ರಾಯಚೂರು: ‘ದೇಶದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮತ್ತು ಕೈಗಾರಿಕೆಗಳ ಸಹಭಾಗಿತ್ವ ಅತಿಮುಖ್ಯ‘ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಆರ್.ಕೇಶವ ಹೇಳಿದರು.
ರಾಯಚೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಕೇಂದ್ರ ಆಯ-ವ್ಯಯ (ಬಜೆಟ್) 2024-25 ರ ವಿಶ್ಲೇಷಣೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
‘ದೇಶದಲ್ಲಿ ಕೇವಲ ಶೇ 11.4 ರಷ್ಟು ಮಾತ್ರ ಉತ್ಪಾದಕತೆ ಇದೆ. ಇದು ಹೆಚ್ಚಾಗಬೇಕು. ಅತಿ ಹೆಚ್ಚು ಮಹಿಳೆಯರು ಉದ್ಯೋಗದಲ್ಲಿ ತೊಡಗಬೇಕು. ಭಾರತದ ಆರ್ಥಿಕತೆ ಶೇಕಡ 8.2ರಷ್ಟು ಬೆಳವಣಿಗೆ ಆಗಿದೆ. ತಲಾ ಆದಾಯ 2.12 ಲಕ್ಷ ಇದೆ. ಅಭಿವೃದ್ಧಿ ಹೊಂದಿದ ರಾಷ್ಟ್ರ ಆಗಬೇಕಾದರೆ 14.9 ಸಾವಿರ ಡಾಲರ್ ಆಗಬೇಕು ಆದರೆ ಈಗ 2.5 ಸಾವಿರ ಡಾಲರ್ ಇದೆ ಎಂದರು.
‘ಆಯ-ವ್ಯಯ ಮಾಡುವುದಾದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗುವ ಬದಲಾವಣೆ ಕುರಿತು ವಿಶ್ಲೇಷಣೆ ಮಾಡುವುದು ಉತ್ತಮ. ಶೇಕಡ 45 ರಷ್ಟು ಜನರು ಕೃಷಿಯಲ್ಲಿ ತೊಡಗಿದ್ದಾರೆ. 56.5 ಕೋಟಿ ಜನ ವರ್ಕ್‍ಫೋರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. 78.5 ಲಕ್ಷ ಕೃಷಿಯೇತರ ಹುದ್ದೆಗಳನ್ನು ಸೃಷ್ಟಿ ಮಾಡಬೇಕು‘ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಶ್ವನಾಥ.ಎಂ. ಮಾತನಾಡಿ, ‘ಬಜೆಟ್ ವಿಶ್ಲೇಷಣೆ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ, ಹಾಗೂ ಸಾಮಾಜ ವಿಜ್ಞಾನಗಳಲ್ಲಿಯೇ ಅರ್ಥಶಾಸ್ತ್ರ ಒಂದು ಉತ್ಕಷ್ಟ ವಿಷಯವಾಗಿದ್ದು ವಿದ್ಯಾರ್ಥಿಗಳೆಲ್ಲರೂ ಆರ್ಥಿಕ ವಿಷಯಗಳನ್ನು ಸಂಗತಿಗಳನ್ನು ಅರಿಯಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ಫತ್ತೇಪುರ, ಕಲಾನಿಕಾಯದ ಡೀನ್ ಪ್ರೊ.ಪಿ.ಭಾಸ್ಕರ್, ವಿಜ್ಞಾನ ನಿಕಾಯದ ಡೀನ್ ಪ್ರೊ.ಪಾರ್ವತಿ ಸಿ.ಎಸ್. ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜಕ ಡಾ.ನಾಗರಾಜ.ಕೆ ಸ್ವಾಗತಿಸಿದರು. ವಿದ್ಯಾರ್ಥಿನಿ ಸವಿತಾ ಪ್ರಾರ್ಥಿಸಿದರು, ಅತಿಥಿ ಉಪನ್ಯಾಸಕರಾದ ದುರುಗಪ್ಪ ಗಣೇಕಲ್ ನಿರೂಪಿಸಿದರು, ಡಾ.ಶಂಕರಾನಂದ.ಜಿ ಸಂಪನ್ಮೂಲ ವ್ಯಕ್ತಿ ಪರಿಚಯಿಸಿದರು. ರಾಮಚಂದ್ರಪ್ಪ ವಂದಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಿವರಾಜ, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.