ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಕವಿಯಾಗಲು ಬದ್ಧತೆ ಅಗತ್ಯ

ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಶೀಲಾದಾಸ ಹೇಳಿಕೆ
Last Updated 17 ಮಾರ್ಚ್ 2019, 14:19 IST
ಅಕ್ಷರ ಗಾತ್ರ

ರಾಯಚೂರು: ಬರಹಗಾರನಿಗೆ ಬದ್ಧತೆ ಮತ್ತು ಬರವಣಿಗೆಯ ಮೇಲೆ ವಿಶ್ವಾಸ ಇದ್ದಾಗ ಮಾತ್ರ ಉತ್ತಮ ಕವಿಯಾಗಬಲ್ಲ ಎಂದು ಎಲ್‌ವಿಡಿ ಕಾಲೇಜಿನ ಉಪನ್ಯಾಸಕಿ ಶೀಲಾದಾಸ ಹೇಳಿದರು.

ನಗರದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾನುವಾರ ಆಯೋಜಿಸಿದ್ದ ‘ತಿಳಿಯದೇ ಹೋದೆ’ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.

ಕಾವ್ಯ ರಚನೆಯ ಬಗ್ಗೆ ನಾಡಿನ ವಿವಿಧ ಪ್ರಖ್ಯಾತರು ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿದ್ದಾರೆ. ಅವರು ಕವನಗಳನ್ನು ರಚಿಸಿ ಓದುಗರಿಗೆ ನೀಡಿರುವುದು ಅವರಲ್ಲಿನ ಕಾವ್ಯ ರಚನೆಯ ಬದ್ಧತೆಯನ್ನು ತೋರಿಸುತ್ತದೆ ಎಂದರು.

ಮಾತು ಮತ್ತು ಬರವಣಿಗೆಗೆ ವ್ಯತ್ಯಾಸವಿದೆ. ಬರವಣಿಗೆ ಜನ ಮೆಚ್ಚುಗೆ ಪಡೆದಾಗ ಕವಿಗೆ ಮಹಿಳೆ ತಾಯಿಯಾದಷ್ಟು ಸಂತೃಪ್ತಿ ಸಿಗಲಿದೆ. ಮೌಲಿಕ, ಸಾತ್ವಿಕ ಮತ್ತು ತಾತ್ವಿಕತೆಯ ಸಾಹಿತ್ಯ ಸಮಾಜದಲ್ಲಿ ಶಾಶ್ವತವಾಗಿರುತ್ತದೆ ಎಂದು ತಿಳಿಸಿದರು.

ಸಾಹಿತಿಗೆ ಬರವಣಿಗೆ ನಿತ್ಯಕರ್ಮವಾಗಬೇಕು. ಬದ್ಧತೆ ಇಟ್ಟುಕೊಂಡವರೇ ನಿಜವಾದ ಸಾಹಿತಿಗಳು. ಬರಹಗಾರ ಮೊದಲು ತನ್ನನ್ನು ತಾನು ವಿಮರ್ಶೆ ಮಾಡಿಕೊಳ್ಳಬೇಕು. ಎಲ್ಲಿಯವರೆಗೆ ಅಧ್ಯಯನಶೀಲ, ಸಂವೇದನಾಶೀಲರು ಆಗುವುದಿಲ್ಲವೋ ಅಲ್ಲಿಯವರೆಗೆ ಪರಿಪೂರ್ಣತೆ ಪಡೆಯಲಾರ ಎಂದರು.

ಸಾಹಿತಿ ಗುಂಡೂರಾವ್ ದೇಸಾಯಿ ಕೃತಿ ಕುರಿತು ಮಾತನಾಡಿ, ಸಮಾಜದಲ್ಲಿನ ಕಷ್ಟಕಾರ್ಪಣ್ಯಗಳನ್ನು ಸ್ವತಃ ಅನುಭವಿಸಿ, ಸರ್ಕಾರದ ಧೋರಣೆ, ರೈತರ ಸ್ಥಿತಿಗತಿ, ಅಮ್ಮನ ಮಮತೆ ಹೀಗೆ ಹತ್ತಾರು ವಿಚಾರಗಳನ್ನು ಅತ್ಯಂತ ಸಮರ್ಥವಾಗಿ ಓದುಗನ ಮನ ಮುಟ್ಟುವಂತೆ ಯುವ ಕವಿ ವೇಣು ಕೃತಿ ರಚಿಸಿದ್ದಾರೆ ಎಂದರು.

ಕಸಾಪ ತಾಲ್ಲೂಕು ಅಧ್ಯಕ್ಷೆ ಗಿರಿಜಾ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು.ಸಾಹಿತಿ ವೀರ ಹನುಮಾನ್, ಶ್ಯಾಮಸುಂದರ ಅಸ್ಕಿಹಾಳ, ಆಂಜನೇಯ ಜಾಲಿಬೆಂಚಿ, ಭೀಮನಗೌಡ ಇಟಗಿ, ಕವನ ಸಂಕಲನ ರಚಿಸಿದ ಕವಿ ವೇಣು ಜಾಲಿಬೆಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT