ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧ ವಿಜ್ಞಾನಕ್ಕೆ ಹೆಚ್ಚಿದ ಬೇಡಿಕೆ

ರಾಜೀವ್‌ ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ. ಎಸ್‌. ಸಚ್ಚಿದಾನಂದ ಹೇಳಿಕೆ
Last Updated 26 ಅಕ್ಟೋಬರ್ 2018, 14:07 IST
ಅಕ್ಷರ ಗಾತ್ರ

ರಾಯಚೂರು: ಜಾಗತಿಕವಾಗಿ ಔಷಧ ವಿಜ್ಞಾನಕ್ಕೆ (ಫಾರ್ಮಸಿ) ಬೇಡಿಕೆ ಹೆಚ್ಚಾಗುತ್ತಾ ನಡೆದಿದೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್‌. ಸಚ್ಚಿದಾನಂದ ಹೇಳಿದರು.

ನಗರದ ನವೋದಯ ಶಿಕ್ಷಣ ಸಂಸ್ಥೆಯ ಬೆಳ್ಳಿ ಮಹೋತ್ಸವ ನಿಮಿತ್ತ ನವೋದಯ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಶುಕ್ರವಾರದಿಂದ ಆರಂಭವಾದ ‘ಭಾರತೀಯ ಫಾರ್ಮಸಿ ಬೋಧಕರ ಒಕ್ಕೂಟದ ವಾರ್ಷಿಕ ಸಮಾವೇಶ – ಕಾಪ್ಟಿಕಾನ್‌–2018’ದಲ್ಲಿ ಮಾತನಾಡಿದರು.

ಫಾರ್ಮಸಿ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ಮತ್ತು ತಾಂತ್ರಿಕ ಬೆಳವಣಿಗೆಗಳನ್ನು ಪರಸ್ಪರ ಚರ್ಚೆ, ವಿಷಯ ಮಂಡನೆಗಳ ಮೂಲಕ ತಿಳಿದುಕೊಳ್ಳಬೇಕು. ಇದಕ್ಕಾಗಿ ವಿಶೇಷ ಸಮಾವೇಶಗಳನ್ನು ಆಯೋಜಿಸುವುದು ಸಮಂಜಸವಾಗಿದೆ ಎಂದರು.

ಫಾರ್ಮಸಿ ಬೋಧಕರಿಗೆ ವಾಸ್ತವ ಜಗತ್ತಿನ ಆಗುಹೋಗುಗಳ ಸಮರ್ಪಕ ಮಾಹಿತಿ ಒದಗಿಸುವ ಉದ್ದೇಶದಿಂದ ಕಲಬುರ್ಗಿ ಪ್ರಾದೇಶಿಕವಾಗಿ ಕೇಂದ್ರ ತೆರೆಯಲಾಗಿದೆ. ಜಗತ್ತಿನ ವಿವಿಧೆಡೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದ್ದು, ಅವುಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಬೋಧಕರ ಕೆಲಸವಾಗಬೇಕು ಎಂದು ತಿಳಿಸಿದರು.

ದೇಶದಲ್ಲಿ ಸದ್ಯ 250 ಔಷಧ ವಿಜ್ಞಾನ ಮಹಾವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ 60 ಔಷಧ ವಿಜ್ಞಾನ ಮಹಾವಿದ್ಯಾಲಯಗಳಿದ್ದು, ಎಲ್ಲ ಕಡೆಗಳಲ್ಲಿ ಮಾದರಿಯಾಗುವ ರೀತಿಯಲ್ಲಿ ಬೋಧಕರು ಕೆಲಸ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಕೊಡುವುದರಿಂದ ದೇಶದ ವಿದ್ಯಾರ್ಥಿಗಳು ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮನುಷ್ಯನನ್ನು ಅಪಾಯಕಾರಿ ರೋಗಗಳಿಂದ ಪಾರು ಮಾಡುವುದಕ್ಕಾಗಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ಅದರಲ್ಲೂ ಪ್ರಮುಖವಾಗಿ ಜೀವ ರಕ್ಷಕ ಔಷಧಗಳ ಸಂಶೋಧನೆಗಳ ಮಹತ್ವ ಹಾಗೂ ಹೊಸದಾಗಿ ಕಂಡು ಹಿಡಿದ ಔಷಧಗಳ ಜ್ಞಾನ ಪಡೆದುಕೊಳ್ಳುವುದು ಈ ಕ್ಷೇತ್ರದಲ್ಲಿರುವ ಎಲ್ಲರಿಗೂ ತುಂಬಾ ಮುಖ್ಯ ಎಂದು ತಿಳಿಸಿದರು.

ಜಾಗತಿಕವಾಗಿ ಹೋಲಿಕೆ ಮಾಡಿದರೆ ಭಾರತದಲ್ಲಿ ಫಾರ್ಮಸಿ ಕ್ಷೇತ್ರ ತುಂಬಾ ವೇಗದಲ್ಲಿ ಬೆಳೆಯುತ್ತಿದೆ. ಫಾರ್ಮಸಿ ಕ್ಷೇತ್ರದಲ್ಲಿ ನಡೆಯುವ ಗುಣಮಟ್ಟದ ಸಂಶೋಧನೆಗಳು ಕೂಡಾ ಗಮನ ಸೆಳೆಯುತ್ತಿವೆ. ಮುಂಬರುವ ವರ್ಷಗಳಲ್ಲಿ ಭಾರತವು ಔಷಧ ವಿಜ್ಞಾನದಲ್ಲಿ ಜಾಗತಿಕ ಗಮನ ಸೆಳೆಯುವ ದೇಶವಾಗಿ ಬೆಳೆಯಲಿದೆ ಎಂದು ಅಭಿಪ್ರಾಯಪಟ್ಟರು.

ಔಷಧ ವಿಜ್ಞಾನದಲ್ಲಿ ಅಗಾಧ ಬದಲಾವಣೆ ತರಲು ಬೋಧಕರಿಂದ ಮಾತ್ರ ಸಾಧ್ಯ. ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಬೋಧಕರು ಬದ್ಧತೆಯಿಂದ ನಿರ್ವಹಿಸಬೇಕು ಎಂದು ತಿಳಿಸಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್‌.ಆರ್‌. ರೆಡ್ಡಿ ಮಾತನಾಡಿ, ವಿಶ್ವದಲ್ಲಿ ಸದ್ಯಕ್ಕೆ ಮೂರು ಕೈಗಾರಿಕೆಗಳಿಗೆ ತುಂಬಾ ಬೇಡಿಕೆ ಇದೆ. ಈ ಕೈಗಾರಿಕೆಗಳಲ್ಲಾಗುವ ಬದಲಾವಣೆಗಳಿಗೆ ತುಂಬಾ ಬೇಡಿಕೆ ಇದೆ. ಒಂದು ರಕ್ಷಣಾ ವಲಯದ ಕೈಗಾರಿಕೆಗಳು, ಎರಡು ಮದ್ಯ ತಯಾರಿಕಾ ಕೈಗಾರಿಕೆಗಳು ಮತ್ತು ಇನ್ನೊಂದು ಫಾರ್ಮಸಿ ಕೈಗಾರಿಕೆಗಳು ಎಂದು ಹೇಳಿದರು.

ನವೋದಯ ಶಿಕ್ಷಣ ಸಂಸ್ಥೆಯು 1992 ರಲ್ಲಿ ಫಾರ್ಮಸಿ ಕಾಲೇಜಿನೊಂದಿಗೆ ಆರಂಭವಾಗಿದ್ದು, 25 ವರ್ಷಗಳಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದೆ. ಸದ್ಯಕ್ಕೆ 62 ವೃತ್ತಿಪರ ಕಾಲೇಜುಗಳಿದ್ದು, 4,695 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆಯು ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.

ಶಿಲ್ಪಾ ಮೆಡಿಕೇರ್‌ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ ಬುತಡಾ, ನವೋದಯ ಶಿಕ್ಷಣ ಸಂಸ್ಥೆಯ ರಿಜಿಸ್ಟ್ರಾರ್‌ ಡಾ. ಟಿ. ಶ್ರೀನಿವಾಸ್‌, ಕರ್ನಾಟಕ ರಾಜ್ಯ ಫಾರ್ಮಸಿ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ವಿ. ಯಾವಗಲ್‌, ಡಾ. ಎಚ್‌. ದೊಡ್ಡಯ್ಯ, ಡಾ. ಮಿಲಿಂದ್‌ ಜೆ. ಉಮೆಕಾರ್‌, ರುದ್ರಗೌಡ ಜಿ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT