ಗುರುವಾರ , ಅಕ್ಟೋಬರ್ 22, 2020
22 °C
ನಗರ ಸ್ಥಳೀಯ ಸಂಸ್ಥೆ: ಐದು ಕಡೆ ಕಾಂಗ್ರೆಸ್‌, ಒಂದು ಕಡೆ ಬಿಜೆಪಿಗೆ ಸ್ಪಷ್ಟ ಬಹುಮತ

ರಾಯಚೂರು: ಪಕ್ಷೇತರ ಗೆದ್ದವರಿಗೆ ಹೆಚ್ಚಿದ ‘ಡಿಮ್ಯಾಂಡ್‌’

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಪಕ್ಷೇತರರಾಗಿ ಮತ್ತು ಜೆಡಿಎಸ್‌, ಸಮಾಜವಾದಿ ಪಕ್ಷಗಳಿಂದ ಆಯ್ಕೆಯಾದವರು ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಆದರೆ, ಅಧಿಕಾರದ ಗದ್ದುಗೆ ಹಿಡಿಯಲು ಪೈಪೋಟಿ ನಡೆಸುತ್ತಿರುವ ಕಾಂಗ್ರೆಸ್‌ ಮತ್ತು ಬಿಜೆಪಿಯವರು ಸ್ವತಂತ್ರವಾಗಿರುವ ಸದಸ್ಯರ ಮನವೊಲಿಸುತ್ತಿವೆ!

ರಾಯಚೂರು ನಗರಸಭೆಯಲ್ಲಿ ಅತಿಹೆಚ್ಚು 12 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಅಧಿಕಾರ ಪಡೆಯುವುದಕ್ಕೆ ಪಕ್ಷೇತರರಾಗಿ ಆಯ್ಕೆಯಾದ 9 ಸದಸ್ಯರ ಮನವೊಲಿಸಬೇಕು. 11 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಕೂಡಾ ಪಕ್ಷೇತರರ ಬೆಂಬಲ ಪಡೆದುಕೊಳ್ಳಲು ಈಗಾಗಲೇ ಪ್ರಯತ್ನ ಆರಂಭಿಸಿದೆ. ಯಾವ ಪಕ್ಷದವರು ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ದೇವದುರ್ಗದಲ್ಲಿ ಜೆಡಿಎಸ್‌ ಮತ್ತು ಸಮಾಜವಾದಿಯಿಂದ ಆಯ್ಕೆಯಾಗಿರುವ ನಾಲ್ಕು ಸದಸ್ಯರನ್ನು ಸೆಳೆದರೆ ಮಾತ್ರ ಬಿಜೆಪಿ ಅಧಿಕಾರದ ಚುನಾವಣೆ ಹಿಡಿಯುತ್ತದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶಾಸಕ ಶಿವನಗೌಡ ನಾಯಕ ಅವರು ವಿಶೇಷ ಪ್ರಯತ್ನ ಮಾಡಬೇಕಿದೆ ಎನ್ನುವ ಅಭಿಮತ ಆಯ್ಕೆಯಾದ ಸದಸ್ಯರದ್ದು. 11 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಉಳಿಸಿಕೊಳ್ಳುವುದಕ್ಕೆ ಇನ್ನೊಬ್ಬ ಸದಸ್ಯರ ಬೆಂಬಲ ಬೇಕಿದೆ. ಪಕ್ಷೇತರ ಅಭ್ಯರ್ಥಿ ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದು ಯಕ್ಷಪ್ರಶ್ನೆ.

ಮಾನ್ವಿ ಪುರಸಭೆಯಲ್ಲಿ ಕೂಡಾ ಬಹುಮತ ಸಾಬೀತುಪಡಿಸಲು ಕಾಂಗ್ರೆಸ್‌ ಪಕ್ಷಕ್ಕೆ ಒಬ್ಬರು ಸದಸ್ಯರ ಬೆಂಬಲ ಬೇಕಿದೆ. ಎಂಟು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್‌ ಸುಲಭವಾಗಿ ಅಧಿಕಾರ ವಹಿಸಿಕೊಳ್ಳುವುದಿಲ್ಲ. ಜೆಡಿಎಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನೇತೃತ್ವದಲ್ಲಿ ಸಮಾಜವಾದಿ ಪಕ್ಷದ ಸದಸ್ಯರು ಒಟ್ಟಾಗಿ ಪಕ್ಷೇತರ ಆಯ್ಕೆಯಾದವರ ಮನವೊಲಿಸಿದರೆ ಮಾತ್ರ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ‌ನ್ನು ಉಳಿಸಿಕೊಳ್ಳಬಹುದು. ಯಾವ ಪಕ್ಷದವರು ಅಧಿಕಾರ ವಹಿಸಿಕೊಳ್ಳಲು ಮುಂದೆ ಬರುತ್ತಾರೆ ಎಂಬುದು ಕೂತುಹಲಕಾರಿ.

ಸಿಂಧನೂರು ನಗರಸಭೆ, ಹಟ್ಟಿ ಪಟ್ಟಣ ಪಂಚಾಯಿತಿ , ಲಿಂಗಸುಗೂರು, ಮುದಗಲ್‌ ಪುರಸಭೆಗಳು ಹಾಗೂ ತುರ್ವಿಹಾಳ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ನಿಂದ ಆಯ್ಕೆಯಾದ ಸದಸ್ಯರಲ್ಲಿ ಆಂತರಿಕವಾಗಿ ಪೈಪೋಟಿ ಶುರುವಾಗಿದೆ. ಮೀಸಲಾತಿ ಹಾಗೂ ಸದಸ್ಯರ ಹಿರಿತನ ಗಮನದಲ್ಲಿಟ್ಟುಕೊಂಡು ಅಧ್ಯಕ್ಷ ಸ್ಥಾನ ಕೊಡಬಹುದು. ಮಸ್ಕಿ ಪುರಸಭೆಯಲ್ಲಿ ಮಾತ್ರ ಬಿಜೆಪಿಗೆ ಸ್ಪಷ್ಟ ಬಹುಮತವಿದೆ. ಬಳಗಾನೂರು, ತುರ್ವಿಹಾಳ ಪಟ್ಟಣ ಪಂಚಾಯಿತಿಗಳಿಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಸದಸ್ಯರೆಲ್ಲರೂ ಈಗ ಬಿಜೆಪಿ ಕಡೆಗೆ ನಡೆದಿದ್ದು, ಅಧಿಕಾರದಲ್ಲಿ ಯಾವ ಪಕ್ಷ ಇರುತ್ತದೆ ಎಂದು ನಿರ್ಣಯಿಸಲಾಗುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು