ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಕ್ರೈಸ್ತರ ಮನೆಗಳಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಚರ್ಚ್‌ಗಳಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆ ಇಂದು
Last Updated 24 ಡಿಸೆಂಬರ್ 2021, 15:48 IST
ಅಕ್ಷರ ಗಾತ್ರ

ರಾಯಚೂರು: ಏಸುಕ್ರಿಸ್ತರ ಜನ್ಮದಿನದ ಪ್ರಯುಕ್ತ ಜಿಲ್ಲೆಯಾದ್ಯಂತ ಕ್ರೈಸ್ತರ ಮನೆಗಳಲ್ಲಿ ಹಾಗೂ ಚರ್ಚ್‌ಗಳಲ್ಲಿ ಡಿಸೆಂಬರ್‌ 24 ರ ರಾತ್ರಿಯಿಂದಲೇ ಸಂಭ್ರಮಾಚರಣೆಗಳು ಆರಂಭವಾಗಿವೆ.

ಕ್ರೈಸ್ತರು ತಮ್ಮ ಬಂಧುಗಳನ್ನು, ಸ್ನೇಹಿತರನ್ನು ಮನೆಗಳಿಗೆ ಆಹ್ವಾನಿಸಿ ಏಸು ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಕಂಡುಬಂತು. ಶುಕ್ರವಾರ ತಡರಾತ್ರಿವರೆಗೂ ವಿವಿಧ ಕಾರ್ಯಕ್ರಮಗಳು ಹಾಗೂ ಏಸು ಸಂದೇಶಗಳನ್ನು ತಿಳಿಸಿಕೊಡಲಾಯಿತು. ಚರ್ಚ್‌ ಮುಖ್ಯಸ್ಥರು ತಮ್ಮ ಅನುಯಾಯಿಗಳ ಮನೆಯಲ್ಲಿ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಏಸು ಸಂದೇಶವನ್ನು ಸಾರಿದರು.

ಕೇಕ್‌ ಕತ್ತರಿಸಿ ಸಂಭ್ರಮಾಚರಣೆ ಮಾಡುವುದರೊಂದಿಗೆ ನೆರೆದವರಿಗೆಲ್ಲ ಸಿಹಿ ತಿನ್ನಿಸಿ ಪರಸ್ಪರ ಏಸು ಜನನದ ಶುಭ ಸಂದೇಶ ಸಾರಲಾಯಿತು. ‘ಮೇರಿ ಕ್ರಿಸ್‌ಮಸ್‌’ ಎನ್ನುವ ವಾಕ್ಯ ಸಂಬೋಧನೆಯೊಂದಿಗೆ ಕ್ರೈಸ್ತರು ಸಂತೋಷವನ್ನು ವಿನಿಯಮ ಮಾಡಿಕೊಂಡರು. ಆನಂತರ ತರಹೇವಾರಿ ಭಕ್ಷ್ಯಭೋಜನವನ್ನು ಒಟ್ಟಾಗಿ ಸವಿಯುವುದಕ್ಕೆ ಏರ್ಪಾಡು ಮಾಡಿಕೊಳ್ಳಲಾಗಿತ್ತು.

ಕ್ರೈಸ್ತರ ಮನೆಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಮುಖ್ಯವಾಗಿ ‘ಮಿನುಗುವ ನಕ್ಷತ್ರ’ ಗಮನ ಸೆಳೆಯುತ್ತಿದೆ. ಏಸು ಜನನವನ್ನು ಸಂಕೇತಿಸುವುದಕ್ಕೆ ಈ ನಕ್ಷತ್ರವನ್ನು ಮನೆಗಳ ಮೇಲೆ ಅಳವಡಿಸುವುದು ವಾಡಿಕೆ. ಕ್ರೈಸ್ತರು ತಮ್ಮ ಮನೆಗಳಲ್ಲಿ ದೀಪಾಲಂಕಾರದಿಂದ ಕ್ರಿಸ್‌ಮಸ್‌ ಹಬ್ಬದ ಸಂದರ್ಭದಲ್ಲಿ ಹೊಸತನ ಅನುಭವಿಸುವುದು ಸಾಮಾನ್ಯವಾಗಿ ಕಾಣುತ್ತಿದೆ.

ಚರ್ಚ್‌ಗಳಲ್ಲಿ ಅಲಂಕಾರ: ನಗರದ ಸ್ಟೇಷನ್‌ ರಸ್ತೆಯಲ್ಲಿರುವ ಸಂತ ಪ್ರಾನ್ಸಿಸ್‌ ಝೇವಿಯರ್‌ ಚರ್ಚ್‌, ಇಂದಿರಾನಗರದ ಪ್ರಿನ್ಸ್‌ ಆಫ್‌ ಲೈಫ್‌ ಚರ್ಚ್‌, ಮೇಥೋಡಿಸ್ಟ್‌ ಚರ್ಚ್‌, ಸಂತ ಮೇರಿ ಚರ್ಚ್‌, ಅಗಾಫೆ ಚರ್ಚ್‌ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಚರ್ಚ್‌ಗಳನ್ನು ವಿದ್ಯುತ್‌ ದೀಪಾಲಂಕಾರದಿಂದ ಸಿಂಗರಿಸಲಾಗಿದೆ.

ಬಹುತೇಕ ಚರ್ಚ್‌ಗಳಲ್ಲಿ ಶುಕ್ರವಾರ ತಡರಾತ್ರಿ ಕ್ರಿಸ್‌ಮಸ್‌ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಡಿಸೆಂಬರ್‌ 25 ರಂದು ಸಾಮೂಹಿಕ ಪ್ರಾರ್ಥನೆ ಹಾಗೂ ಏಸು ಸಂದೇಶ ಸಾರುವುದು ನಡೆಯಲಿದೆ. ಇದಕ್ಕಾಗಿ ಚರ್ಚ್‌ ಆವರಣದಲ್ಲಿ ಪೂರ್ವಸಿದ್ಧತೆ ಮಾಡಲಾಗಿದೆ. ಚರ್ಚ್‌ ಆವರಣದಲ್ಲಿ ಏಸು ಜನನವನ್ನು ಬಿಂಬಿಸುವ ‘ಗೋದಲಿ’ ನಿರ್ಮಾಣ ಮಾಡಲಾಗಿದ್ದು, ಜನರು ವೀಕ್ಷಿಸುವುದಕ್ಕೆ ಅವಕಾಶ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT