ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು | R.H ಕ್ಯಾಂಪ್ ನಂ.2ರಲ್ಲಿ ಕೋಮು ಘರ್ಷಣೆ; ಉದ್ವಿಗ್ನ ಸ್ಥಿತಿ, ನಾಲ್ವರ ಬಂಧನ

Published 17 ಜುಲೈ 2023, 10:58 IST
Last Updated 17 ಜುಲೈ 2023, 10:58 IST
ಅಕ್ಷರ ಗಾತ್ರ

ಸಿಂಧನೂರು (ರಾಯಚೂರು ಜಿಲ್ಲೆ): ಯುವತಿಯೊಬ್ಬಳು ಒಂದು ಧರ್ಮದ ವಿರುದ್ಧ ಅವಹೇಳನಕಾರಿ ಸಂದೇಶ ಕಳಿಸಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ಆರ್.ಎಚ್ ಕ್ಯಾಂಪ್-2 ರಲ್ಲಿ ಭಾನುವಾರ ಸಂಜೆ ದಾಂಧಲೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, 35 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಂಧನೂರಿನ ಯುವಕರ ಗುಂಪು ತಾಲ್ಲೂಕಿನ ಆರ್.ಎಚ್ ಕ್ಯಾಂಪ್-2 ರಲ್ಲಿ ದಾಂಧಲೆ ನಡೆಸಿದ ಪರಿಣಾಮ ಎರಡು ಕೋಮುಗಳ ಮಧ್ಯೆ ಮಾತಿನ ಚಕಮಕಿ ನಡೆದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್‍ಸ್ಟಾಗ್ರಾಂನಲ್ಲಿ ಕ್ಯಾಂಪ್‌ನ ಯುವತಿಯೊಬ್ಬಳು ಪ್ರವಾದಿಯ ಕುರಿತು ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ್ದಳು. ಶನಿವಾರ ಸಂಜೆ ಇದನ್ನು ನೋಡುತ್ತಿದ್ದಂತೆಯೇ ಮುಸ್ಲಿಮ್ ಯುವಕರ ಗುಂಪು ಕ್ಯಾಂಪ್‌ಗೆ ಬಂದು ಕ್ಯಾಂಪಿನ ಮುಖಂಡರನ್ನು ಭೇಟಿಯಾಗಿ ವಿಚಾರಿಸಿದ್ದಾರೆ. ಕ್ಯಾಂಪಿನ ಮುಖಂಡರು ಅವಹೇಳನಕಾರಿ ಸಂದೇಶ ಕಳಿಸಿದ ಯುವತಿಯನ್ನು ಕರೆದು ಸತ್ಯಾಸತ್ಯತೆ ಕುರಿತು ಚರ್ಚಿಸಿ ಎಚ್ಚರಿಕೆ ನೀಡುವ ಭರವಸೆ ನೀಡಿದ ನಂತರ ಯುವಕರು ಸಿಂಧನೂರಿಗೆ ಮರಳಿದ್ದರು.

ಆದರೆ, ಭಾನುವಾರ ಸಂಜೆ ಪುನಃ ಅದೇ ಯುವಕರ ಗುಂಪು ಆರ್.ಎಚ್ ಕ್ಯಾಂಪ್ ನಂ.2 ದುರ್ಗಾದೇವಿ ದೇವಸ್ಥಾನದ ಆವರಣಕ್ಕೆ ಬಂದು ಅಲ್ಲಾಹು ಅಕ್ಬರ್ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಆಗ ಸ್ಥಳೀಯರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತಿನ ಚಕಮಕಿ ನಡೆದು ಎರಡು ಗುಂಪುಗಳ ನಡುವೆ ಘರ್ಷಣೆಗೆ ದಾರಿ ಮಾಡಿಕೊಟ್ಟಿತು.

ಮಾಹಿತಿ ತಿಳಿಯುತ್ತಿದ್ದಂತೆಯೇ ಸರ್ಕಲ್ ಇನ್‌ಸ್ಪೆಕ್ಟರ್ ರವಿಕುಮಾರ ಕಪ್ಪತ್ನವರ್ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಮಣಿಕಂಠ, ಶಹರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ ಹಾಗೂ 112 ಸಿಬ್ಬಂದಿ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪೊಲೀಸ್‌ ಪಡೆ ಬರುತ್ತಿದ್ದಂತೆಯೇ ದಾಂದಲೆ ನಡೆಸುತ್ತಿದ್ದವರು ಕ್ಯಾಂಪ್‌ನಿಂದ ಓಡಿ ಹೋಗಿದ್ದಾರೆ. ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗಾಯಗೊಂಡ ಒಬ್ಬ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಒಟ್ಟು 35 ಯುವಕರ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಈ ಘಟನೆ ತಿಳಿದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಮುಖಂಡರಾದ ಕೊಲ್ಲಾ ಶೇಷಗಿರಿರಾವ್, ಮಧ್ವರಾಜ್ ಆಚಾರ್, ವಿಶ್ವ ಹಿಂದೂ ಪರಿಷತ್‍ನ ಪ್ರಹ್ಲಾದ ಕೆಂಗಲ್ ಹಾಗೂ ಇತರರು ಕ್ಯಾಂಪಿಗೆ ಭೇಟಿ ನೀಡಿ ಬಂಗಾಲಿಗರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT