ಶುಕ್ರವಾರ, ಮೇ 14, 2021
35 °C
ಮಾದರಿ ನೀತಿ ಸಂಹಿತೆ ಕುರಿತಾದ ಸಭೆಯಲ್ಲಿ ಡಿಸಿ ಹೇಳಿಕೆ

ಅಕ್ರಮ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ (ರಾಯಚೂರು): ಜಿಲ್ಲೆಯ ಮಸ್ಕಿ ವಿಧಾನಸಭೆಯ ಉಪಚುನಾವಣೆಗೆ ಒಂದು ವಾರ ಬಾಕಿಯಿದ್ದು, ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ಮಸ್ಕಿಯ ಭ್ರಮರಾಂಭ ಕಲ್ಯಾಣಮಂಟಪದಲ್ಲಿ ಪಿಡಿಓ, ವಿಎ, ಆರ್‍ಐಗಳಿಗೆ ಶನಿವಾರ ಆಯೋಜಿಸಲಾಗಿದ್ದ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ತರುವ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣೆಗೆ ಸಂಬಂಧಿಸಿದೆ ಯಾವುದೇ ಅಕ್ರಮಗಳು ಕಂಡು ಬಂದಲ್ಲಿ ಸಂಬಂಧಿಸಿದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.

ಎರಡು ದಿನಗಳಿಂದ ಹಣ ಹಂಚಿಕೆ ಸೇರಿದಂತೆ ತಮ್ಮ ಅಭ್ಯರ್ಥಿಗಳ ಪರ ಮತಸೆಳೆಯಲು ಆಮಿಷವೊಡ್ಡುವ ವರದಿಗಳು ವಿವಿಧ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಈ ರೀತಿಯ ಪ್ರಕರಣಗಳು ಕೂಡಲೇ ನಿಲ್ಲಬೇಕು. 18 ಸೆಕ್ಟರ್ ದರ್ಜೆಯ ಅಧಿಕಾರಿಗಳ ತಂಡ ಈ ವಿಧಾನಸಭೆ ಕ್ಷೇತ್ರದ ವಿವಿಧ ಗ್ರಾಮಗಳು ಹಾಗೂ ತಾಂಡಗಳಲ್ಲಿ ಸಂಚರಿಸಿ ಚುನಾವಣೆ ಅಕ್ರಮಗಳನ್ನು ತಡೆಯಲು ಹದ್ದಿನಕಣ್ಣು ಇಡಬೇಕು ಎಂದು ಹೇಳಿದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಕೂಡಲೇ ಸಂಬಂಧಿಸಿದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. ಅದಕ್ಕಾಗಿ ಪೊಲೀಸ್ ಇಲಾಖೆಯಿಂದ 20 ಸೆಕ್ಟರ್ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಈ ವಿಧಾನಸಭೆ ಕ್ಷೇತ್ರದಲ್ಲಿ ಹೊರಗಿನಿಂದ ಬಂದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ತಮ್ಮ ಪಕ್ಷದ ಪರವಾಗಿ ಮತದಾನ ಮಾಡುವಂತೆ ಹಣ ಹಂಚಿಕೆ ಸೇರಿದಂತೆ ಯಾವುದೇ ಆಮಿಷಗಳನ್ನು ವೊಡ್ಡಬಾರದು. ಈ ಬಗ್ಗೆಯೂ ಗಮಹರಿಸಬೇಕು ಎಂದರು.

ಹಣ ಹಂಚುವ ಅಥವಾ ಆಮಿಷವೊಡ್ಡುವ ಅಕ್ರಮಗಳು ಕಂಡುಬಂದಲ್ಲಿ ಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಸಂಬಂಧಿಸದವರೆ ನೇರ ಹೊಣೆಗಾರರಾಗುತ್ತಾರೆ. ಚುನಾವಣೆ ಆಯೋಗದ ನಿರ್ದೇಶನಗಳನ್ನು ಗಂಭೀರವಾಗಿ ಪಾಲಿಸಬೇಕು. ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದೇ ಅರ್ಥ. ಪ್ರತಿ ಫ್ಲೈಯಿಂಗ್ ಸ್ಸ್ಯಾಡ್ ಎಎಸ್‍ಐ ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಕೋವಿಡ್ ನಿಯಮಗಳು ಪಾಲನೆಯಾಗುತ್ತಿಲ್ಲವೆಂಬ ದೂರುಗಳು ಕೇಳಿ ಬರುತ್ತಿದ್ದು, ಸಾರ್ವಜನಿಕ ವೇದಿಕೆ ಕಾರ್ಯಕ್ರಮಗಳಲ್ಲಿ 500 ಕ್ಕೂ ಹೆಚ್ಚುಜನರು ಸೇರುವುಂತಿಲ್ಲ. ಅಲ್ಲಿದ್ದವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇದನ್ನು ಉಲ್ಲಂಘಿಸದ್ದಲ್ಲಿ ಪ್ರಕರಣ ದಾಖಲಿಸಬೇಕೆಂದು ತಾಕೀತು ಮಾಡಿದರು. ಉಲ್ಲಂಘನೆಯಾದಲ್ಲಿ ಸಾರ್ವಜನಿಕ ಸಭೆಗಳಿಗೆ ಅವಕಾಶ ಕೊಡಲಾಗುವುದಿಲ್ಲ ಎಂದು ತಿಳಿಸಿದರು.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಮೇಲುಸ್ತುವಾರಿ ಮಾಡಲು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರನ್ನು ವಿಶೇಷ ಅಧಿಕಾರಿಯಾಗಿ ನಿಯೋಜಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಮಾತನಾಡಿ, ಪೊಲೀಸ್‌ ಇಲಾಖೆಯಿಂದ 20 ಸೆಕ್ಟರ್ ತಂಡಗಳನ್ನು ರಚಿಸಲಾಗಿದೆ. ಹಣ ಹಂಚಿಕೆ ಮತ್ತು ಅಕ್ರಮ ಕಂಡುಬಂದಲ್ಲಿ ಸಂಬಂಧಿಸಿದ ಪೊಲೀಸ್‌ ಠಾಣೆಯ ಪಿಎಸ್‍ಐಗೆ ತಿಳಿಸಿ, ಪ್ರಕರಣ ದಾಖಲಿಸುವಂತೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಅವರು ಮಾತನಾಡಿ, ಚುನಾವಣೆಗೆ ಒಂದುವಾರ ಬಾಕಿಯಿದ್ದು, ಈ ಹಂತದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದರು.

ಚುನಾವಣೆ ವೀಕ್ಷಕ ಶ್ರೀಧರ್ ಬಾಬು ಅಡ್ಡಂಕಿ, ಚುನಾವಣಾಧಿಕಾರಿ ರಾಜಶೇಖರ ಡಂಬಳ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು