ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಾಂತ ಕುಲಪತಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ದೇಶನ

Last Updated 25 ಮೇ 2020, 13:06 IST
ಅಕ್ಷರ ಗಾತ್ರ

ರಾಯಚೂರು: ಕೃಷಿ ಆದಾಯ ಪ್ರಮಾಣಪತ್ರ ತಿ‌ದ್ದಿರುವ ಕ್ರಿಮಿನಲ್‌ ಅಪರಾಧಕ್ಕಾಗಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ವಿ.ಪಾಟೀಲ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್‌.ಎನ್‌.ಲಕ್ಷ್ಮಣಗೌಡ ಅವರು ಹಾಲಿ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಅವರಿಗೆ ನಿರ್ದೇಶಿಸಿ ಮೇ 21 ರಂದು ಪತ್ರ ಬರೆದಿದ್ದಾರೆ.

‘ಡಾ.ಬಿ.ವಿ.ಪಾಟೀಲ ಅವರು ತಮ್ಮ ಪುತ್ರ ವಿನಯ ಪಾಟೀಲ ಅವರಿಗೆ ಕೃಷಿ ಕೋಟಾದಡಿ ಬಿಎಸ್‌ಸಿ–ಕೃಷಿ ಪದವಿಗೆ ಅಕ್ರಮ ಪ್ರವೇಶ ಪಡೆದಿರುವುದು ವಿಶ್ವವಿದ್ಯಾಲಯದಿಂದ ಒದಗಿಸಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಸ್ಪಷ್ಟವಾಗಿದೆ. ಹೈಕೋರ್ಟ್‌ ಆದೇಶ ಅನುಸರಿಸಿ, ತಕ್ಷಣವೇ ವಿದ್ಯಾರ್ಥಿಗೆ ನೀಡಿರುವ ಪ್ರಮಾಣಪತ್ರಗಳನ್ನು ರದ್ದುಪಡಿಸಬೇಕು ಹಾಗೂ ಪದವಿ ಹಂತದಲ್ಲಿ ಮಾಡಿರುವ ವೆಚ್ಚ ಭರಿಸಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ಪ್ರಮಾಣಪತ್ರ ರದ್ದು ಆದೇಶ: ಕಾರ್ಯದರ್ಶಿ ನಿರ್ದೇಶನ ಆಧರಿಸಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಎಂ.ಜಿ.ಪಾಟೀಲ ಅವರು, ವಿನಯ ಪಾಟೀಲ ಅವರಿಗೆ ನೀಡಿದ್ದ ಪ್ರಮಾಣಪತ್ರಗಳನ್ನೆಲ್ಲ ರದ್ದುಪಡಿಸಿದ್ದಾರೆ. ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯವು ಮಾಡಿದ್ದ ₹10 ಲಕ್ಷ ವೆಚ್ಚ ಹಾಗೂ ಪ್ರಮಾಣಪತ್ರಗಳನ್ನು ಹಿಂತಿರುಗಿಸಲು ಒಂದು ವಾರ ಸಮಯಾಕಾಶ ನೀಡಿ ಆದೇಶ ಸೋಮವಾರ ಆದೇಶ ನೀಡಿದ್ದಾರೆ.

‘ಈ ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಮತ್ತು ತನಿಖೆಗಳೆಲ್ಲವೂ ಈ ಹಿಂದೆಯೇ ನಡೆದಿದ್ದವು. ಸರ್ಕಾರದ ಸೂಚನೆಯಂತೆ ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ಧ ದಾಖಲೆಗಳನ್ನು ಕಳುಹಿಸಲಾಗಿತ್ತು. ಈಗ ಕಾರ್ಯದರ್ಶಿ ನಿರ್ದೇಶನದಂತೆ ಕುಲಸಚಿವರು ಈಗಾಗಲೇ ಕ್ರಮ ಜರುಗಿಸುತ್ತಿದ್ದಾರೆ’ ಎಂದು ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ‘ಪ್ರಜಾವಾಣಿ’ ಪ್ರತಿಕ್ರಿಯೆ ನೀಡಿದರು.

ಕುಲಪತಿಯಾಗಿದ್ದ ಡಾ.ಬಿ.ವಿ.ಪಾಟೀಲ ಅವರು ಅಧಿಕಾರ ದುರುಪಯೋಗ ಮಾಡಿ ಅಕ್ರಮ ಪ್ರಮಾಣ ಸೃಷ್ಟಿಸಿ ಪುತ್ರನಿಗೆ ಬಿಎಸ್‌ಸಿ–ಕೃಷಿ ಪದವಿಗೆ ಪ್ರವೇಶ ಕೊಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಮಾರೆಪ್ಪ ಅವರು ಹೈಕೋರ್ಟ್‌ಗೆ 2018 ರಲ್ಲಿ ರಿಟ್‌ ಅರ್ಜಿ ಸಲ್ಲಿಸಿ ಅವಿರತ ಹೋರಾಟ ಮಾಡುತ್ತಾ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT