ಸೋಮವಾರ, ಜೂನ್ 27, 2022
28 °C
ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್ ಅಧ್ಯಕ್ಷತೆಯಲ್ಲಿ ಸಭೆ

ಪ್ರವಾಹ ನಿರ್ವಹಣೆಗೆ ಸನ್ನದ್ಧರಾಗಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಈ ವರ್ಷವೂ ಮಳೆಗಾಲದಲ್ಲಿ ಪ್ರವಾಹ ಏರ್ಪಟ್ಟರೆ ಜನರು ಮತ್ತು ಜಾನುವಾರು ರಕ್ಷಿಸುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರವಾಹ ಪರಿಸ್ಥಿತಿ ಎದುರಿಸುವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹವಾಮಾನ ಇಲಾಖೆಯು ಈ ಬಾರಿ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಅಗತ್ಯ ಮಳೆಯಾಗಲಿದೆ. ಪ್ರವಾಹ ಬರುವ ಸಾಧ್ಯತೆ ಇವೆ. ಜಿಲ್ಲೆಯಲ್ಲಿ ಹರಿಯುವ ಎರಡು ನದಿ ಪಾತ್ರದ ಪ್ರದೇಶಗಳಲ್ಲಿ ಸಂಭವನೀಯ ಮುಳುಗಡೆ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದೆ. ತುಂಗಭದ್ರ ನದಿ ಪಾತ್ರದ 33 ಗ್ರಾಮಗಳು ಹಾಗೂ ಕೃಷ್ಣ ನದಿ ಪಾತ್ರದ 72 ಗ್ರಾಮಗಳಲ್ಲಿ ನದಿಯ ನೀರು ನುಗ್ಗಲಿದೆ ಅಲ್ಲಿ ಅಲ್ಲಿ ವಾಸಮಾಡುತ್ತಿರುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸನ್ನದ್ದರಾಗಿರಬೇಕು ಎಂದು ಸೂಚಿಸಿದರು.

ತುಂಗಭದ್ರ ನದಿ ಪಾತ್ರದ 33 ಗ್ರಾಮಗಳಲ್ಲಿ 66,764 ಜನ ವಾಸ ಮಾಡುತ್ತಿದ್ದು ಹಾಗೂ ಕೃಷ್ಣ ನದಿ ಪಾತ್ರದ 72 ಗ್ರಾಮಗಳಲ್ಲಿ 82 ಸಾವಿರ ಜನ ವಾಸಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಬಾಧಿತರಾಗುವ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಬೇಕು. ರಾಯಚೂರು ಮತ್ತು ಲಿಂಗಸುಗೂರು ತಾಲ್ಲೂಕುಗಳಲ್ಲಿ ಮಾತ್ರ ನಡುಗಡ್ಡೆ ಗ್ರಾಮಗಳಿದ್ದು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯಿಂದ ಪ್ರವಾಹ ಮುನ್ನೆಚ್ಚರಿಕೆಗಾಗಿ ನಡುಗಡ್ಡೆ ಗ್ರಾಮಗಳ ಜನ ಮತ್ತು ಜಾನುವಾರುಗಳು ಸಹಿತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಕೃತಿ ವಿಕೋಪದಿಂದ ಉಂಟಾಗುವ ಕೃಷಿ, ತೋಟಗಾರಿಕೆ ಬೆಳೆಗಳು, ಮಾನವ ಹಾಗೂ ಜಾನುವಾರು, ಮನೆ ಹಾನಿ ವರದಿಯನ್ನು ಪ್ರತಿ ತಾಲ್ಲೂಕಿನಿಂದ ನಿಯೋಜಿತ ಅಧಿಕಾರಿಗಳು ಸಲ್ಲಿಸಬೇಕು. ಗ್ರಾಮಲೆಕ್ಕಾಧಿಕಾರಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು ಕೇಂದ್ರ ಸ್ಥಾನದಲ್ಲೇ ಇದ್ದು ಅತೀವೃಷ್ಟಿ ಅಪಾಯಗಳ ಕುರಿತು ಜನರಿಗೆ ಎಚ್ಚರಿಕೆ ಸಂದೇಶ ನೀಡಬೇಕು ಎಂದು ನಿರ್ದೇಶನ ನೀಡಿದರು.

ಜಲಾಶಯಗಳಲ್ಲಿ ಶೇಖರಣೆಯಾದ ನೀರಿನ ಪ್ರಮಾಣ, ಒಳ ಹಾಗೂ ಹೊರ ಹರಿವಿನ ಮೇಲೆ ನಿಗಾ ಇಡಬೇಕು. ಮುನ್ಸೂಚನೆ ಇಲ್ಲದೇ ಏಕಾಏಕಿ ಜಲಾಶಯಗಳಿಂದ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸದಂತೆ ಅತ್ಯಗತ್ಯ ಕ್ರಮ ಕೈಗೊಳ್ಳಬೇಕು. ಪ್ರವಾಹದಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೇಂದ್ರಗಳಲ್ಲಿ ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಕೆಮ್ಮು, ನೆಗಡಿ, ಜ್ವರ ಇತ್ಯಾದಿ ಲಕ್ಷಣ ಕಂಡುಬರುವವರನ್ನು ಪ್ರತ್ಯೇಕ ಕೊಠಡಿಯಲ್ಲಿರುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್, ಉಪವಿಭಾಗಾಧಿಕಾರಿಗಳಾದ ಸಂತೋಷ ಕಾಮಗೌಡ, ರಾಜಶೇಖರ ಡಂಬಳ, ಜಿಲ್ಲೆಯ ವಿವಿಧ ತಾಲ್ಲೂಕುಗಳ ತಹಶಿಲ್ದಾರರು ಹಾಗೂ ಎನ್.ಡಿ.ಆರ್.ಎಫ್ ತಂಡದ ಮುಖ್ಯಸ್ಥರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು