಗಬೇಕು ಎಂದು ಮನವಿ ಮಾಡಿದರು.

ಮುಖಂಡ ಹುಚ್ಚಪ್ಪ ನಂದ್ಯಾಲ, ರಂಜನ್ ಸಾಬ್ ಉಳ್ಳಾಗಡ್ಡಿ, ಆದೆಪ್ಪ ಮೌನೇಶ ದೊಡ್ಡಮನಿ, ನಾಗಪ್ಪ ತಳವಾರ ಪತ್ರಿಕಾಗೋಷ್ಟಿಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.