ರಾಯಚೂರು: ಪಂಚಪೀಠಗಳ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲದಲ್ಲಿ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಆಯೋಜಿಸಿರುವ ನಿತ್ಯ ಅನ್ನದಾನ ಛತ್ರದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಜಗದ್ಗುರುಗಳು ಸಣ್ಣ ವಯಸ್ಸಿನವರಾದರೂ, ದೊಡ್ಡ ಸಾಧನೆ ಮಾಡುವ ಶಕ್ತಿ ಅವರಿಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದು, ನಾವೆಲ್ಲರೂ ಅವರ ಜೊತೆಗೆ ನಿಲ್ಲಬೇಕಿದೆ. 500 ಕಿಮೀ ಪಾದಯಾತ್ರೆ ಮಾಡಿದರು. ಕ್ಷೇತ್ರದ ಅಭಿವೃದ್ಧಿಯಲ್ಲಿ ಕಂಬಿ ಮಂಟಪ, ಕಲ್ಯಾಣ ಮಂಟಪ ಮೊದಲ ಹೆಜ್ಜೆಯಾಗಿದೆ. ಶಾಲೆ, ಆಸ್ಪತ್ರೆ ನಿರ್ಮಾಣದ ಸಂಕಲ್ಪಕ್ಕೆ ಶ್ರೀ ಶೈಲ ಮಲ್ಲಿಕಾರ್ಜುನ ಆಶೀರ್ವಾದ ಮಾಡುತ್ತಾರೆ. ಸರ್ಕಾರ ಈಗಾಗಲೇ ₹5 ಕೋಟಿಗಳನ್ನು ಮಂಜೂರು ಮಾಡಿದ್ದು, ಮುಂದಿನ ಬಜೆಟ್ ನಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ಕರ್ನಾಟಕದಿಂದ ಪ್ರತಿದಿನ ಸಾವಿರಾರು ಜನ ಕಾಶಿಗೆ ಹೋಗುತ್ತಾರೆ. ಅಲ್ಲಿಯ ಜಂಗಮ ಮಠ ಬಿಟ್ಟರೆ ಕನ್ನಡಿಗರಿಗೆ ಬೇರೆ ಸ್ಥಳವಿಲ್ಲ. ಶ್ರೀ ಶೈಲಕ್ಕೆ ಬಂದರೆ ಶ್ರೀಮಠದ ಆಶ್ರಯ. ಉಜ್ಜಯನಿ ಮಠವೂ ಹಾಗೆ ಇದೆ. ಪೀಠಗಳ ಅಭಿವೃದ್ಧಿ ಹಾಗೂ ಭಕ್ತರಿಗೆ ವ್ಯವಸ್ಥೆ ಗಳೂ ಆಗಬೇಕು. ಪರಮಪೂಜ್ಯರು ಭಕ್ತರ ಬಳಿಗೆ ಹೋಗುವ ಕಾರ್ಯ ಮುಂದುವರೆಯಬೇಕು ಎಂದು ತಿಳಿಸಿದರು.
ಧರ್ಮದ ಹೆಸರಿನಲ್ಲಿ ಸಂಘರ್ಷ: ಧರ್ಮದ ಹೆಸರಿನಲ್ಲಿ ಬಹಳಷ್ಟು ಸಂಘರ್ಷವಾಗುತ್ತಿದೆ. ಯಾವ ಧರ್ಮ ಮನುಜರನ್ನು ಕೂಡಿಸಬೇಕೋ ಅದೇ ಧರ್ಮದ ಹೆಸರಿನಲ್ಲಿ ಸಂಘರ್ಷವಾಗುತ್ತಿದೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಯಾಗುತ್ತಿರುವುದು ಆತಂಕದ ಸಂಗತಿ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಶಾಸಕ ವೀರಣ್ಣ ಸಿ. ಚರಂತಿಮಠ ಹಾಗೂ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.