ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಜಿಲ್ಲೆಯಾದ್ಯಂತ ನಿರಂತರ ಮಳೆ: ಧರೆಗೆ ಉರುಳಿದ ಭತ್ತದ ಬೆಳೆ

Last Updated 17 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಸಿಂಧನೂರು: ಕಳೆದೊಂದು ವಾರದಿಂದ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದ ಕೊಯ್ಲಿಗೆ ಬಂದ ಭತ್ತದ ಬೆಳೆ ಧರೆಗೆ ಉರುಳಿದ ಪರಿಣಾಮ ರೈತರಿಗೆ ಅಪಾರ ನಷ್ಟವಾಗಿದೆ.

ಮಸ್ಕಿ, ಬಪ್ಪೂರು, ತುರ್ವಿಹಾಳ, ಗಂಗಾವತಿ, ರಾಯಚೂರು, ಸಿರಗುಪ್ಪ ಮುಖ್ಯರಸ್ತೆ ಸೇರಿದಂತೆ ಎಲ್ಲೆಡೆಯಲ್ಲಿ ಕೊಯ್ಲಿಗೆ ಬಂದ ಭತ್ತ ಮಳೆ ಮತ್ತು ಗಾಳಿಯಿಂದ ನೆಲಕ್ಕೆ ಉರುಳಿ ಬಿದ್ದಿರುವುದೇ ಕಂಡು ಬರುತ್ತಿದೆ.

ಗಾಂಧಿನಗರ, ಸಾಸಲಮರಿ ಕ್ಯಾಂಪ್, ಜವಳಗೇರಾ, ಪಗಡದಿನ್ನಿ, ಕುರುಕುಂದಿ, ಹಂಚಿನಾಳ, ಹಂಚಿನಾಳ ಕ್ಯಾಂಪ್, ಉಪ್ಪಲದೊಡ್ಡಿ, ಕೋಳಬಾಳ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದಿರುವ ಭತ್ತದ ಬೆಳೆಯ ಪೈಕಿ ಶೇ 70 ರಷ್ಟು ಬೆಳೆ ಹಾನಿವಾಗಿರಬಹುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಮಯ್ಯ ಜವಳಗೇರಾ ಹೇಳುತ್ತಾರೆ.

ಕಳೆದ ಮುಂಗಾರು ಮತ್ತು ಹಿಂಗಾರು ಬೆಳೆಗೆ ಯೋಗ್ಯ ಬೆಲೆ ಇಲ್ಲದೆ ನಷ್ಟ ಅನುಭವಿಸಿದ್ದ ರೈತರಿಗೆ ಈ ಬಾರಿಯ ಹಂಗಾಮಿನಲ್ಲಿ ಉತ್ತಮ ಇಳುವರಿ ಬಂದಿದ್ದರಿಂದ ಕೃಷಿ ಚಟುವಟಿಕೆಗಾಗಿ ಈ ಹಿಂದೆ ಮಾಡಿದ್ದ ಬ್ಯಾಂಕ್, ಗೊಬ್ಬರದ ಅಂಗಡಿ ಮತ್ತಿತರ ಕೈಸಾಲಗಳನ್ನು ತೀರಿಸಿ ಸಾಲ ಮುಕ್ತರಾಗಬಹುದು ಎಂದು ಕನಸು ಕಟ್ಟಿಕೊಂಡಿದ್ದ ರೈತರಿಗೆ ದಿಕ್ಕು ತೋಚದಂತಾಗಿದೆ.

ಆರ್‍ಎನ್‍ಆರ್ ತಳಿಯ ಭತ್ತ ಹೆಚ್ಚು ಎತ್ತರ ಬೆಳೆದಿರುವುದರಿಂದ ಯಾವ ಹೊಲದಲ್ಲೂ ಮಳೆ ಬರುವ ಪೂರ್ವದಲ್ಲಿ ಇದ್ದಂತೆ ಭತ್ತದ ಬೆಳೆ ಉಳಿದಿಲ್ಲ. ಎಲ್ಲವೂ ನೆಲಕ್ಕೆ ಬಿದ್ದಿದೆ. ಸೋನಾ ಮಸೂರಿಯು ಸಹ ಕೆಲ ಗ್ರಾಮಗಳಲ್ಲಿ ಮಳೆ ಮತ್ತು ಗಾಳಿಯಿಂದ ನೆಲಕ್ಕೆ ಉರುಳಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಮುಖಂಡ ವೆಂಕನಗೌಡ ಗದ್ರಟಗಿ ಹೇಳಿದರು.

ಒಂದು ವಾರದಿಂದ ಕೆಲವು ಭಾಗದಲ್ಲಿ ಭತ್ತ ನೆಲಕ್ಕೆ ಬಿದ್ದಿರುವುದರಿಂದ ಈಗಾಗಲೇ ಮೊಳಕೆ ಹೊಡೆದಿದೆ. ಸದ್ಯಕ್ಕೆ ಮಳೆ ಸ್ಥಗಿತಗೊಂಡರೂ ನೆಲ ಒಣಗಿ ಭತ್ತ ಕೊಯ್ಯುವುದರೊಳಗಾಗಿ ಶೇ 60 ರಷ್ಟು ಭತ್ತ ಹಾನಿಯಾಗುವ ಸಂಭವವಿದೆ ಎಂದು ಕರ್ನಾಟಕ ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್ ಅವರ ಅನಿಸಿಕೆಯಾಗಿದೆ.

ಸಮೀಕ್ಷೆಗೆ ಆಗ್ರಹ: ಪ್ರಕೃತಿ ವಿಕೋಪದಿಂದ ಭತ್ತದ ಬೆಳೆ ಹಾನಿಯಾಗಿರುವುದನ್ನು ಪರಿಗಣಿಸಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತಹಶೀಲ್ದಾರರು ತಕ್ಷಣ ಜಂಟಿ ಸಮೀಕ್ಷೆ ನಡೆಸಿ, ಹಾನಿಯಾದ ರೈತರಿಗೆ ಪರಿಹಾರ ಕೊಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಸಾಸಲಮರಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT