ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐದು ತಿಂಗಳು ಕತ್ತೆ ಕಾಯ್ತಾ ಇದ್ರಾ?

ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ
Published 16 ಜನವರಿ 2024, 15:31 IST
Last Updated 16 ಜನವರಿ 2024, 15:31 IST
ಅಕ್ಷರ ಗಾತ್ರ

ರಾಯಚೂರು: ‘ಕಲಬುರಗಿಯಲ್ಲಿ ನಡೆಸಿದ ವಿಭಾಗ ಮಟ್ಟದ ಸಭೆಯಲ್ಲೇ ಇ–ಆಫೀಸ್‌ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದೆ. ಐದು ತಿಂಗಳು ಕಳೆದರೂ ಇ–ಆಫೀಸ್‌ನಲ್ಲಿ ಕೆಲಸ ಮಾಡುತ್ತಿಲ್ಲ ಅಂದರೆ ಇಷ್ಟುದಿನ ಏನು ಕತ್ತೆ ಕಾಯುತ್ತಿದ್ರಾ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆ ‍ಪ್ರಗತಿ ಪರಿಶೀಲನೆ ನಡೆಸಿ ಸರಿಯಾಗಿ ಕಾರ್ಯನಿರ್ವಹಿಸದ ತಹಶೀಲ್ದಾರ್‌ಗಳ ವಿರುದ್ಧ ಗರಂ ಆಗಿ ಮಾತನಾಡಿದರು.

‘ಮಾಡ್ತೇವೆ ಎಂದು ಏನ್‌ ಮಾಡ್ತಾ ಇದ್ದೀರಿ. ಒಳ್ಳೆಯ ಮಾತಿನಲ್ಲಿ ಹೇಳಿದರೆ ನಿಮಗೆ ಅರ್ಥವೇ ಆಗುತ್ತಿಲ್ಲ. ನಿಮ್ಮ ಭಾಷೆಯಲ್ಲೇ ವಿಚಾರಿಸಬೇಕಾಗುತ್ತದೆ. ನೀವು ಹೀಗೆ ಮಾಡಿದರೆ ಜನರಿಗೆ ಏನು ಉತ್ತರ ಕೊಡಬೇಕು’ ಎಂದು ಪ್ರಶ್ನಿಸಿದರು.

‘ಎಲ್ಲ ಕಡತಗಳನ್ನು ಇ–ಫೈಲಿಂಗ್‌ ಮಾಡಿಯೇ ನೋಡಬೇಕು ಎಂದು ಸ್ಪಷ್ಟವಾಗಿ ಸೂಚಿಸಿದ್ದೇನೆ. ಆದರೂ ಕಡತಗಳನ್ನು ಇಟ್ಟುಕೊಂಡು ನೋಡುತ್ತೀದ್ದೀರಿ. ನಿಮಗೆ ಬೇಕಾದ ಫೈಲ್‌ಗಳು ಬೇಗ ವಿಲೇವಾರಿ ಆಗುತ್ತವೆ. ನಿಮಗೆ ಬೇಡವಾದ ಫೈಲ್‌ಗಳು ವಿಲೇವಾರಿ ಆಗುವುದೇ ಇಲ್ಲ. ಹೀಗಾದರೆ ಜನರ ಸಮಸ್ಯೆಗೆ ಪರಿಹಾರ ಸಿಗುವುದೆಂದು’ ಎಂದು ಜೋರಾಗಿಯೇ ತರಾಟೆಗೆ ತೆಗೆದುಕೊಂಡರು.

‘ಮಾನ್ವಿ ತಹಶೀಲ್ದಾರರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಅಂದಾದರೆ ಉಪ ವಿಭಾಗಾಧಿಕಾರಿಯಾದರೂ ಮೇಲ್ವಿಚಾರಣೆ ಮಾಡಬೇಕಲ್ಲ. ಉಪ ವಿಭಾಗಾಧಿಕಾರಿಯೂ ಹೀಗೆ ಮಾಡಿದರೆ ಹೇಗೆ? ಜಿಲ್ಲಾಧಿಕಾರಿ ಸರಿಯಾಗಿ ಮೇಲ್ವಿಚಾರಣೆ ನಡೆಸಬೇಕು. ಒಂದು ತಿಂಗಳಲ್ಲಿ ಇ–ಆಫೀಸ್‌ ಸರಿಯಾಗಿ ಅನುಷ್ಠಾನಬೇಕು’ ಎಂದು ಸೂಚನೆ ನೀಡಿದರು.

‘ಕಚೇರಿಗೆ ಸಿಬ್ಬಂದಿ ಹೊಸ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅವರಿಗೆ ನಾಲ್ಕೈದು ಬಾರಿ ತರಬೇತಿಯನ್ನೂ ನೀಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ’ ಎಂದು ರಾಯಚೂರು ತಹಶೀಲ್ದಾರ್ ಸಮಸ್ಯೆ ತೋಡಿಕೊಂಡರು.

‘ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲ ಮಾಡುತ್ತಿರುವಾಗ ನೀವು ನೆಪ ಹೇಳುತ್ತ ಕುಳಿತರೆ ಸಾಲದು. ಕೆಲಸ ಬಾರದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಸಚಿವರು ಎಚ್ಚರಿಸಿದರು.

ಜಿಲ್ಲಾಧಿಕಾರಿ ಚಂದ್ರಶೇಖರ ಮಾತನಾಡಿ, ‘ಲಿಂಗಸುಗೂರು ನೂತನ ಆಡಳಿತ ಸೌಧಕ್ಕೆ ಕೆಎಸ್‌ಡಬ್ಲ್ಯೂಎನ್ ಕೇಂದ್ರವನ್ನು ಸ್ಥಳಾಂತರಿಸಿ ತಾಲ್ಲೂಕು ಮಟ್ಟದಲ್ಲಿ ಇ–ಆಫೀಸ್‌ ಅನುಷ್ಠಾನಕ್ಕೆ ಅನುಕೂಲ ಮಾಡಿಕೊಡುವಂತೆ ಬೆಂಗಳೂರಿನ ಯೋಜನಾ ನಿರ್ದೇಶಕರಿಗೆ ಕೋರಲಾಗಿದೆ. ಮಸ್ಕಿ, ಸಿರವಾರ ತಾಲ್ಲೂಕು ಕಚೇರಿಯಲ್ಲಿ ಕೆಎಸ್‌ಡಬ್ಲ್ಯೂಎನ್ ಸ್ಥಾಪಿಸುವವರೆಗೆ ತಾತ್ಕಾಲಿಕವಾಗಿ ಟೈಪ್‌ –5 ಸಂಪರ್ಕ ಕಲ್ಪಿಸಿ ಇ–ಆಫೀಸ್‌ ಅನುಷ್ಠಾನಕ್ಕೆ ಅನುಕೂಲ ಮಾಡಲಾಗಿದೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಅವರು ತಹಶೀಲ್ದಾರ್‌ ಕಚೇರಿಗಳಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT